ಎಂ.ಎಸ್ ಸುಬ್ಬುಲಕ್ಷ್ಮೀ ಬಯೋಪಿಕ್
- ಭಾರತ ರತ್ನ ಎಂ.ಎಸ್. ಸುಬ್ಬುಲಕ್ಷ್ಮೀ ಅವರ ಬಯೋಪಿಕ್ನಲ್ಲಿ ಸಾಯಿ ಪಲ್ಲವಿ
- ಸಾಯಿ ಪಲ್ಲವಿ ಅವರ ಎಕ್ಸಿಟ್ ಬೆನ್ನಲ್ಲೇ ಕನ್ನಡದ ಸ್ಟಾರ್ ನಟಿಗೆ ಅವಕಾಶ?
- ಬಯೋಪಿಕ್ನಲ್ಲಿ ನಿಜಕ್ಕೂ ಕನ್ನಡದ ಬ್ಯೂಟಿಗೆ ಅವಕಾಶ ನೀಡಲಾಯ್ತಾ?
ಮುಂಬೈ: ಮಲಯಾಳಂ, ತೆಲುಗು ಮತ್ತು ತಮಿಳಿನಲ್ಲಿ ಅವಕಾಶಗಳ ಸುರಿಮಳೆಯನ್ನೇ ಪಡೆಯುವ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ, ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಬಾಲಿವುಡ್ಗೂ ಪದಾರ್ಪಣೆ ಮಾಡಲಿರುವ ನಟಿಗೆ ಭಾರತ ರತ್ನ ಎಂ.ಎಸ್. ಸುಬ್ಬುಲಕ್ಷ್ಮೀ ಅವರ ಬಯೋಪಿಕ್ ಚಿತ್ರವನ್ನು ಮಾಡುವ ಸುವರ್ಣಾವಕಾಶ ಒಲಿದು ಬಂದಿದ್ದು, ಹಲವರಿಗೆ ಗೊತ್ತೇ ಇದೆ. ಆದರೀಗ, ಆ ಅವಕಾಶ ನಟಿಯ ಕೈತಪ್ಪಿದೆ ಎಂದು ಸಿನಿ ಮೂಲಗಳು ತಿಳಿಸಿವೆ.
ಭಾರತ ರತ್ನ ಎಂ.ಎಸ್. ಸುಬ್ಬಲಕ್ಷ್ಮಿ ಅವರ ಜೀವನ ಚರಿತ್ರೆಯನ್ನು ಬೆಳ್ಳಿತೆರೆಗೆ ತರಲು ನಿರ್ದೇಶಕರು ಸಾಕಷ್ಟು ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದು, ದಿಗ್ಗಜ ಸಾಧಕಿಯ ಪಾತ್ರಕ್ಕೆ ಸಾಯಿ ಪಲ್ಲವಿ ಅವರನ್ನು ಆಯ್ಕೆ ಮಾಡಲಾಯಿತು. ಇದರ ಬಗ್ಗೆ ಈ ಹಿಂದೆ ಸಾಕಷ್ಟು ವರದಿಗಳು ಕೂಡ ಹೊರಬಿದ್ದಿವೆ. ಈ ಮಹತ್ವಾಕಾಂಕ್ಷೆಯ ಬಯೋಪಿಕ್ ಪ್ರಾಜೆಕ್ಟ್ ಅನ್ನು 'ಜೆರ್ಸಿ' ಖ್ಯಾತಿಯ ನಿರ್ದೇಶಕ ಗೌತಮ್ ತಿನ್ನನುರಿ ನಿರ್ದೇಶಿಸುತ್ತಿದ್ದಾರೆ. ಬಹುನಿರೀಕ್ಷಿತ ಚಿತ್ರದ ನಾಯಕಿ ಪಾತ್ರದಲ್ಲಿ ದಿಢೀರ್ ಬದಲಾವಣೆ ಸುದ್ದಿಯೊಂದು ಅನೇಕ ಸಿನಿಪ್ರಿಯರನ್ನು ಸದ್ಯ ಅಚ್ಚರಿಗೆ ದೂಡಿದೆ.
