ತೀರ್ಥರೂಪ ತಂದೆಯವರಿಗೆ 
ಸ್ಯಾಂಡಲ್‌ವುಡ್

Theertharoopa Thandeyavarige - ಸತ್ಯಾನ್ವೇಷಣೆಗೆ ಹೊರಟವನ ಆತ್ಮಾವಲೋಕನ

ಚಿತ್ರ: ತೀರ್ಥರೂಪ ತಂದೆಯವರಿಗೆ
ನಿರ್ದೇಶನ: ರಾಮೇನಹಳ್ಳಿ ಜಗನ್ನಾಥ
ತಾರಾಗಣ: ನಿಹಾರ್​ ಮುಕೇಶ್​, ರಚನಾ ಇಂದರ್​, ಸಿತಾರಾ, ರವೀಂದ್ರ ವಿಜಯ್​, ರಾಜೇಶ್​ ನಟರಂಗ, ಅಜಿತ್​ ಹಂಡೆ ಮತ್ತಿತರರು
"45' ಮತ್ತು "ಮಾರ್ಕ್​'ನಂತಹ ಆ್ಯಕ್ಷನ್​ ಥ್ರಿಲ್ಲರ್​ಗಳೊಂದಿಗೆ 2025 ಮುಗಿದಿದೆ. 2026ರ ಮೊದಲ ದಿನವೇ ರಿಲೀಸ್​ ಆಗಿರುವ ಫ್ಯಾಮಿಲಿ ಡ್ರಾಮಾ "ತೀರ್ಥರೂಪ ತಂದೆಯವರಿಗೆ' ಸ್ಟಾರ್​ಗಳ ಹೈ ಆಕ್ಟೇನ್​ ಆ್ಯಕ್ಷನ್​ಗಳ ಅಬ್ಬರದ ಹ್ಯಾಂಗೋವರ್​ನಿಂದ ಹೊರಬರಲು ಸಹಾಯವಾಗುವ ಎಳನೀರು ಅಥವಾ ಮಜ್ಜಿಗೆಯಂತಿದೆ! 2023ರಲ್ಲಿ ರಿಲೀಸ್​ ಆಗಿದ್ದ ಜಗನ್ನಾಥ ನಿರ್ದೇಶಿಸಿದ್ದ "ಹೊಂದಿಸಿ ಬರೆಯಿರಿ' ಐವರು ಎಂಜಿನಿಯರಿಂಗ್​ ವಿದ್ಯಾರ್ಥಿಗಳ ಜರ್ನಿಯ ಕುರಿತ ಕಥೆಯಾಗಿತ್ತು. ಇದೀಗ "ತೀರ್ಥರೂಪ ತಂದೆಯವರಿಗೆ' ಕೂಡ ಒಂದು ಜರ್ನಿಯ ಕಥೆಯಾಗಿದ್ದರೂ, ಇದು ನೀಡುವ ಅನುಭವ ಸಂಪೂರ್ಣ ವಿಭಿನ್ನವಾದುದು. ಪ್ರೇಕ್ಷಕರನ್ನೂ ಪಾತ್ರವನ್ನಾಗಿಸಿ ಯೋಚನೆಗೆ ದೂಡುವ ಗಟ್ಟಿತನವಿರುವ ಚಿತ್ರವಿದು.
