ರಂಗಭೂಮಿಯಲ್ಲಿ ಪಳಗಿದವರು ಚಿತ್ರರಂಗಕ್ಕೆ ಬಂದಾಗ ರಂಗಭೂಮಿಗೆ ಗುಡ್ಬೈ ಹೇಳುವುದು ಸಾಮಾನ್ಯ. ಹಾಗೇ ಕಿರುತೆರೆ ತಾರೆಯರು ಸಹ ಸಿನಿಮಾಗೆ ಎಂಟ್ರಿ ಕೊಟ್ಟ ಬಳಿಕ ಧಾರಾವಾಹಿಗಳಿಂದ ದೂರ ಉಳಿಯುವುದು ಕೂಡ ಕಾಮನ್. ಹಾಗೇ ಬೆಳ್ಳಿತೆರೆಯನ್ನೇ ನಂಬಿರುವ ಕೆಲ ಸೆಲೆಬ್ರಿಟಿಗಳು ಇದುವರೆಗೂ ವೆಬ್ಸರಣಿಗಳ ಕಡೆ ಮುಖ ಕೂಡ ಮಾಡಿಲ್ಲ. ಅವರ ನಡುವೆ ಈ ಮೂರೂ ಮಾಧ್ಯಮಗಳಲ್ಲಿ ಕನ್ನಡದ ನಟನೊಬ್ಬ ಬಿಜಿಯಾಗಿರುವುದು ವಿಶೇಷ. ಅವರೇ ಪ್ರಮೋದ್ ಶೆಟ್ಟಿ. ಹೌದು, ನಾಯಕನಾಗಿ "ಶಭಾಷ್ ಬಡ್ಡಿಮಗ್ನೆ', "ಲಾಫಿಂಗ್ ಬುದ್ಧ' ಸೇರಿ 80ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಪ್ರಮೋದ್ ಸದ್ಯ ರಂಗಭೂಮಿ, ಧಾರಾವಾಹಿ, ಸಿನಿಮಾ, ವೆಬ್ಸರಣಿ ಜತೆಗೆ ವರ್ಟಿಕಲ್ಸ್ ಮತ್ತು ಮೈಕ್ರೋಸಿರೀಸ್ಗಳಲ್ಲೂ ಬಿಜಿಯಾಗಿದ್ದಾರೆ. "ಸದ್ಯ ನಾಯಕನಾಗಿ "ಕೌಸ್ತುಭ' ಮತ್ತು "ಎನ್ಎಚ್ 66' ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ವೆಬ್ಸರಣಿಯೊಂದರ ಕಥೆ ಓಕೆ ಆಗಿದ್ದು, ಚಿತ್ರೀಕರಣ ಪ್ರಾರಂಭಿಸಿದ್ದೇವೆ. ಇನ್ನಷ್ಟೇ ಅದರ ಬಗ್ಗೆ ಅಧಿಕೃತ ಘೋಷಣೆಯಾಗಬೇಕಿದೆ. ಜೀನವರು ಒಂದು, ಎರಡು ನಿಮಿಷಗಳ ಬುಲೆಟ್ ಸಿರೀಸ್ ಮತ್ತು ಮೈಕ್ರೋ ಸಿರೀಸ್ ನಿರ್ಮಿಸಲು ಆರ್ ನೀಡಿದ್ದು, ಸದ್ಯ ಚರ್ಚೆ ನಡೆಯುತ್ತಿದೆ. ಪತ್ನಿ ಸುಪ್ರೀತಾ "ಅಣ್ಣಯ್ಯ' ಧಾರಾವಾಹಿ ನಿರ್ಮಾಣದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಇನ್ನೊಂದು ತಿಂಗಳಲ್ಲಿ ಹೊಸ ಧಾರಾವಾಹಿ ಲಾಂಚ್ ಮಾಡಲಿದ್ದೇವೆ. ನಮ್ಮ ಬ್ಯಾನರ್ನಲ್ಲೇ ಹೊಸ ಸಿನಿಮಾ ನಿರ್ಮಿಸುತ್ತಿದ್ದು, 15 ದಿನಗಳ ಚಿತ್ರೀಕರಣ ಮಾಡಿದ್ದೇನೆ. ರಂಗಸೌರಭ ಮೂಲಕ ರಂಗಭೂಮಿಯಲ್ಲೂ ಸಕ್ರಿಯನಾಗಿದ್ದೇನೆ. "ಗಂಗಾವತರಣ' ನಾಟಕದ 98 ಶೋಗಳಾಗಿದ್ದು, ಮೈಸೂರಿನಲ್ಲಿ 99ನೇ ಶೋ ಆಯೋಜಿಸಿ, ಇದೇ ಜೂನ್ನಲ್ಲಿ ಚೌಡಯ್ಯದಲ್ಲಿ 100ನೇ ಶೋ ಮಾಡುವ ಪ್ಲಾನ್ ಇದೆ. ರಂಗಭೂಮಿ, ಸಿನಿಮಾ, ಧಾರಾವಾಹಿ, ವೆಬ್ಸರಣಿ, ಮೈಕ್ರೋ ಸಿರೀಸ್.. ಹೀಗೆ ಎಲ್ಲವೂ ನನಗಿಷ್ಟ. ಹೀಗಾಗಿ ಎಲ್ಲೆಲ್ಲಿ ಹೇಗೆ ಕೆಲಸ ಮಾಡಬಹುದು ಎಂಬುದನ್ನು ನೋಡಿಕೊಂಡು ಸಕ್ರಿಯನಾಗಿದ್ದೇನೆ. ಖುಷಿಯಿದೆ' ಎಂದು ಸಂತಸ ವ್ಯಕ್ತಪಡಿಸುತ್ತಾರೆ ಪ್ರಮೋದ್ ಶೆಟ್ಟಿ.
