ಬೆಂಗಳೂರು: ರಣವೀರ್ ಸಿಂಗ್ ಅಭಿನಯದ ಧುರಂಧರ್-2 ದಿ ರಿವೇಂಜ್ ಸಿನಿಮಾಗೆ ವಿಶ್ವದಾದ್ಯಂತ ಭರ್ಜರಿ ರೆಸ್ಪಾನ್ಸ್ ಕೇಳಿ ಬರುತ್ತಿದೆ. ಇದಕ್ಕೆ ಟಾಲಿವುಡ್ ನಟರಾದ ಅಲ್ಲು ಅರ್ಜುನ್, ಮಹೇಶ್ ಬಾಬು, ವಿಜಯ ದೇವರಕೊಂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಹಿರಿಯ ನಟ ಪ್ರಕಾಶ್ ರಾಜ್(Prakash Rai) ಮಾತ್ರ ಭಿನ್ನವಾಗಿ ಅಭಿಪ್ರಾಯ ಹಂಚಿಕೊಂಡು ಸದ್ಯ ಸುದ್ದಿಯಲ್ಲಿದ್ದಾರೆ.
ಧುರಂಧರ್ -2 ಸಿನಿಮಾ ಕ್ಷೇತ್ರದಲ್ಲಿ ಪರ-ವಿರೋಧದ ಚರ್ಚೆಗೆ ಗ್ರಾಸವಾಗಿದೆ. ಟಾಲಿವುಡ್ನ ಸಿನಿ ತಾರೆಯರು ಈ ಚಿತ್ರವನ್ನು ಹಾಡಿ ಹೊಗಳುತ್ತಿದ್ದರೆ. ಇತ್ತ ಸ್ಯಾಂಡಲ್‌ವುಡ್ ಕ್ವೀನ್ ರಮ್ಯ ಹಿಂಸಾಚಾರ ಇರುವ ಈ ಚಿತ್ರವನ್ನು ನೋಡಲು ಹೆಚ್ಚಿನ ಸಹನೆಯನ್ನು ಬೇಡುತ್ತದೆ ಎಂದರು. ಇನ್ನು ಪ್ರಕಾಶ್ ರಾಜ್ ನಾನು ದೂರ ಇರುತ್ತಿದ್ದೇನೆ ಎಂದು ಟ್ವೀಟ್ ಮಾಡಿ ಸಿನಿ ಪ್ರಿಯರ ಟೀಕೆಗೆ ಒಳಗಾಗಿದ್ದಾರೆ.
ಪ್ರಕಾಶ್ ರಾಜ್ ಏನಂದ್ರು?
ಪ್ರಕಾಶ್ ರಾಜ್ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ 1996ರ 'ಹಮ್ ದೋನೋ' ಚಿತ್ರದ ಖ್ಯಾತ ಗೀತೆ 'ಅಭಿ ನಾ ಜಾವೋ ಛೋಡ್ ಕರ್' ರೇಡಿಯೋದಲ್ಲಿ ಕೇಳಿಬರುತ್ತಿದೆ. ಇದಕ್ಕೆ ಅವರು, "ನಾನು 'ಧುರಂಧರ್' ಸಿನಿಮಾದಿಂದ ತುಂಬಾ ದೂರ ಉಳಿದಿದ್ದೇನೆ" ಎಂಬ ಕ್ಯಾಪ್ಷನ್ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ವಿವಾದದ ಕಿಡಿ ಹೊತ್ತಿದ್ದು 'ಜನನಾಯಗನ್' ಚಿತ್ರದ ನಟ ವೆಲ್ಲು ಅವರು ಮಾಡಿದ ಪೋಸ್ಟ್‌ನಿಂದ. "ಧುರಂಧರ್ ಚಿತ್ರವನ್ನು ದಕ್ಷಿಣದ ಸ್ಟಾರ್‌ಗಳಾದ ಅಲ್ಲು ಅರ್ಜುನ್, ಜೂನಿಯರ್ ಎನ್‌ಟಿಆರ್ ಮತ್ತು ವಿಜಯ್ ದೇವರಕೊಂಡ ಅವರು ಮನಸಾರೆ ಹೊಗಳಿದ್ದಾರೆ. ಆದರೆ ಬಾಲಿವುಡ್‌ನ ಒಬ್ಬರಾದರೂ ಈ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆಯೇ? ಹಾಗಿದ್ದರೆ ನನಗೆ ಟ್ಯಾಗ್ ಮಾಡಿ" ಎಂದು ವೆಲ್ಲು ಸವಾಲು ಹಾಕಿದ್ದರು.
ಈ ಪೋಸ್ಟ್ ಅನ್ನು ರೀ-ಟ್ವೀಟ್ ಮಾಡಿರುವ ಪ್ರಕಾಶ್ ರಾಜ್, ಬಾಲಿವುಡ್ ಮೌನವನ್ನು ಲೇವಡಿ ಮಾಡುವುದರ ಜೊತೆಗೆ ದಕ್ಷಿಣದ ನಟರಿಗೂ ಟಾಂಗ್ ಕೊಟ್ಟಿದ್ದಾರೆ. "ಸಿನಿಮಾದ ಬಗ್ಗೆ ಒತ್ತಾಯಪೂರ್ವಕವಾಗಿ ಅಥವಾ ಬಲವಂತವಾಗಿ ಮೆಚ್ಚುಗೆ ವ್ಯಕ್ತಪಡಿಸುವ ಲಕ್ಷಣಗಳು ಈಗ ದಕ್ಷಿಣ ಭಾರತದ ನಟರಿಗೂ ತಟ್ಟುತ್ತಿದೆ" ಎಂದು ಬರೆಯುವ ಮೂಲಕ, ಸ್ಟಾರ್ ನಟರು ಪ್ರಚಾರಕ್ಕಾಗಿ ಪರಸ್ಪರ ಸಿನಿಮಾಗಳನ್ನು ಹೊಗಳುತ್ತಿರುವುದನ್ನು ಅವರು ವ್ಯಂಗ್ಯವಾಡಿದ್ದಾರೆ.
ಜರ್ಮನ್ನಲ್ಲಿ ನೆಲೆಸಿರುವ ಭಾರತೀಯ ಮೂಲದ ಯೂಟ್ಯೂಬರ್ ಧ್ರುವ ರಾಥೀ ಅವರು ಸಹ ಧುರಂಧರ್ ಸಿನಿಮಾದ ನಿರ್ದೇಶಕರನ್ನು ಬಿಜೆಪಿಯ ಪ್ರಚಾರಕ ಎಂದಿದ್ದಾರೆ. ನಾನು ಧುರಂಧರ್ ಮೊದಲ ಭಾಗ ರಿಲೀಸ್ ಆದಾಗಲೇ ತಿಳಿಸಿದ್ದೆ. ಬಿಜೆಪಿ ಪ್ರಚಾರಕ ಎಂದು ನಿಮಗೆ ಅದು ನೆನಪಿದೆಯೇ. ಈಗಲೂ ನಿಮ್ಮ ಕೆಲಸವನ್ನು ಚೆನ್ನಾಗಿಯೇ ಮಾಡಿದ್ದೀರಲ್ಲ ಎಂದು ಹೇಳಿದ್ದಾರೆ, (ಏಜೆನ್ಸೀಸ್).