ಪ್ರಣಾಮ್​ ದೇವರಾಜ್​ 
ಸ್ಯಾಂಡಲ್‌ವುಡ್

Pranam Devaraj - ಎಂಜಿಆರ್​ ಚಿತ್ರದಲ್ಲಿ ಮಾಸ್ ಅವತಾರದಲ್ಲಿ ಪ್ರಣಾಮ್​ ದೇವರಾಜ್​

"ಕುಮಾರಿ 21 ಎಫ್​​', "ಸನ್​ ಆಫ್​​ ಮುತ್ತಣ್ಣ' ಬಳಿಕ ನಟ ಪ್ರಣಾಮ್​ ದೇವರಾಜ್​ ನಾಯಕನಾಗಿ ನಟಿಸಲಿರುವ ಸಿನಿಮಾ "ಎಂಜಿಆರ್​'. ಇತ್ತೀಚೆಗಷ್ಟೆ ಅವರ ತಂದೆ ದೇವರಾಜ್​ ಚಿತ್ರದ ಟೈಟಲ್​ ಮತ್ತು ಸ್ಟ್​ ಲುಕ್​ ಬಿಡುಗಡೆ ಮಾಡಿದರು. ವಿಶೇಷ ಅಂದರೆ "ಎಂಜಿಆರ್​' ಮೂಲಕ ಪ್ರಣಾಮ್​ ಅಣ್ಣ ನಟ ಪ್ರಜ್ವಲ್​, ಡೈನಾಮಿಕ್​ ವೆಂಚರ್ಸ್​ ಬ್ಯಾನರ್​ ಮೂಲಕ ಮೊದಲ ಬಾರಿಗೆ ನಿರ್ಮಾಣಕ್ಕಿಳಿದಿದ್ದಾರೆ.
ದೇವರಾಜ್​, "ನಾನು ಚಿತ್ರರಂಗಕ್ಕೆ ಬಂದು 30 ವರ್ಷಗಳ ಬಳಿಕ ನಿರ್ಮಾಪಕನಾದೆ. ಈಗ ಪ್ರಜ್ವಲ್​ ಕೇವಲ 10,12 ವರ್ಷಗಳಿಗೆ ನಿರ್ಮಾಪಕನಾಗಿದ್ದಾನೆ. ನಮಗೆ ಸಿನಿಮಾ ಬಿಟ್ಟು ಬೇರೇನೂ ಗೊತ್ತಿಲ್ಲ. ಇಲ್ಲೇ ಏನಾದರೂ ಮಾಡಬೇಕು ಎಂಬ ತುಡಿತವಿದೆ. ಪ್ರಣಾಮ್​ ಲುಕ್​ ನೋಡಿ ನನಗೇ ಆಶ್ಚರ್ಯವಾಯಿತು. ಮಾಸ್​ಆಗಿ ಕಾಣಿಸಿಕೊಂಡಿದ್ದಾನೆ' ಎಂದು ಸಂತಸ ಹಂಚಿಕೊಂಡರು. "ಸನ್​ ಆಫ್​ ಮುತ್ತಣ್ಣ' ಬಳಿಕ ನಿರ್ದೇಶಕ ಶ್ರೀಕಾಂತ್​ ಹುಣಸೂರ್​ "ಎಂಜಿಆರ್​'ನಲ್ಲಿ ಪ್ರಣಾಮ್​ಗೆ ಮತ್ತೊಮ್ಮೆ ಆ್ಯಕ್ಷನ್​-ಕಟ್​ ಹೇಳಲಿದ್ದು, ""ಎಂಜಿಆರ್​' ಎಂದರೇನು? ಎಂಬುದನ್ನು ಮುಂದಿನ ದಿನಗಳಲ್ಲಿ ಹೇಳುತ್ತೇನೆ. ಪ್ರಣಾಮ್​ನ ಬೇರೆ ರೀತಿ ತೋರಿಸಲು ಪ್ರಯತ್ನಿಸಿದ್ದೇವೆ. ಒಂದೊಳ್ಳೆ ಕಾನ್ಸೆಪ್ಟ್​ ಇರುವ ಚಿತ್ರವಾಗಲಿದೆ' ಎಂದರು.
ಪ್ರಜ್ವಲ್​ ದೇವರಾಜ್​, "2005ರಲ್ಲಿ ನಡೆಯುವ ಕಥೆಯಿದು. ಮಾರ್ಚ್​ ಅಂತ್ಯಕ್ಕೆ ಅಥವಾ ಯುಗಾದಿ ಹಬ್ಬದ ಸಮಯದಲ್ಲಿ ಚಿತ್ರ ಮುಹೂರ್ತ ನೆರವೇರಲಿದೆ. ಪ್ರಣಾಮ್​ಗೆ ಮಾತ್ರವಲ್ಲ ನಮ್ಮ ಬ್ಯಾನರ್​ನಲ್ಲಿ ಹೊಸ ಪ್ರತಿಭೆಗಳಿಗೂ ಅವಕಾಶ ನೀಡಲಿದ್ದೇವೆ' ಎಂದರು. ನಾಯಕ ಪ್ರಣಾಮ್​, ""ಎಂಜಿಆರ್​'ನಿಂದ ಪ್ರಣಾಮ್​ ಹೊಸ ಅಧ್ಯಾಯ ಶುರುವಾಗಲಿದೆ. ಆತ ಅಳಿಸುತ್ತಾನೆ, ನಗಿಸುತ್ತಾನೆ, ಫೈಟ್​ ಮಾಡುತ್ತಾನೆ. ನನ್ನ ಲುಕ್​, ಬಾಡಿ ಲಾಂಗ್ವೇಜ್​ ಎರಡೂ ಬೇರೆ ರೀತಿ ಇರಲಿದೆ. ಪಾತ್ರಕ್ಕಾಗಿ ಸಾಕಷ್ಟು ಸಿದ್ಧತೆ ನಡೆಸುತ್ತಿದ್ದೇನೆ' ಎಂದು ಹೇಳಿಕೊಂಡರು.