ನರಸಿಂಹನ ಬಳಿಕ ಇದೀಗ ಪರಶುರಾಮನ ಅವತಾರ: ಹೊಂಬಾಳೆ ಫಿಲ್ಮ್ಸ್‌ನಿಂದ 'ಮಹಾವತಾರ ಪರಶುರಾಮ್' ಘೋಷಣೆ! Mahavatar Cinematic Universe
- ಭಾರತೀಯ ಸಿನಿಮಾ ರಂಗದಲ್ಲಿ ಬಿಗ್ ಬಜೆಟ್ ಸಿನಿಮಾಗಳಿಗೆ ಜನಪ್ರಿಯವಾಗಿರುವ ಹೊಂಬಾಳೆ ಫಿಲ್ಮ್ಸ್
- ಮತ್ತೊಂದು ಅದ್ಭುತ ಅಪ್ಡೇಟ್ನೊಂದಿಗೆ ಸಿನಿಪ್ರಿಯರ ಮುಂದೆ ಬಂದಿದೆ ಕನ್ನಡದ ಸಿನಿಮಾ ನಿರ್ಮಾಣ ಸಂಸ್ಥೆ
- ಮಹಾವತಾರ ಸಿನಿಮ್ಯಾಟಿಕ್ ಯೂನಿವರ್ಸ್ ಅಡಿಯಲ್ಲಿ ಹೊಂಬಾಳೆ ಫಿಲ್ಮ್ಸ್‌ನಿಂದ ಎರಡನೇ ಅನಿಮೇಟೆಡ್ ಚಿತ್ರ
- ನರಸಿಂಹನ ಅವತಾರದ ಬಳಿಕ ಈ ಬಾರಿ ಪರುಶುರಾಮನ ಪರಾಕ್ರಮವನ್ನು ಸಿನಿ ಪ್ರಿಯರಿಗೆ ಪರಿಚಯಿಸಲಿದೆ
Mahavatar Cinematic Universe : ಭಾರತೀಯ ಸಿನಿಮಾ ರಂಗದಲ್ಲಿ ಬಿಗ್ ಬಜೆಟ್ ಸಿನಿಮಾಗಳಿಗೆ ಜನಪ್ರಿಯವಾಗಿರುವ ಹೊಂಬಾಳೆ ಫಿಲ್ಮ್ಸ್, ಮತ್ತೊಂದು ಅದ್ಭುತ ಅಪ್ಡೇಟ್ನೊಂದಿಗೆ ಇಂದು (ಏಪ್ರಿಲ್ 19) ಸಿನಿಪ್ರಿಯರ ಮುಂದೆ ಬಂದಿದೆ.
ಕಳೆದ ವರ್ಷ ಬಿಡುಗಡೆಯಾದ 'ಮಹಾವತಾರ: ನರಸಿಂಹ' ಅನಿಮೇಟೆಡ್ ಚಿತ್ರದ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಈ ಸಿನಿಮಾ 2025, ಜುಲೈ 25ರಂದು ದೇಶಾದ್ಯಂತ ಬಿಡುಗಡೆಯಾಗಿ, ಬಾಕ್ಸ್ ಆಫೀಸ್ ಭರ್ಜರಿ ಯಶಸ್ಸು ಗಳಿಸಿತು. ಸಿನಿ ಮೂಲಗಳ ಪ್ರಕಾರ ಈ ಸಿನಿಮಾ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗಿದೆ. ಇದೀಗ, ಮಹಾವತಾರ ಸಿನಿಮ್ಯಾಟಿಕ್ ಯೂನಿವರ್ಸ್ ಅಡಿಯಲ್ಲಿ ಹೊಂಬಾಳೆ ಫಿಲ್ಮ್ಸ್ ಎರಡನೇ ಅನಿಮೇಟೆಡ್ ಚಿತ್ರದ ಶೀರ್ಷಿಕೆಯನ್ನು ಬಿಡುಗಡೆ ಮಾಡಿದೆ.
