ಮಾರ್ನಮಿ 
ಸ್ಯಾಂಡಲ್‌ವುಡ್

Maarnami - ಇದೇ ತಿಂಗಳ 20ಕ್ಕೆ ಮಾರ್ನಮಿ ರಿಲೀಸ್​ ಫಿಕ್ಸ್​

Maarnami - ರಿತೀಶ್​ ಶೆಟ್ಟಿ ಚೊಚ್ಚಲ ಬಾರಿಗೆ ಆ್ಯಕ್ಷನ್​-ಕಟ್​ ಹೇಳಿರುವ, "ಗಿಣಿರಾಮ' ಖ್ಯಾತಿಯ ಕಿರುತೆರೆ ನಟ ರಿತ್ವಿಕ್​ ಮಠದ್​ ಮತ್ತು ಚೈತ್ರಾ ಜೆ. ಆಚಾರ್​ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸಿನಿಮಾ "ಮಾರ್ನಮಿ'. ಎಲ್ಲವೂ ಅಂದುಕೊಂಡಂತಾಗಿದ್ದರೆ ಸಿನಿಮಾ 2025ರ ನ.21ರಂದು ತೆರೆಗೆ ಬರಬೇಕಿತ್ತು. ಕಾರಣಾಂತರಗಳಿಂದ ಎರಡು ವಾರ ಮುಂದೂಡಿದ್ದ ಚಿತ್ರತಂಡ ಡಿ. 5ಕ್ಕೆ ರಿಲೀಸ್​ ದಿನಾಂಕ ಘೋಷಿಸಿತ್ತು. ಆದರೆ, ಆಗಲೂ ಬಿಡುಗಡೆ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಹೊಸ ರಿಲೀಸ್​ ದಿನಾಂಕ ಘೋಷಿಸಿದೆ. ಹೌದು, "ಮಾರ್ನಮಿ' ಇದೇ ತಿಂಗಳ 20ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಕರಾವಳಿ ಸಂಸತಿ, ಆಚರಣೆ, ಭಾಷೆ, ಹುಲಿವೇಷ ಸೇರಿ ಹಲವು ವಿಷಯಗಳು ಚಿತ್ರದಲ್ಲಿದ್ದು, ನಿರ್ದೇಶಕ ರಿತೀಶ್​ ಶೆಟ್ಟಿ, "ಈ ಹಿಂದೆ ರಿಲೀಸ್​ ಡೇಟ್​ ಅನೌನ್ಸ್​ ಮಾಡಿದ್ದಾಗ ಪ್ರಚಾರಕ್ಕೆ ಸಮಯ ಸಿಕ್ಕಿರಲಿಲ್ಲ. ಹೀಗಾಗಿ ಚಿತ್ರವನ್ನು ಜನರಿಗೆ ತಲುಪಿಸಲು ಸ್ವಲ್ಪ ಹೆಚ್ಚು ಸಮಯ ಬೇಕೆಂದು, ಮುಂದೂಡಿದ್ದೆವು. "ಮಾರ್ನಮಿ'ಯಲ್ಲಿ ಒಳ್ಳೆ ಕಥೆ ಇದೆ. ಹುಲಿ ವೇಷ, ಕರಾವಳಿ ಭಾಗದ ಪ್ರೇಮಕಥೆ, ಆ್ಯಕ್ಷನ್​, ಎಮೋಷನ್ಸ್​, ಸಂಬಂಧಗಳ ಕುರಿತ ಅಂಶಗಳಿವೆ' ಎಂದು ಹೇಳಿಕೊಂಡರು. ನಾಯಕ ರಿತ್ವಿಕ್​ ಮಠದ್​, "ಸಾಕಷ್ಟು ತಯಾರಿ ಮಾಡಿಕೊಂಡು ಈ ಚಿತ್ರದಲ್ಲಿ ನಟಿಸಿದ್ದೇನೆ. ಮನುಷ್ಯ ತಾಳ್ಮೆ ಕಳೆದುಕೊಂಡರೆ ಏನೆಲ್ಲಾ ಆಗುತ್ತೆ ಎನ್ನುವ ಹಲವು ಮುಖಗಳನ್ನು ತೋರಿಸುವ ಪ್ರಯತ್ನ ಮಾಡಿದ್ದೇವೆ. ಸುದೀಪ್​ ಸರ್​ ಚಿತ್ರಕ್ಕೆ ಬೆಂಬಲವಾಗಿ ನಿಂತಿರುವುದು ನಮ್ಮ ತಂಡದ ಶಕ್ತಿ ಹೆಚ್ಚಿಸಿದೆ' ಎಂದು ಸಂತಸ ಹಂಚಿಕೊಂಡರು. ನಿರ್ಮಾಪಕ ನಿಶಾಂತ್​, "ಮೊದಲು "ಮಾರ್ನಮಿ'ಯನ್ನು ಕನ್ನಡದಲ್ಲಿ ಬಿಡುಗಡೆ ಮಾಡಿ, ಪ್ರತಿಕ್ರಿಯೆ ನೋಡಿಕೊಂಡು ಪರಭಾಷೆಗಳಲ್ಲಿ ಡಬ್​ ಮಾಡುವ ಯೋಚನೆ ಇದೆ' ಎಂದರು.