ಎಲ್ಲವೂ ಕಷ್ಟವೇ!
ಹೀಗೆ ಎಲ್ಲೆಡೆ ಸಕ್ರಿಯರಾಗಿರುವ ಪ್ರಮೋದ್, "ಸಿನಿಮಾ ಹೆಚ್ಚು ಕಷ್ಟ' ಎನ್ನುತ್ತಾರೆ. "ಹಾಕುವ ಬಂಡವಾಳ ವಾಪಸ್ ಬರುತ್ತಾ ಗ್ಯಾರಂಟಿ ಇರುವುದಿಲ್ಲ. ಬೆಂಗಳೂರಿನ ವಾತಾವರಣವಿದ್ದಂತೆ ಚಳಿ, ಮಳೆ, ಬಿಸಿಲು ಯಾವಾಗ ಹೇಗಿರುತ್ತೋ ಹೇಳುವುದು ಕಷ್ಟ. ಯುದ್ಧ, ಐಪಿಎಲ್, ಮಳೆ, ಎಲೆಕ್ಷನ್... ಕೆಲವೊಮ್ಮೆ ಕಾರಣಗಳೇ ಇರುವುದಿಲ್ಲ. ಅಲ್ಲೆಲ್ಲೋ ಬಾಂಬ್ ಬಿತ್ತು, ಇಲ್ಲಿ ಸಿನಿಮಾ ಓಡಲ್ಲ. ಆದರೆ, ಧಾರಾವಾಹಿಯಲ್ಲಿ ಹೆಚ್ಚು ಲಾಭ ಇಲ್ಲದಿದ್ದರೂ, ಕಳೆದುಕೊಳ್ಳುವ ಭಯವಿಲ್ಲ' ಎನ್ನುತ್ತಾರೆ.
ಖಾಕಿಗೆ ಬ್ರೇಕ್
ಇದುವರೆಗೆ ಸುಮಾರು 80 ಚಿತ್ರಗಳಲ್ಲಿ ಪ್ರಮೋದ್ ನಟಿಸಿದ್ದು, ಅವುಗಳಲ್ಲಿ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿಯೇ ಸದ್ಯ ಖಾಕಿಗೆ ಬ್ರೇಕ್ ನೀಡಿರುವುದಾಗಿ ಹೇಳುವ ಅವರು, ""ಕೌಸ್ತುಭ' ಚಿತ್ರದ ಬಳಿಕ ಮತ್ತೆ ನಾನು ಪೊಲೀಸ್ ಪಾತ್ರ ಒಪ್ಪಿಲ್ಲ. ವಿಭಿನ್ನ ಜಾನರ್ಗಳಲ್ಲಿ ನಟಿಸಬೇಕು ಅಂತ ಅಂದುಕೊಂಡಿದ್ದೇನೆ. "ಎನ್ಎಚ್ 66'ರಲ್ಲಿ ಕ್ಯಾಬ್ ಡೆವರ್ ಆಗಿ ಕಾಣಿಸಿಕೊಳ್ಳಲಿದ್ದೇನೆ. ಜತೆಗೆ ತಮಿಳಿನ "ಸನ್ನಿಧಾನಂ ಪಿ.ಒ.' ಚಿತ್ರದಲ್ಲಿ ಯೋಗಿ ಬಾಬು ಸಹೋದರನ ಪಾತ್ರದಲ್ಲಿ ನಟಿಸಿದ್ದೇನೆ. ಮಲಯಾಳಂನಲ್ಲಿ ಇನ್ನೊಂದು ಸಿನಿಮಾ ಅವಕಾಶ ಬಂದಿದೆ. ಜತೆಗೆ ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ವೆಬ್ಸರಣಿಗಳಲ್ಲಿ ಆರ್ಗಳು ಬಂದಿವೆ. ಸದ್ಯಕ್ಕೆ ಮಾತುಕತೆ ನಡೆಯುತ್ತಿದೆ' ಎನ್ನುತ್ತಾರೆ.