ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್
- ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬ ಗಾದೆ ಮಾತು ಸಿನಿಮಾ ರಂಗದಲ್ಲಿ ಪೈರಸಿ ವಿಚಾರಕ್ಕೆ ಸೂಕ್ತ
- ಕೋಟಿಗಟ್ಟಲೆ ಹಣ ವ್ಯಯಿಸಿ, ತಿಂಗಳುಗಟ್ಟಲೇ ದೇಶ-ವಿದೇಶ ಅಲೆದು ನಿರ್ಮಾಪಕರು ಸಿನಿಮಾ ಮಾಡುತ್ತಾರೆ
- ಕೆಲ ಕಿಡಿಗೇಡಿಗಳು ಕೇವಲ ಒಂದೇ ದಿನದಲ್ಲಿ ಚಿತ್ರವನ್ನು ರೆಕಾರ್ಡ್ ಮಾಡಿ ಸೋರಿಕೆ ಮಾಡಿಬಿಡುತ್ತಾರೆ
- ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಮಾರ್ಕ್ ಸಿನಿಮಾಗೂ ಪೈರಸಿ ಕಾಟ ಎದುರಾಗಿದೆ
ಬೆಂಗಳೂರು : ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬ ಗಾದೆ ಮಾತು ಸಿನಿಮಾ ರಂಗದಲ್ಲಿ ಪೈರಸಿ ವಿಚಾರಕ್ಕೆ ಬಹಳ ಸೂಕ್ತವಾಗಿದೆ. ಕೋಟಿಗಟ್ಟಲೆ ಹಣ ವ್ಯಯಿಸಿ, ತಿಂಗಳುಗಟ್ಟಲೇ ದೇಶ-ವಿದೇಶ ಅಲೆದು ನಿರ್ಮಾಪಕರು ಸಿನಿಮಾವನ್ನು ನಿರ್ಮಾಣ ಮಾಡುತ್ತಾರೆ. ಆದರೆ, ಕೆಲ ಕಿಡಿಗೇಡಿಗಳು ಕೇವಲ ಒಂದೇ ದಿನದಲ್ಲಿ ಚಿತ್ರವನ್ನು ರೆಕಾರ್ಡ್ ಮಾಡಿ ಅದರ ಲಿಂಕ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮೂಲಕ ನಿರ್ಮಾಪಕರ ಜೇಬಿಗೆ ಕತ್ತರಿ ಹಾಕಿಬಿಡುತ್ತಾರೆ. ಇದೀಗ ಈ ಪೈರಸಿ ಕಾಟವನ್ನು ನಿನ್ನೆಯಷ್ಟೇ ಬಿಡುಗಡೆಯಾದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ( Kichcha Sudeepa ) ನಟನೆಯ ಮಾರ್ಕ್ ಸಿನಿಮಾ ಎದುರಿಸುತ್ತಿದೆ.
ಕ್ರಿಸ್ಮಸ್ (ಡಿ.25) ಹಬ್ಬದಂದೇ ಸುದೀಪ್ ನಟನೆಯ ಮಾರ್ಕ್ ಸಿನಿಮಾ ಬೆಳ್ಳಿ ತೆರೆಗೆ ಅಪ್ಪಳಿಸಿದೆ. ಸುದೀಪ್ ಅವರು ಮತ್ತೊಮ್ಮೆ ಮಾಸ್ ಅವತಾರದಲ್ಲಿ ಕಾಣಸಿಕೊಂಡಿದ್ದು, ಅಭಿಮಾನಿಗಳಿಗೆ ಮನರಂಜನೆಯ ರಸದೌತಣವೇ ಸಿಕ್ಕಿದೆ. ಭರ್ಜರಿ ಆ್ಯಕ್ಸನ್ ಸೀನ್, ಸುದೀಪ್ ಅವರ ಸ್ವ್ಯಾಗ್ ಎಲ್ಲೂ ಬೋರ್ ಹೊಡೆಯದ ಕತೆ ಹಾಗೂ ವೇಗದ ಸ್ಕ್ರೀನ್ಪ್ಲೇನೊಂದಿಗೆ ಮಾರ್ಕ್ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮೊದಲ ದಿನದ ಭರ್ಜರಿ ಓಟವನ್ನು ಮುಗಿಸಿ, ಎರಡನೇ ದಿನಕ್ಕೆ ಕಾಲಿಟ್ಟಿದೆ.
ಆದರೆ, ಎರಡನೇ ದಿನವೇ ಮಾರ್ಕ್ ಸಿನಿಮಾ ಪೈರಸಿ ಕಾಪಿ ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿದೆ. ಪೈರಸಿ ಲಿಂಕ್ಗಳನ್ನು ಟೆಲಿಗ್ರಾಮ್ಗಳಲ್ಲಿ ಹರಿಬಿಡಲಾಗಿದೆ. ಇದರಿಂದಾಗಿ ಸಿನಿಮಾ ಮೇಲೆ ಹೊಡೆತ ಬೀಳಲಿದೆ. ಪೈರಸಿ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮಾರ್ಕ್ ಸಿನಿಮಾ ತಂಡ ಖಡಕ್ ಎಚ್ಚರಿಕೆ ನೀಡಿದರು ಸಹ ಕಿಡಿಗೇಡಿಗಳು ತಮ್ಮ ದುಷ್ಕೃತ್ಯವನ್ನು ನಿಲ್ಲಿಸಿಲ್ಲ. ಇದೀಗ ಸಿನಿಮಾ ತಂಡ ಈ ಪೈರಸಿ ವಿರುದ್ಧ ಯಾವ ರೀತಿ ಹೋರಾಡುತ್ತದೆ ಎಂದು ಕಾದು ನೋಡಬೇಕಿದೆ.
