ಆಸ್ಕರ್ ರೇಸ್‌ಗೆ ಎಂಟ್ರಿ ಕೊಟ್ಟ ಕನ್ನಡಿಗರ ಹೆಮ್ಮೆ ಕಾಂತಾರ: ಚಾಪ್ಟರ್ 1
- ಕನ್ನಡದ ಮಾಸ್ಟರ್ ಪೀಸ್, ಕಾಂತಾರ: ಚಾಪ್ಟರ್ 1 ಸಿನಿಮಾ ಆಸ್ಕರ್ ರೇಸ್‌ಗೆ ಎಂಟ್ರಿ
- ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಸಿನಿಮಾಗೆ ಜಾಗತಿಕ ಮನ್ನಣೆ
- 2026ರ ಆಸ್ಕರ್ ರೇಸ್‌ಗೆ ಅರ್ಹತೆ ಪಡೆದ 201 ಚಿತ್ರದಲ್ಲಿ ಭಾರತದ ಎರಡು ಸಿನಿಮಾಗಳು
ಬೆಂಗಳೂರು: ಈ ವರ್ಷ ಭಾರತದ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿ, ಹಲವು ದಾಖಲೆಗಳನ್ನು ತನ್ನ ಬತ್ತಳಿಕೆಗೆ ಹಾಕಿಕೊಂಡ ಕನ್ನಡದ ಮಾಸ್ಟರ್ ಪೀಸ್, ಕಾಂತಾರ: ಚಾಪ್ಟರ್ 1 ಸಿನಿಮಾ ( Kantara Chapter 1 ), ಆಸ್ಕರ್ ರೇಸ್‌ಗೆ ಎಂಟ್ರಿ ಕೊಟ್ಟಿದೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಈ ಸಿನಿಮಾ ಜಾಗತಿಕ ಮನ್ನಣೆ ಪಡೆಯುವತ್ತ ಹೆಜ್ಜೆ ಇಟ್ಟಿದೆ.
98ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ಸಮೀಪಿಸುತ್ತಿದೆ. ಈ ವರ್ಷ ಭಾರತೀಯ ಸಿನಿಮಾಗಳು ಮತ್ತೊಂದು ಐತಿಹಾಸಿಕ ದಾಖಲೆಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ. ಇತ್ತೀಚಿನ ಅಪ್ಡೇಟ್ ಪ್ರಕಾರ, 2026ರ ಆಸ್ಕರ್ ರೇಸ್‌ಗೆ ಅರ್ಹವಾಗಿರುವ 201 ಸಿನಿಮಾಗಳಲ್ಲಿ ಭಾರತದ ಎರಡು ಚಿತ್ರಗಳು ಕೂಡ ಸ್ಥಾನ ಪಡೆದಿವೆ.
ರಿಷಬ್ ಶೆಟ್ಟಿ ಅವರ 'ಕಾಂತಾರ: ಎ ಲೆಜೆಂಡ್ - ಚಾಪ್ಟರ್ 1' ಮತ್ತು ಅನುಪಮ್ ಖೇರ್ ಅವರ 'ತನ್ವಿ ದಿ ಗ್ರೇಟ್' ಸಿನಿಮಾಗಳು ಆಸ್ಕರ್ 2026ರ ರೇಸ್‌ಗೆ ಪ್ರವೇಶಿಸಿವೆ. ಒಟ್ಟು 201 ಸಿನಿಮಾಗಳು ಅತ್ಯುತ್ತಮ ಚಿತ್ರ ವಿಭಾಗಕ್ಕೆ ಪರಿಗಣಿಸಲಾಗಿದೆ. ಇದರಲ್ಲಿ ಯಾವ ಸಿನಿಮಾ ಪ್ರಶಸ್ತಿಯನ್ನು ಎತ್ತಿ ಹಿಡಿಯಲಿದೆ ಅನ್ನೋದನ್ನು ಕಾದು ನೋಡಬೇಕಿದೆ.
ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ (AMPAS) ಆಸ್ಕರ್ ರೇಸ್‌ಗೆ ಅರ್ಹವಾದ ಸಿನಿಮಾಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸಾಮಾನ್ಯ ಎಂಟ್ರಿಯ ಹೊರತಾಗಿ ಈ ರೇಸ್ನಲ್ಲಿ ಸ್ಥಾನ ಪಡೆಯಲು ಥಿಯೇಟರ್ ಪ್ರದರ್ಶನದ ಜತೆಗೆ ರೆಪ್ರೆಸೆಂಟೇಶನ್ ಅಂಡ್ ಇನ್ಕ್ಲುಷನ್ ಸ್ಟ್ಯಾಂಡರ್ಡ್ ಎಂಟ್ರಿ (RAISE) ಫಾರ್ಮ್ ಸಲ್ಲಿಕೆ ಸೇರಿದಂತೆ ಇನ್ನಿತರ ಮಾನದಂಡಗಳನ್ನು ಪೂರೈಸಬೇಕು. ನಾಲ್ಕು ಮಾನದಂಡಗಳಲ್ಲಿ ಕನಿಷ್ಠ ಎರಡನ್ನು ಪೂರೈಸಬೇಕು. ಇದಿಷ್ಟೇ ಅಲ್ಲದೆ, 2025ರಲ್ಲಿ ಸಿನಿಮಾ ಬಿಡುಗಡೆಯ 45 ದಿನಗಳ ಒಳಗೆ ಅಮೆರಿಕದ ಟಾಪ್ 50 ಮಾರುಕಟ್ಟೆಗಳಲ್ಲಿ 10 ರಲ್ಲಿ ಅರ್ಹ ಥಿಯೇಟರ್ ಎಂಗೇಜ್ಮೆಂಟ್ ಪೂರ್ಣಗೊಳಿಸರಬೇಕು. ಈ ಎಲ್ಲ ಷರತ್ತುಗಳನ್ನು ಪೂರೈಸಿದ ಬಳಿಕ ಕಾಂತಾರ ