ಬೆಂಗಳೂರು: ನಟರಾದ ರಣಬೀರ್ ಕಪೂರ್, ಯಶ್, ನಟಿ ಸಾಯಿ ಪಲ್ಲವಿ ಅಭಿನಯದ ‘ರಾಮಾಯಣ: ಭಾಗ 1’ ರಿಲೀಸ್ ಆದ ಮೊದಲ ದಿನವೇ ಭರ್ಜರಿ ಓಪನಿಂಗ್ ಸಿಕ್ಕಿದೆ. ಗುರುವಾರ ಬೆಳಗ್ಗೆ 6 ಗಂಟೆಯಿಂದಲೇ ಶೋಗಳು ಆರಂಭಗೊಂಡಿದ್ದವು. ಮೊದಲ ದಿನಕ್ಕೆ 154 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿದೆ ಎಂದು ಬಾಕ್ಸಾಫೀಸ್ ಮೂಲಗಳು ತಿಳಿಸಿವೆ. ರಿಲೀಸ್ಗೆ ಮುನ್ನವೇ ಸಿನಿಮಾ 100 ಕೋಟಿ ರೂ. ಗಳಿಕೆ ಮಾಡಿತ್ತು. ಹಾಗೆಯೇ, ಮೊದಲ ದಿನದ ಸಂಜೆ ವೇಳೆಗೆ ದೇಶಾದ್ಯಂತ 54 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಹಿನ್ನೆಲೆಯಲ್ಲಿ ಸಿನಿಮಾದ ಒಟ್ಟು ಗಳಿಕೆ 154 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ರಿಲೀಸ್ ಆದ ಮೊದಲ ದಿನದಂದು ರಾಜ್ಯ ಸೇರಿ ಹಿಂದಿ ಭಾಷಾ ವಲಯದಿಂದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಡೀ ದೇಶಾದ್ಯಂತ 20 ಸಾವಿರಕ್ಕೂ ಅಧಿಕ ಶೋಗಳಲ್ಲಿ ಸಿನಿಮಾ ಪ್ರದರ್ಶನ ಕಂಡಿದೆ. ಹಿಂದಿ ಭಾಷಾ ವಲಯದಿಂದ 36 ಕೋಟಿ ರೂ, ರಾಜ್ಯದಿಂದ 5.67 ಕೋಟಿ ರೂ., ತೆಲುಗಿನಿಂದ 4.63 ಕೋಟಿ ರೂ., ತಮಿಳಿನಿಂದ 1.90 ಕೋಟಿ ರೂ. ಮತ್ತು ಮಲಯಾಳಂನಿಂದ 1.05 ಕೋಟಿ ರೂ. ಗಳಿಕೆ ಆಗಿದೆ. ಇನ್ನು ವಿದೇಶ ಮೊದಲ ದಿನದ ಗಳಿಕೆಯ ಅಂಕಿ-ಅಂಶಗಳು ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
‘ರಾಮಾಯಣ ಭಾಗ: 1’ ಚಿತ್ರವು ಮೊದಲ ದಿನವೇ 100 ಕೋಟಿ ರೂ.ಗೂ ಅಧಿಕ ಗಳಿಸಿದ್ದು, ಆ ಮೂಲಕ ನಟ ಯಶ್ ಹ್ಯಾಟ್ರಿಕ್ ಶತಕ ಬಾರಿಸಿದ್ದಾರೆ. ನಟನ ಹಿಂದಿನ ಸಿನಿಮಾಗಳಾದ ‘ಕೆಜಿಎಫ್ 2’ (159 ಕೋಟಿ), ‘ಟಾಕ್ಸಿಕ್’ (101 ಕೋಟಿ) ಕಲೆಕ್ಷನ್ ಮಾಡಿದ್ದವು. ಇದೀಗ ‘ರಾಮಾಯಣ’ ಕೂಡ ಈ ಪಟ್ಟಿಗೆ ಸೇರಿದೆ. ಈ ಸಾಧನೆ ಮಾಡಿದ ಭಾರತೀಯ ಚಿತ್ರರಂಗದ ಎರಡನೇ ನಟ ಅವರಾಗಿದ್ದಾರೆ. ತೆಲುಗು ನಟ ಪ್ರಭಾಸ್ (‘ಆದಿಪುರುಷ್’, ‘ಸಲಾರ್ 1’, ‘ಕಲ್ಕಿ 2898 ಎಡಿ) ಮೊದಲಿಗರು.