ತಾರಾಗಣ: ಬಲರಾಜವಾಡಿ, ಗೋಪಾಲ್ ದೇಶಪಾಂಡೆ, ಅಕ್ಷತಾ ಪಾಂಡವಪುರ, ಗೌತಮರಾಜ್, ಜಗದೀಶ್, ಆದಿತ್ಯ, ಮೇನಾ, ಆನಂದ್ ಮತ್ತಿತರರು
ಒಂದು ನೋಟು ಚಲಾವಣೆ ಅವಧಿಯಲ್ಲಿ ಅದೆಷ್ಟು ಕೈಗಳನ್ನು ಬದಲಿಸಿರುತ್ತೋ ಲೆಕ್ಕಕ್ಕೆ ಸಿಗುವುದಿಲ್ಲ. ಕೈಗಳ ಜತೆ ಜೀವನಗಳನ್ನೂ ಬದಲಿಸುತ್ತಾ ಸಾಗುವ ₹2000 ನೋಟಿನ ಕಥೆಯನ್ನು "ಆ ಒಂದು ನೋಟು' ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ರತ್ನತನಯ್. 2019ರಲ್ಲೇ ಸಿನಿಮಾ ರೆಡಿಯಾಗಿದ್ದರೂ, ಕಾರಣಾಂತರಗಳಿಂದ ಸಿನಿಮಾ ಬಿಡುಗಡೆ ತಡವಾಗಿದೆ. ಆದರೂ, ಈ ನೋಟಿನ ಜರ್ನಿ ಕುತೂಹಲಕಾರಿಯಾಗಿ ಮೂಡಿಬಂದಿದ್ದು, ನೋಡಿಸಿಕೊಂಡು ಹೋಗುವ ಗಟ್ಟಿತನವಿದೆ.
ಅನಾರೋಗ್ಯದಿಂದ ಬಳಲುತ್ತಿರುವ ಪುಟ್ಟ ಮಗನನ್ನು ಸರ್ಕಾರಿ ಆಸ್ಪತ್ರೆಗೆ ಬಡ ತಾಯಿಯೊಬ್ಬಳು (ಅಕ್ಷತಾ), ಹಣವಿಲ್ಲದ ಕಾರಣ ತನ್ನ ಕಿವಿಯೋಲೆಗಳನ್ನೇ ಮಾರಿ ₹2000 ಪಡೆಯುತ್ತಾಳೆ. ಗಿರವು ಅಂಗಡಿ ಸೇಠು ತಿಜೋರಿಯಿಂದ ತಾಯಿಯ ಕೈಸೇರುವ ಆ ನೋಟಿನ ಕರಾಳ ಪಯಣ ಅಲ್ಲಿಂದ ಆರಂಭವಾಗುತ್ತದೆ. ಆದರೆ, ಕಳ್ಳನೊಬ್ಬ (ಆನಂದ್) ಆಕೆಯಿಂದ ಹಣ ಕಿತ್ತುಕೊಂಡು ಓಡುತ್ತಾನೆ. ಆ ಹಣದಿಂದ ಇಸ್ಪೀಟ್ ಆಡಿ ಮೊದಲು ಗೆದ್ದು, ನಂತರ ಸೋಲುತ್ತಾನೆ. ಆ ನೋಟು ಇಸ್ಪೀಟ್ ಕ್ಲಬ್ ಮಾಲೀಕ ಗೋಪಿ (ಬಲರಾಜವಾಡಿ) ಕೈಸೇರುತ್ತದೆ. ಆತನದೋ ವೇಶ್ಯೆಯೊಬ್ಬಳ ಜತೆ ಅಕ್ರಮ ಸಂಬಂಧ. ಇಬ್ಬರಿಗೂ ಏಡ್ಸ್ ಇರುವುದು ತಿಳಿದು, ಮದುವೆಯಾಗುತ್ತಾರೆ. ಆಗ ಮಂಗಳಮುಖಿಯ ಕೈಸೇರುವ ನೋಟು, ನಂತರ ಬಾರ್ ಓನರ್, ಆತ್ಮಹತ್ಯೆ ಮಾಡಿಕೊಳ್ಳಲು ಸ್ಮಶಾನಕ್ಕೆ ಬರುವ ತರಕಾರಿ ವ್ಯಾಪಾರಿ, ಎಪಿಎಂಸಿ ಮಾರ್ಕೆಟ್ ಮಂಡಿ ವ್ಯಾಪಾರಿ, ರೈತ, ರೈತನ ಮಗ, ಕೆಲ ಕ್ರಿಮಿನಲ್ಗಳು, ಪೊಲೀಸ್, ಕಾರ್ ಮೆಕಾನಿಕ್... ಹೀಗೆ ಹಲವರ ಕೈಬದಲಿಸುತ್ತಾ ಹೇಗೆ ಸಮಸ್ಯೆಗಳನ್ನು ಸೃಷ್ಟಿಸುತ್ತಾ ಸಾಗುತ್ತದೆ ಎಂಬುದೇ "ಆ ಒಂದು ನೋಟಿನ' ಕಥೆ.
ಈ ಚಿತ್ರದ ಮೂಲಕ ರತ್ನತನಯ್ ಇಂಟರೆಸ್ಟಿಂಗ್ ಡ್ರಾಮಾ ನಿರೂಪಿಸಿದ್ದಾರೆ. ಕೆಲವೆಡೆ ನಿಧಾನ ಅಂತನ್ನಿಸಿದರೂ ಮುಂದೆ ಈ ನೋಟು ಯಾರ ಕೈ ಸೇರುತ್ತದೆ? ಅವರಿಗೆ ಏನು ಮಾಡುತ್ತದೆ? ಎಂಬ ಕುತೂಹಲವನ್ನು ಕೊನೆಯವರೆಗೂ ಉಳಿಸಿಕೊಂಡಿದ್ದಾರೆ. ಕಥೆ ಸಾಗಿದಂತೆ ನೋಟಿನ ಜರ್ನಿಯ ಜತೆಗೆ ಬರುವ ಪಾತ್ರಗಳು, ಅವುಗಳ ಹಿನ್ನೆಲೆ, ಉಪಕಥೆಗಳು ಅನಾವರಣವಾಗುತ್ತವೆ. ಚಿತ್ರಕಥೆ ಮತ್ತು ಹಿನ್ನೆಲೆ ಸಂಗೀತದ ಬಗ್ಗೆ ಇನ್ನೂ ಸ್ವಲ್ಪ ಗಮನ ಹರಿಸಬಹುದಿತ್ತು. ಆದರೂ, ಎಲ್ಲ ಪಾತ್ರಗಳೂ ಅಚ್ಚುಕಟ್ಟಾಗಿ ಮೂಡಿಬಂದಿದ್ದು, ನೋಡಿಸಿಕೊಂಡು ಹೋಗುತ್ತವೆ. ಒಟ್ಟಾರೆ, "ಆ ಒಂದು ನೋಟ'ನ್ನು ಒಮ್ಮೆ ನೋಡಲಡ್ಡಿಯಿಲ್ಲ.