ನೆಗೆಟಿವ್ ಟ್ರೆಂಡ್
ಕೆಲವರು #SaveProducersFromSudeep ಎಂಬ ಹ್ಯಾಶ್ಟ್ಯಾಗ್ ಅಡಿಯಲ್ಲಿ ಮಾರ್ಕ್ ಸಿನಿಮಾದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಖಾಲಿ ಥಿಯೇಟರ್ಗಳನ್ನು ಎಡಿಟ್ ಮಾಡಿ ಮಾರ್ಕ್ ಸಿನಿಮಾಗೆ ಜನರು ಯಾರೂ ಬರುತ್ತಿಲ್ಲ ಎಂದು ಬಿಂಬಿಸುತ್ತಿದ್ದಾರೆ. ಅಲ್ಲದೆ, ಬೇರೆ ಸಿನಿಮಾಗಳಿಗೆ ಜನರು ನೀಡಿದ ರಿವ್ಯೂಗಳನ್ನು ಮಾರ್ಕ್ ಸಿನಿಮಾಗೆ ನೀಡಿದ್ದಾರೆ ಎನ್ನುವಂತೆ ಎಡಿಟ್ ಮಾಡಿ ಹರಿಬಿಡುತ್ತಿದ್ದಾರೆ. ಇನ್ನು ಕೆಲವರು ನ್ಯೂಸ್ ಚಾನೆಲ್ಗಳ ಲೋಗೋವನ್ನು ದುರ್ಬಳಕೆ ಮಾಡಿಕೊಂಡು ಬೇರೆ ಸಿನಿಮಾಗಳಿಗೆ ನೀಡಿದ ಕೆಟ್ಟ ರಿವ್ಯೂಗಳನ್ನು ಹರಿಬಿಡುತ್ತಿದ್ದಾರೆ. ಸುದೀಪ್ ಅವರ ನಿರ್ಮಾಪಕ ಹಿಮಾಲಯಕ್ಕೆ ಹೋಗುವುದು ಗ್ಯಾರಂಟಿ, ಸುದೀಪ್ ಅವರಿಂದ ನಿರ್ಮಾಪಕರನ್ನು ಕಾಪಾಡಿ ಎಂದೆಲ್ಲ ಕಾಮೆಂಟ್ಗಳನ್ನು ಮಾಡುವ ಮೂಲಕ ಮಾರ್ಕ್ ಸಿನಿಮಾ ವಿರುದ್ಧ ನೆಗೆಟಿವ್ ಟ್ರೆಂಡ್ ಮಾಡುತ್ತಿದ್ದಾರೆ.
ನೆಗೆಟಿವ್ ಟ್ರೆಂಡ್ ಮತ್ತು ಪೈರಸಿ ಲಿಂಕ್ ಬೆಳವಣಿಗೆ ನೋಡಿದರೆ ಸುದೀಪ್ ಅವರು ಹುಬ್ಬಳ್ಳಿಯಲ್ಲಿ ನಡೆದ ಪ್ರೀರಿಲೀಸ್ ಈವೆಂಟ್ ವೇಳೆ ಹೇಳಿದ ಮಾತುಗಳು ನೆನೆಪಿಗೆ ಬರುತ್ತಿದೆ. ಡಿ.25ಕ್ಕೆ ಒಂದು ಸಿನಿಮಾ (ಮಾರ್ಕ್) ಬಿಡುಗಡೆಯಾಗುತ್ತದೆ. ಅದೇ ಸಮಯದಲ್ಲಿ ಒಂದು ಪಡೆ ಯುದ್ಧಕ್ಕೆ ಸಿದ್ಧವಾಗಿದೆ ಎಂದಿದ್ದರು. ಬಹುಶಃ ಮಾರ್ಕ್ ಸಿನಿಮಾ ವಿರುದ್ಧ ನೆಗೆಟಿವ್ ಟ್ರೆಂಡ್ ಹಾಗೂ ಪೈರಸಿ ಮಾಡಲೆಂದು ಒಂದು ಪಡೆ ಕಾರ್ಯನಿರತವಾಗಿದೆ ಅನ್ನೋದು ಈ ಬೆಳವಣಿಗೆಯಿಂದ ಗೊತ್ತಾಗುತ್ತಿದೆ.
ಆದರೆ, ಮಾರ್ಕ್ ಸಿನಿಮಾ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಸಿನಿಮಾ ನೋಡಿದವರು ಉತ್ತಮ ಮನರಂಜನಾ ಸಿನಿಮಾ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಗಳು ಕೂಡ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಇದರ ನಡುವೆ ಕೆಲವರು ನೆಗೆಟಿವ್ ಟ್ರೆಂಡ್ ಶುರು ಮಾಡಿರುವುದನ್ನು ನೋಡಿದರೆ, ಕಾಣದ ಕೈಗಳ ಕೈವಾಡ ಇದರಲ್ಲಿದೆ ಎಂಬ ಅನುಮಾನ ಹೊಗೆಯಾಡತೊಡಗಿದೆ.