ಆರಂಭದಲ್ಲಿ, ಸಾಯಿ ಪಲ್ಲವಿ ತಮ್ಮ ನೋಟ ಮತ್ತು ಸರಳ ಅಭಿನಯದಿಂದಲೇ ಈ ಪಾತ್ರಕ್ಕೆ 100ಕ್ಕೆ 100 ನ್ಯಾಯ ಒದಗಿಸುತ್ತಾರೆ ಎಂದು ಚಿತ್ರತಂಡ ಭಾವಿಸಿತ್ತು. ಆದರೀಗ, ಅವರ ದಿನಾಂಕಗಳ ಸಮಸ್ಯೆಯಿಂದ ನಟಿಯನ್ನು ಬಿಗ್ ಪ್ರಾಜೆಕ್ಟ್ನಿಂದ ಕೈಬಿಟ್ಟಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಸಾಯಿ ಪಲ್ಲವಿ ಅವರ ಜಾಗಕ್ಕೆ ಕನ್ನಡದ ಸ್ಟಾರ್ ಬ್ಯೂಟಿ, 'ಕಾಂತಾರ' ಕನಕಾವತಿ ನಟಿ ರುಕ್ಮಿಣಿ ವಸಂತ್ ಈ ಸುವರ್ಣಾವಕಾಶ ಗಿಟ್ಟಿಸಿಕೊಂಡಿದ್ದಾರೆ ಎನ್ನಲಾಗಿದೆ.
ಕನ್ನಡದ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಮೂಲಕ ಭಾರೀ ಜನಪ್ರಿಯತೆ ಗಳಿಸಿದ ರುಕ್ಮಿಣಿ, ಬಳಿಕ ತಮಿಳು ಚಿತ್ರಗಳಲ್ಲಿಯೂ ನಟಿಸಿ, ಸೈಎನಿಸಿಕೊಂಡಿದ್ದಾರೆ. ಇತ್ತೀಚೆಗೆ, ಅವರು ನಟಿಸಿದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ 'ಕಾಂತಾರ ಚಾಪ್ಟರ್ 1' ಹೊಸ ಆಯಾಮ, ಖ್ಯಾತಿಯನ್ನೇ ತಂದುಕೊಟ್ಟಿದೆ. ಸಿನಿಮಾದ ಕೊನೆಯವರೆಗೂ ಕಾಣಿಸಿಕೊಳ್ಳುವ ರುಕ್ಮಿಣಿ, ರಾಜಕುಮಾರಿ ಕನಕಾವತಿ ಪಾತ್ರದಲ್ಲಿ ಸಿನಿಪ್ರೇಕ್ಷಕರ ಹುಬ್ಬೇರಿಸಿದ್ದಾರೆ. ತಮ್ಮ ನಟನೆ, ಆ್ಯಕ್ಷನ್ ಮತ್ತು ಸೌಂದರ್ಯದಿಂದಲೇ ನೋಡುಗರನ್ನು ಮೋಡಿ ಮಾಡಿರುವ ಕನ್ನಡದ ಚೆಲುವೆ ಪ್ರಸ್ತುತ ಟ್ರೆಂಡಿಂಗ್ ಪಟ್ಟಿಯಲ್ಲಿದ್ದಾರೆ.
ರುಕ್ಮಿಣಿ ವಸಂತ್ ಅವರ ನಟನೆ ಮತ್ತು ಸಿಂಪಲ್ ಲುಕ್ ಈ ಪಾತ್ರಕ್ಕೆ ಹೇಳಿ ಮಾಡಿಸಿದಂತಿದೆ ಎಂಬ ಭಾವನೆ ನಿರ್ದೇಶಕರಲ್ಲಿ ಮೂಡಿರಬಹುದು. ಹೀಗಾಗಿ, ಸಾಯಿ ಪಲ್ಲವಿ ಅವರ ಎಕ್ಸಿಟ್ ಬೆನ್ನಲ್ಲೇ ಅವರಿಗೆ ಬಯೋಪಿಕ್ನಲ್ಲಿ ನಟಿಸುವ ಅವಕಾಶ ನೀಡಿರಬಹುದು. ಈ ಕುರಿತು ಇಲ್ಲಿಯವರೆಗೆ ಯಾವುದೇ ಅಧಿಕೃತ ಘೋಷಣೆ ಕೂಡ ಹೊರಬಿದ್ದಿಲ್ಲ. ಇದು ನಿಜವೇ? ಸಾಯಿ ಪಲ್ಲವಿ ಅವರನ್ನು ಚಿತ್ರತಂಡದಿಂದ ಕೈಬಿಡಲಾಗಿದೆಯೇ? ಎಂಬುದರ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಏನು ಹೇಳಲಿದೆ ಎಂಬುದನ್ನು ಸದ್ಯ ಕಾದು ತಿಳಿಯಬೇಕಿದೆ,(ಏಜೆನ್ಸೀಸ್).