ಈ ಹಿಂದೆ ನರಸಿಂಹನ ಅವತಾರವನ್ನು ಬೆಳ್ಳಿ ತೆರೆಯ ಮೇಲೆ ಭರ್ಜರಿಯಾಗಿ ತೋರಿಸಿದ ಹೊಂಬಾಳೆ ಫಿಲ್ಸ್ಮ್ ಈ ಬಾರಿ ವಿಷ್ಣುವಿನ ಆರನೇ ಅವತಾರವೆಂದು ಪರಿಗಣಿಸಲಾದ ಪರುಶುರಾಮನ ಪರಾಕ್ರಮವನ್ನು ಸಿನಿ ಪ್ರಿಯರಿಗೆ ಪರಿಚಯಿಸಲಿದೆ. ತಮ್ಮ ಮುಂದಿನ ಸಿನಿಮಾಗೆ 'ಮಹಾವತಾರ ಪರಶುರಾಮ್' ಎಂದು ಟೈಟಲ್ ಇಡಲಾಗಿದೆ.
2027ರ ಡಿಸೆಂಬರ್ಗೆ ರಿಲೀಸ್
ಅಂದಹಾಗೆ, ಹೊಂಬಾಳೆ ಫಿಲ್ಮ್ಸ್ ಮತ್ತು ಕ್ಲೀಮ್ ಪ್ರೊಡಕ್ಷನ್ಸ್ ಜಂಟಿಯಾಗಿ ಭಗವಾನ್ ವಿಷ್ಣುವಿನ ದಶಾವತಾರಗಳನ್ನು ಆಧರಿಸಿ ಒಟ್ಟು 7 ಚಲನಚಿತ್ರಗಳನ್ನು ನಿರ್ಮಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಈ ಮಹತ್ವಾಕಾಂಕ್ಷೆಯ ಸಿನಿಮಾ ಪ್ರಯಾಣವು 2025ರಲ್ಲಿ ತೆರೆಕಂಡ 'ನರಸಿಂಹ' ಚಿತ್ರದ ಮೂಲಕ ಅದ್ಧೂರಿಯಾಗಿ ಆರಂಭಗೊಂಡಿತ್ತು. ಇದೀಗ ಈ ಸರಣಿಯ ಎರಡನೇ ಭಾಗವಾಗಿ ಭಗವಾನ್ ಪರಶುರಾಮನ ಅವತಾರದ ಕುರಿತು ಸಿನಿಮಾ ಸಿದ್ಧವಾಗುತ್ತಿದೆ. ಈ ಪ್ರತಿಷ್ಠಿತ ಚಿತ್ರವು 2027ರ ಡಿಸೆಂಬರ್‌ನಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ.
ಈ ಸಿನಿಮಾದ ಘೋಷಣೆಯ ಸಂದರ್ಭದಲ್ಲಿ ಬಿಡುಗಡೆ ಮಾಡಲಾದ ಪೋಸ್ಟರ್ ಅತ್ಯಂತ ಭಯಾನಕವಾಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಯಾವಾಗ ಧರ್ಮವು ಪತನಗೊಳ್ಳುತ್ತದೆಯೋ, ಆಗ ಪರಶು (ಕೊಡಲಿ) ಏಳುತ್ತದೆ (When Dharma falls, Parashu rises) ಎಂಬ ಟ್ಯಾಗ್ ಲೈನ್‌ನೊಂದಿಗೆ ಈ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಭಾರತೀಯ ಪುರಾಣಗಳನ್ನು ಆಧರಿಸಿದ ಈ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ದೊಡ್ಡ ಸಂಚಲನ ಸೃಷ್ಟಿಸುವ ನಿರೀಕ್ಷೆಯಿದೆ.
ನಿರ್ದೇಶಕ ಅಶ್ವಿನ್ ಕುಮಾರ್ ಅವರು ಅನ್ಯಾಯವನ್ನು ಕೊನೆಗೊಳಿಸಿ ಜಗತ್ತಿನಲ್ಲಿ ಧರ್ಮವನ್ನು ಸ್ಥಾಪಿಸುವ ಪರಶುರಾಮನ ಪಾತ್ರವನ್ನು ಅತ್ಯಂತ ರೋಚಕ ರೀತಿಯಲ್ಲಿ ಚಿತ್ರಿಸುತ್ತಿದ್ದಾರೆ. ಈ ಅನಿಮೇಟೆಡ್ ಚಿತ್ರವನ್ನು ಅಂತಾರಾಷ್ಟ್ರೀಯ ಮಟ್ಟದ ದೃಶ್ಯಗಳೊಂದಿಗೆ ನಿರ್ಮಿಸಲಾಗುತ್ತಿದ್ದು, ಮಕ್ಕಳನ್ನು ಮಾತ್ರವಲ್ಲದೆ ವಯಸ್ಕರನ್ನೂ ರಂಜಿಸಲಿದೆ ಎಂದು ಹೇಳಲಾಗುತ್ತಿದೆ.