ರಶ್ಮಿಕಾ ಜೋಡಿ(ಎಡ), ಕನ್ನಡದ ನಟ ರಿಷಬ್ ಶೆಟ್ಟಿ (ಬಲ) 
ಸ್ಯಾಂಡಲ್‌ವುಡ್

ಮಂತ್ರಾಲಯದಲ್ಲಿ 'ಡಿವೈನ್​ ಸ್ಟಾರ್'​; ರಶ್ಮಿಕಾ ಮಂದಣ್ಣ ಮದುವೆ ವಿಚಾರಕ್ಕೆ ರಿಷಬ್​ ಶೆಟ್ಟಿ ಹೇಳಿದ್ದು ಒಂದೇ ಪದ | Rishab Shetty

ಪ್ರಮುಖ ಮುಖ್ಯಾಂಶಗಳು

  • ರಾಯಚೂರಿನ ಮಂತ್ರಾಲಯಕ್ಕೆ ಭೇಟಿ ನೀಡಿದ ರಿಷಬ್ ಶೆಟ್ಟಿ
  • ರಾಯರ ದರ್ಶನ ಪಡೆದ ಡಿವೈನ್ ಸ್ಟಾರ್​
  • ಈ ವೇಳೆ ರಶ್ಮಿಕಾ ಮಂದಣ್ಣ ವಿಚಾರಕ್ಕೆ ರಿಷಬ್ ಹೇಳಿದ್ದು ಒಂದೇ ಪದ
ರಾಯಚೂರು: 'ಕಾಂತಾರ' ಸಿನಿಮಾಗಳ ಮೂಲಕ ನಮ್ಮ ಮಣ್ಣಿನ ಕಥೆಗಳನ್ನು ಇಡೀ ಜಗತ್ತಿಗೆ ಸಾರಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ, ಇಂದು ಮಂತ್ರಾಲಯಕ್ಕೆ ಭೇಟಿ ನೀಡಿದರು.
ಗುರುವೈಭವೋತ್ಸವ ಹಿನ್ನೆಲೆ ಮಂತ್ರಾಲಯಕ್ಕೆ ಭೇಟಿ ನೀಡಿದ ರಿಷಬ್ ಶೆಟ್ಟಿ, ಒಳ್ಳೆಯ ದಿನ ರಾಯರ ದರ್ಶನಕ್ಕೆ ಬಂದಿದ್ದೇನೆ ತುಂಬಾ ಸಂತಸವಿದೆ. ಯಾವಾಗಲೂ ದೇವರ ದರ್ಶನಕ್ಕೆ ಬರುತ್ತಲೇ ಇರ್ತಿನಿ. ಈಗ ಕೂಡ ಸಂದರ್ಭ ಕೂಡಿಕೊಂಡು ಬಂದಿದೆ. ಕಲಾವಿದರಿಗೆ ಒಂದು ಕಥೆ ಬಂದಾಗ ಪಾತ್ರವನ್ನು ನಿಭಾಯಿಸುವ ಅವಕಾಶ ಸಿಕ್ಕಾಗ ಒಳ್ಳೆಯ ನಿರ್ದೇಶಕರು, ನಿರ್ಮಾಪಕರು ಸಿಕ್ಕಾಗ ಚಿತ್ರವನ್ನು ಮಾಡುವ ಆಸೆ ಪ್ರತಿಯೊಬ್ಬ ಕಲಾವಿದರಿಗೆ ಇರುತ್ತೆ ಎಂದರು.

ಅಂಜನಾದ್ರಿಯಲ್ಲಿ 'ಜೈ ಹನುಮಾನ್​'

ಇಂತಹದ್ದೇ ಪಾತ್ರ ಮಾಡಬೇಕು ಎಂಬ ಕಾನ್ಸೆಪ್ಟ್ ಏನೂ ಇಲ್ಲ. ರಾಯರ ಕುರಿತು ಸಿನಿಮಾ ಮಾಡುವ ಬಗ್ಗೆ ಹೇಳುವುದು ತುಂಬಾ ಕಷ್ಟಕರ. ಮುಂದೆ ನೋಡೋಣ. 'ಜೈ ಹನುಮಾನ್' ಚಿತ್ರದ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ನಿನ್ನೆಯಷ್ಟೇ ಮುಹೂರ್ತ ಮಾಡಿದ್ದೇವೆ. ಇನ್ನೂ ಶೂಟಿಂಗ್ ಆಗಬೇಕು. ಮುಂದಿನ ದಿನಗಳಲ್ಲಿ ಜನರಿಗೆ ಟೀಸರ್, ಟ್ರೇಲರ್​ ಮೂಲಕ ಹಂತ ಹಂತವಾಗಿ ತಿಳಿಯುತ್ತೆ ಎಂದರು.

ಥ್ಯಾಂಕ್ಯೂ...

ಇನ್ನು ಚಿತ್ರದ ಬಗ್ಗೆ ಮಾತು ಮುಂದುವರಿಸಿದ ರಿಷಬ್, 'ಜೈ ಹನುಮಾನ್' ಹನುಮಂತನ ಕುರಿತಾಗಿ ಮೂಡಿಬರಲಿರುವ ಒಂದು ಸಿನಿಮಾ. ಈ ಚಿತ್ರವನ್ನು ಮಾಡ್ತಿದ್ದೀವಿ ಅಂದ್ರೆ, ಖಂಡಿತ ಒಂದು ಲೆಕ್ಕಾಚಾರ ಇರುತ್ತೆ. ಜನರಿಗೆ ಇಷ್ಟವಾಗುವಂತ ಚಿತ್ರ ಇದಾಗುತ್ತೆ ಅಂತ ಹೇಳಬಹುದು ಎಂದರು. ಇದೇ ಸಂದರ್ಭದಲ್ಲಿ ರಶ್ಮಿಕಾ ಮಂದಣ್ಣ ಮದುವೆ ವಿಚಾರ ಕೇಳುತ್ತಿದ್ದಂತೆ 'ಥ್ಯಾಂಕ್ಯೂ' ಎಂದ ರಿಷಬ್ ಶೆಟ್ಟಿ​, ಪ್ರತಿಕ್ರಿಯಿಸಲು ಇಷ್ಟವಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದು ಗಮನಾರ್ಹ.