ರಾಯಚೂರು: ಪ್ಯಾನ್ ಇಂಡಿಯಾ ಬ್ಲಾಕ್‌ಬಸ್ಟರ್ 'ಕಾಂತಾರ: ಚಾಪ್ಟರ್ 1' ಯಶಸ್ಸಿನ ನಂತರ ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರು ಇಂದು (ಡಿಸೆಂಬರ್ 24) ಕುಟುಂಬ ಸಮೇತ ಮಂತ್ರಾಲಯಕ್ಕೆ ಭೇಟಿ ನೀಡಿದ್ದಾರೆ.
ಶ್ರೀ ರಾಘವೇಂದ್ರ ಸ್ವಾಮಿ (ರಾಯರು) ದರ್ಶನ ಪಡೆದು ಧನ್ಯತೆ ಅನುಭವಿಸಿದ್ದಾರೆ.ಪತ್ನಿ ಪ್ರಗತಿ ಶೆಟ್ಟಿ ಹಾಗೂ ಇಬ್ಬರು ಮಕ್ಕಳೊಂದಿಗೆ ಆಗಮಿಸಿದ ರಿಷಬ್ ಶೆಟ್ಟಿ ಅವರು ಮೊದಲು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ವೃಂದಾವನದಲ್ಲಿ ದರ್ಶನ ಪಡೆದರು. ನಂತರ ಮಂಚಾಲಮ್ಮ ದೇವಿಯ ದರ್ಶನ ಮಾಡಿ, ರಾಯರ ವೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದರು.
ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರಿಂದ ಆಶೀರ್ವಚನ ಪಡೆದುಕೊಂಡ ರಿಷಬ್ ದಂಪತಿಗೆ ಫಲ-ಮಂತ್ರಾಕ್ಷತೆ ನೀಡಿ ಸ್ವಾಮೀಜಿ ಆಶೀರ್ವದಿಸಿದರು. ಇತ್ತೀಚೆಗೆ ತಿರುಪತಿ ತಿರುಮಲ ಸನ್ನಿಧಾನಕ್ಕೂ ಭೇಟಿ ನೀಡಿದ್ದ ರಿಷಬ್ ಶೆಟ್ಟಿ ಅವರು 'ಕಾಂತಾರ' ಸರಣಿಯ ಯಶಸ್ಸಿಗೆ ದೇವರ ಕೃಪೆಯನ್ನು ಕಾರಣವೆಂದು ಹಲವು ಬಾರಿ ಹೇಳಿಕೊಂಡಿದ್ದಾರೆ.
ಈಗ ಮಂತ್ರಾಲಯ ಭೇಟಿಯಿಂದ ಅವರ ಆಧ್ಯಾತ್ಮಿಕ ಜೀವನಕ್ಕೆ ಮತ್ತೊಂದು ಮೈಲುಗಲ್ಲು ಸೇರಿದೆ.ಅಭಿಮಾನಿಗಳು ಈ ಭೇಟಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಶುಭ ಹಾರೈಸುತ್ತಿದ್ದಾರೆ.