ಚಿತ್ರ: ರಿಲ್ಯಾಕ್ಸ್ ಆಗಿ...
ನಿರ್ದೇಶನ: ಶ್ರೀನಿವಾಸ ಮಂಡ್ಯ
ತಾರಾಗಣ: ಕೋಮಲ್ ಕುಮಾರ್, ಸೋನಲ್ ಮೊಂಟೇರೊ, ವಿನೋದ್ ಪ್ರಭಾಕರ್, ಅಚ್ಯುತ್ ಕುಮಾರ್ ಮತ್ತಿತರರು.
ರೇಟಿಂಗ್: 3
ಶಿವ ಸ್ಥಾವರಮಠ
ನಿರುದ್ಯೋಗಿ, ಬಡವ ಅಲೆಕ್ಸ್ನನ್ನು (ಕೋಮಲ್) ಅಪಹರಣ ಮಾಡಿ ದೊಡ್ಡ ಬಂಗಲೆಯಲ್ಲಿ ಕೂಡಿ ಹಾಕಲಾಗುತ್ತದೆ. ಅಲ್ಲಿ ಆತನಿಗೆ ಬೇಕಾದ ತಿಂಡಿ, ತಿನಿಸು, ಬಟ್ಟೆ ಸೇರಿ ಐಷಾರಾಮಿ ಬದುಕು ಸಿಗುತ್ತದೆ. ಇಷ್ಟೆಲ್ಲಾ ಇದ್ದರೂ ಆತನಿಗೆ ಬೇಕಾಗಿರುವುದು ಸ್ವಾತಂತ್ರ್ಯ. ಎಷ್ಟೇ ಬಾರಿ ಅಲ್ಲಿಂದ ಹೊರ ಎಸ್ಕೇಪ್ ಆಗಲು ಪ್ರಯತ್ನಿಸಿದರೂ ಆಗುವುದಿಲ್ಲ. 15 ದಿನಗಳ ಬಳಿಕ ಐಶ್ವರ್ಯಾ (ಸೋನಲ್) ಎಂಬ ಹುಡುಗಿಯನ್ನು ಅಪರಹಣ ಮಾಡಿ, ಅದೇ ಮನೆಯಲ್ಲಿ ಕೂಡಿ ಹಾಕಲಾಗುತ್ತದೆ. ಆಕೆ ಶ್ರೀಮಂತ ಸಚಿವರ ಮಗಳು. ಸಾಲದೆಂಬಂತೆ ಮೈತುಂಬಾ ಅಹಂಕಾರ. ಅದರ ನಡುವೆಯೇ ಹೊರಗೆ ಐಶ್ವರ್ಯಾ ನಾಪತ್ತೆಯಾದ ಸುದ್ದಿ ಜತೆಗೆ ಆಕೆಯನ್ನು ಅಲೆಕ್ಸ್ ಅಪಹರಣ ಮಾಡಿದ್ದಾನೆ ಎಂಬ ಚರ್ಚೆ ಶುರುವಾಗುತ್ತದೆ. ಒಂದೆಡೆ ಬಂಗಲೆಯಲ್ಲಿ ಬಂಧಿತ, ಇನ್ನೊಂದೆಡೆ ಅಪಹರಣಕಾರ ಎಂಬ ಹಣೆಪಟ್ಟಿ ಈ ಎರಡು ಸಂಕಟದಲ್ಲಿ ಅಲೆಕ್ಸ್ ಆತಂಕಕ್ಕೊಳಗಾಗುತ್ತಾನೆ. ಇದರ ಹಿಂದೆ ಮತ್ತೊಬ್ಬ ಸೂತ್ರಧಾರ ಇದ್ದಾನೆ ಎಂಬುದು ಅಲೆಕ್ಸ್ ಮತ್ತು ಐಶ್ವರ್ಯಾ ಗಮನಕ್ಕೆ ಬರುತ್ತದೆ. ಹಾಗಾದರೆ, ಆ ಸೂತ್ರಧಾರ ಯಾರು? ಅಲೆಕ್ಸ್ ಮತ್ತು ಐಶ್ವರ್ಯಾರನ್ನು ಐಷಾರಾಮಿ ಬಂಗಲೆಯಲ್ಲಿ ಆತ ಯಾಕೆ ಕೂಡಿ ಹಾಕಿದ? ತಿಳಿಯಲು ‘ರಿಲ್ಯಾಕ್ಸ್’ ಸಿನಿಮಾ ನೋಡಬೇಕು.
‘ರಿಲ್ಯಾಕ್ಸ್’ ಬಹುತೇಕ ಒಂದೇ ಬಂಗಲೆ, ಎರಡೇ ಪಾತ್ರಗಳ ಮಧ್ಯೆ ಸಾಗುವ ಕಥೆ. ಜತೆಗೆ ಶ್ರೀಮಂತ-ಬಡವ ಎಂಬ ಭೇದ ಭಾವ, ಮನುಷ್ಯನ ಅಹಂಕಾರ, ಪ್ರತಿಷ್ಠೆಗಳಿಗೆ ಉತ್ತರ ಕೊಡುವ ಪ್ರಯತ್ನವಾಗಿದೆ. ಕೆಲವೆಡೆ ನಗಿಸುವ ದೃಶ್ಯಗಳಿವೆ. ಒಂದೇ ಬಂಗಲೆಯಲ್ಲಿ ತಿರುಗು-ಮುರುಗ ಅದೇ ಪಾತ್ರಗಳು ಬಂದಾಗ ಸ್ವಲ್ಪ ನೀರಸ ಅನ್ನಿಸಬಹುದು. ಕೋಮಲ್ ಕುಮಾರ್ ತಮ್ಮ ಆಂಗಿಕ ಹಾವ-ಭಾವದಿಂದ ಪ್ರೇಕ್ಷಕರಿಗೆ ಕಚಗುಳಿ ನೀಡುವ ಮೂಲಕ ‘ರಿಲ್ಯಾಕ್ಸ್’ ಮೂಡ್ಗೆ ತರುತ್ತಾರೆ. ಸೋನಲ್ ಮೊಂಟೇರೊ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ವಿನೋದ್ ಪ್ರಭಾಕರ್ ಪಾತ್ರ ಹಾಗೂ ವಿಶೇಷತೆ ಏನೆಂಬುದು ಥಿಯೇಟರ್ನಲ್ಲಿಯೇ ನೋಡಿದರೆ ಚೆಂದ.