ಬಹುಭಾಷಾ ನಟ ಪ್ರಕಾಶ್ ರಾಜ್ಗೆ ಮಾತೃ ವಿಯೋಗ: ಇಂದು ಬೆಂಗಳೂರಿನಲ್ಲಿ ಅಂತ್ಯಕ್ರಿಯೆ! Prakash Raj
- ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ಕುಟುಂಬ ತೀವ್ರ ಶೋಕದಲ್ಲಿದೆ
- ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ರಾಜ್ (86) ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ
- ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಸ್ವರ್ಣಲತಾ ಬೆಂಗಳೂರಿನ ನಿವಾಸದಲ್ಲಿ ನಿಧನರಾದರು
- ಅಂತ್ಯಕ್ರಿಯೆ ಇಂದು ಸಂಜೆ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ
Prakash Raj : ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ಕುಟುಂಬ ತೀವ್ರ ಶೋಕದಲ್ಲಿದೆ. ಅವರ ತಾಯಿ ಸ್ವರ್ಣಲತಾ ರಾಜ್ (86) ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಕೆಲವು ಸಮಯದಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಸ್ವರ್ಣಲತಾ ಅವರು ಇಂದು ಬೆಳಗ್ಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾದರು. ಅವರ ಅಂತ್ಯಕ್ರಿಯೆ ಇಂದು ಸಂಜೆ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ತಾಯಿಯನ್ನು ಕಳೆದುಕೊಂಡು ಪ್ರಕಾಶ್ ರಾಜ್ ಅವರು ತೀವ್ರ ದುಃಖದಲ್ಲಿದ್ದಾರೆ.
ಸ್ವರ್ಣಲತಾ ಅವರ ನಿಧನಕ್ಕೆ ಅನೇಕ ಚಲನಚಿತ್ರ ಗಣ್ಯರು ಮತ್ತು ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ. ಈ ಕಷ್ಟಕಾಲದಲ್ಲಿ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಕಾಶ್ ರಾಜ್ ಕುಟಂಬಕ್ಕೆ ಸಾಂತ್ವಾನದ ಮಾತುಗಳನ್ನಾಡಿದ್ದಾರೆ.
ಅಂದಹಾಗೆ, ಕನ್ನಡ ಮೂಲದ ಪ್ರಕಾಶ್ ರಾಜ್ ಅವರು ಕೇವಲ ಸಿನಿಮಾ ನಟರಲ್ಲ, ಅವರು ನಿರ್ದೇಶಕ, ನಿರ್ಮಾಪಕ, ಟಿವಿ ನಿರೂಪಕ ಮತ್ತು ರಾಜಕಾರಣಿಯೂ ಹೌದು. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಚಲನಚಿತ್ರಗಳಲ್ಲಿ ತಮ್ಮ ವಿಶಿಷ್ಟ ಅಭಿನಯಕ್ಕೆ ಹೆಸರುವಾಸಿಯಾದ ಪ್ರಕಾಶ್ ರಾಜ್, 5 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, 8 ನಂದಿ ಪ್ರಶಸ್ತಿಗಳು, 8 ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳು, 6 ಫಿಲ್ಮ್‌ಫೇರ್ ಪ್ರಶಸ್ತಿಗಳು, 4 SIIMA ಪ್ರಶಸ್ತಿಗಳು, 3 ವಿಜಯ್ ಪ್ರಶಸ್ತಿಗಳು ಮತ್ತು ಅವರ ಅತ್ಯುತ್ತಮ ನಟನಾ ಪ್ರತಿಭೆಗಾಗಿ ಇನ್ನೂ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಪ್ರಕಾಶ್ ರೈ ಅವರು 1965, ಮಾರ್ಚ್ 26ರಂದು ಬೆಂಗಳೂರಿನಲ್ಲಿ ತುಳು ಮೂಲದ ತಂದೆ ಮತ್ತು ಕನ್ನಡ ಮೂಲದ ತಾಯಿಗೆ ಜನಿಸಿದರು. ಅವರು ಸೇಂಟ್ ಜೋಸೆಫ್ಸ್ ಇಂಡಿಯನ್ ಹೈಸ್ಕೂಲ್‌ನಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿ, ಸೇಂಟ್ ಜೋಸೆಫ್ಸ್ ಕಾಲೇಜ್ ಆಫ್ ಕಾಮರ್ಸ್ ಸೇರಿದರು. ಆಗ ಪ್ರಸಿದ್ಧ ನಟಿ ಗೀತಾ ಅವರು ಪ್ರಕಾಶ್ ರೈ ಅವರನ್ನು ಪ್ರಸಿದ್ಧ ತಮಿಳು ಚಲನಚಿತ್ರ ನಿರ್ದೇಶಕ ಕೆ. ಬಾಲಚಂದರ್ ಅವರಿಗೆ ಪರಿಚಯಿಸಿದರು. ಅವರ ಸಲಹೆಯ ಮೇರೆಗೆ ಪ್ರಕಾಶ್ ಅವರು ತಮ್ಮ ಉಪನಾಮವನ್ನು ರೈನಿಂದ ರಾಜ್ ಎಂದು ಬದಲಾಯಿಸಿಕೊಂಡರು. ಅಂದಿನಿಂದ ಅವರನ್ನು ಪ್ರಕಾಶ್ ರಾಜ್ ಎಂದು ಕರೆಯಲಾಗುತ್ತದೆ. 1994 ರಲ್ಲಿ ಲಲಿತಾ ಕುಮಾರಿ ಅವರನ್ನು ವಿವಾಹವಾದರು. ಅವರಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನಿದ್ದಾರೆ. ಮಗನ ಮರಣದ ನಂತರ, ಪ್ರಕಾಶ್ ರಾಜ್ ಅವರು ತಮ್ಮ ಹೆಂಡತಿಯಿಂದ ದೂರವಾದರು. ಇದಾದ ಬಳಿಕ, 2010ರಲ್ಲಿ ನೃತ್ಯ ಸಂಯೋಜಕಿ ಪೋನಿ ವರ್ಮಾ ಅವರನ್ನು ವಿವಾಹವಾದರು.
ಸಿನಿಮಾ ವಿಚಾರಕ್ಕೆ ಬಂದರೆ, ಪ್ರಕಾಶ್ ರಾಜ್ ಅವರು ಈಗ ಪ್ರಭಾಸ್ ನಟಿಸಲಿರುವ ಮುಂಬರುವ ಚಿತ್ರ ಸ್ಪಿರಿಟ್‌ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, (ಏಜೆನ್ಸೀಸ್).