ಸೂರ್ಯ 
ಸ್ಯಾಂಡಲ್‌ವುಡ್

Surya Movie Review - ಹೊಸ ಪ್ರೀತಿ, ಅದೇ ರೀತಿ, ಜತೆಗೊಂದು ನೀತಿ

Surya Movie Review -
ಚಿತ್ರ: ಸೂರ್ಯ
ನಿರ್ದೇಶನ: ಸಾಗರ್​
ತಾರಾಗಣ: ಪ್ರಶಾಂತ್​, ಹರ್ಷಿತಾ, ರವಿಶಂಕರ್​, ಶ್ರುತಿ, ಪ್ರಮೋದ್​ ಶೆಟ್ಟಿ, ಪ್ರಸನ್ನ, ಬಾಲರಾಜವಾಡಿ ಮತ್ತಿತರರು
ಸೂರ್ಯ (ಪ್ರಶಾಂತ್​) ಅನಾಥ. ಸ್ಲಂನಲ್ಲಿ ತನ್ನಂತ ಹಲವು ಮಕ್ಕಳ ಜತೆ ಬೆಳೆಯುತ್ತಾನೆ. ಆಟೋ ಓಡಿಸಿ, ಟೀ ಮಾರಿ, ಹೋಟೆಲ್​ ವೇಯ್ಟರ್​ ಆಗಿ ಕೆಲಸ ಮಾಡಿಕೊಂಡು ಪ್ರತಿಷ್ಠಿತ ಕಾಲೇಜಿನಲ್ಲಿ ಎಂಜಿನಿಯರಿಂಗ್​ ಓದುತ್ತಿರುತ್ತಾನೆ. ಬೆಂಗಳೂರಿನ ಲ್ಯಾಂಡ್​ ಮಾಫಿಯಾ ಜತೆಗೆ ಹೆಣ್ಣುಮಕ್ಕಳ ಕಳ್ಳಸಾಗಣೆಯ ಕಿಂಗ್​ಪಿನ್​ ಲೇಔಟ್​ ಮಾರಿ (ರವಿಶಂಕರ್​) ಪುತ್ರಿ ಭೂಮಿಯೂ (ಹರ್ಷಿತಾ) ಅದೇ ಕಾಲೇಜಿಗೆ ಸೇರುತ್ತಾಳೆ. ಆದರೆ, ಶ್ರೀಮಂತೆ ಭೂಮಿಗೆ ಬಡ ಸೂರ್ಯನ ಕಂಡರೆ ಅಷ್ಟಕ್ಕಷ್ಟೇ. ಅದರ ನಡುವೆಯೂ ಅವರ ನಡುವೆ ಪ್ರೀತಿ ಚಿಗುರುತ್ತದೆ. ಭೂಮಿಗೆ ಅಪ್ಪನಿಗಿಂತ ಅತ್ತೆ ಡಾ. ಮಮತಾನೇ (ಶ್ರುತಿ) ಪ್ರಪಂಚ. ಮತ್ತೊಂದೆಡೆ ಸ್ಲಂನಲ್ಲಿ ಹೂ ಮಾರುವ ಹುಡುಗಿ ಪುಷ್ಪಿಗೆ ಸೂರ್ಯನೆ ಮೇಲೆ ಪ್ರೀತಿ. ಈ ತ್ರಿಕೋನ ಪ್ರೇಮಕಥೆ ಸಾಗಿದಂತೆ, ಸೂರ್ಯ, ಮಾರಿ, ಡಾ. ಮಮತಾ ಎಲ್ಲರ ಹಿನ್ನೆಲೆಗಳು ತೆರೆದುಕೊಳ್ಳುತ್ತವೆ. ಹಾಗಾದರೆ ಸೂರ್ಯನಿಗೂ ಮಾರಿಗೂ ಲಿಂಕ್​ ಏನು? ಸೂರ್ಯ ಪುಷ್ಪಿಯ ಪಾಲಾಗುತ್ತಾನಾ? ಭೂಮಿಗೆ ಬೆಳಕಾಗುತ್ತಾನಾ? ತಿಳಿಯಲು ಸಿನಿಮಾ ನೋಡಿ.
ಹೊಸ ನಾಯಕನನ್ನು ಪರಿಚಯಿಸಲು ನಿರ್ದೇಶಕ ಸಾಗರ್​ ಒಂದೊಳ್ಳೆ ತಾರಾಗಣವನ್ನೇ ಕಟ್ಟಿಕೊಂಡು ಬಂದಿದ್ದಾರೆ. ಕಥೆಯಲ್ಲಿ ಹೊಸತನವಿಲ್ಲದಿದ್ದರೂ, ಅದನ್ನು ವಿಭಿನ್ನ ಪಾತ್ರಗಳ ಮೂಲಕ ಜನರ ಮುಂದಿಟ್ಟಿರುವ ರೀತಿ ಹೊಸತು. ಚಿತ್ರಕಥೆ ಇನ್ನೊಂಚೂರು ಗಟ್ಟಿಯಾಗಿದ್ದರೆ "ಸೂರ್ಯ' ಒಂದೊಳ್ಳೆ ಕಮರ್ಷಿಯಲ್​ ಆ್ಯಕ್ಷನ್​ ರೊಮ್ಯಾಂಟಿಕ್​ ಸಿನಿಮಾ ಆಗುತ್ತಿತ್ತು. ರವಿಶಂಕರ್​, ಶ್ರುತಿ ಪಾತ್ರಗಳು ಚಿತ್ರದ ಹೈಲೈಟ್​. ಜತೆಗೆ ಕರಾವಳಿಯ ಪ್ರಮೋದ್​ ಶೆಟ್ಟಿ ಇಲ್ಲಿ ವಾಂಡ್​ ಬಸು ಎಂಬ ಪಕ್ಕಾ ಜವಾರಿ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಇಂತಹ ದಿಗ್ಗಜರ ನಡುವೆ ನಾಯಕ ಮತ್ತು ನಾಯಕಿಗೆ ಇನ್ನಷ್ಟು ತಯಾರಿ ಬೇಕಿತ್ತು ಅಂತನ್ನಿಸಿದರೂ ಆಶ್ಚರ್ಯವಿಲ್ಲ. ನೃತ್ಯನಿರ್ದೇಶನ ಅಷ್ಟಕ್ಕಷ್ಟೇ ಅನ್ನಿಸಿದರೂ, ಮನುರಾಜ್​ ಡಿ.ಬಿ. ಹಳ್ಳಿ ಛಾಯಾಗ್ರಹಣದ ಮೂಲಕ ಹಾಡುಗಳನ್ನು ಅಂದವಾಗಿಸಿದ್ದಾರೆ. ಆ್ಯಕ್ಷನ್​ ಸನ್ನಿವೇಶಗಳು ಮತ್ತು ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾಗಿ ಮೂಡಿಬಂದಿವೆ.