ಆತ ವ್ಲಾಗರ್​ ಪೃಥ್ವಿ (ನಿಹಾರ್​). ಸೋಷಿಯಲ್​ ಮೀಡಿಯಾದಲ್ಲಿ 6.5 ಲಕ್ಷಕ್ಕೂ ಅಧಿಕ ಹಿಂಬಾಲಕರಿದ್ದಾರೆ. ಜತೆಯಲ್ಲಿ ನಾಲ್ವರು ಗೆಳೆಯರಿದ್ದಾರೆ. ಅಮ್ಮ ಜಾನಕಿ (ಸಿತಾರಾ) ಇದ್ದಾರೆ. ಆದರೂ, ಅಪ್ಪನಿಲ್ಲದ ಕೊರಗು ಆತನದು. ಅದರ ನಡುವೆ ಅದೇ ಊರಿನ ವಿಶ್ವನಾಥ್​ (ರಾಜೇಶ್​) ಮತ್ತು ತನ್ನ ತಾಯಿಯ ನಡುವಿನ ಆಪ್ತತೆಯಿಂದಾಗಿ, ಅಪ್ಪ ತೊರೆಯಲು ಅಮ್ಮನೇ ಕಾರಣ ಎಂಬ ಕೋಪ ಕೂಡ. ಹೀಗಾಗಿಯೇ ವ್ಲಾಗಿಂಗ್​ ಅಂತ ಊರೂರು ಅಲೆಯುವ ಪೃಥ್ವಿಗೆ ಅಮ್ಮ ಅಂದರೆ ಅಷ್ಟಕ್ಕಷ್ಟೇ. ಇಂತಹ ಪೃಥ್ವಿ ಜೀವನದಲ್ಲಿ ನಡೆಯುವ ಟನೆಯೊಂದು ಆತತಂದೆಯ ಹುಡುಕಾಟಕ್ಕೆ ಮುಂದಾಗಲು ಕಾರಣವಾಗುತ್ತದೆ. ಅಪ್ಪನನ್ನು ಹುಡುಕುತ್ತಾ ಮೊದಲು ಕೊಚ್ಚಿ, ನಂತರ ಮೇಘಾಲಯಕ್ಕೆ ಹೋಗುವ ಪೃಥ್ವಿಗೆ ಹೊರಗಿನ ಸತ್ಯಗಳ ಜತೆಜತೆಗೆ ತನ್ನೊಳಗಿನ ಸತ್ಯಗಳೂ ಅರಿವಾಗುತ್ತಾ ಹೋಗುತ್ತದೆ. ಹಾಗಾದರೆ ಪೃಥ್ವಿಗೆ ಆತನ ತಂದೆ ಸಿಗುತ್ತಾರಾ? ಆತನ ಅಪ್ಪ ದೂರವಾಗಲು ಕಾರಣವೇನು? ಸಿನಿಮಾ ನೋಡಿ.
ಜಗನ್ನಾಥ ಈ ಚಿತ್ರದ ಮೂಲಕ ಒಂದೊಳ್ಳೆ ್ಯಾಮಿಲಿ ಡ್ರಾಮಾ ಕಟ್ಟಿಕೊಟ್ಟಿದ್ದಾರೆ. ಕೆಲ ನ್ಯೂನ್ಯತೆಗಳ ನಡುವೆಯೂ ಸಮಾಜದ ಕಟ್ಟುಪಾಡುಗಳನ್ನು ಕದಡುವ, ಪ್ರೇಕ್ಷಕರ ಅಂತರಂಗ ಕೆಣಕುವ ಕಥೆಯಿದು. ನಿಧಾನವಾಗಿ ಆರಂಭವಾದರೂ, ಕಥೆ ಸಾಗಿದಂತೆ ಹೃದಯಕ್ಕಿಳಿಯುವ ಕಾರಣ ನೋಡುಗರಿಗೆ ಆಪ್ತವೆನಿಸುತ್ತದೆ. ಕೇರಳದ ಹಸಿರು, ಮೇಘಾಲಯದ ಗುಡ್ಡಗಳನ್ನು ಛಾಯಾಗ್ರಾಹಕ ದೀಪಕ್​ ಸುಂದರವಾಗಿ ಸೆರೆ ಹಿಡಿದಿದ್ದಾರೆ. ಜೋ ಕೋಸ್ಟಾ ಸಂಗೀತ ಚಿತ್ರಕ್ಕೆ ಪ್ಲಸ್​. ನಾಯಕ ನಿಹಾರ್​ ಮತ್ತಷ್ಟು ಪಳಗಿದರೆ ಚಿತ್ರರಂಗದಲ್ಲಿ ಉತ್ತಮ ಭವಿಷ್ಯವಿದೆ. ನಾಯಕಿ ರಚನಾ ಎಂದಿನಂತೆ ಮುದ್ದಾಗಿ ಮಿಂಚಿದ್ದಾರೆ. ರಾಜೇಶ್​ ನಟರಂಗ ಮತ್ತು ಸಿತಾರಾ ಪಾತ್ರಗಳು ಸೆಳೆಯುತ್ತವೆ. ರವೀಂದ್ರ ವಿಜಯ್​ ತಮ್ಮ ಪಾತ್ರವನ್ನು ಜೀವಿಸಿದ್ದಾರೆ. "ಹೊಂದಿಸಿ ಬರೆಯಿರಿ'ಯನ್ನು ಒಟಿಟಿಯಲ್ಲಿ ನೋಡಿ, ಥಿಯೇಟರ್​ನಲ್ಲಿ ನೋಡಬೇಕಿತ್ತು ಅಂತ ಬೇಸರಿಸಿಕೊಂಡವರಿಗೆ "ತೀರ್ಥರೂಪ ತಂದೆಯವರಿಗೆ' ಒಂದೊಳ್ಳೆ ಅವಕಾಶ ನೀಡಿದೆ!
ಸ್ಟಾರ್​ : 3.5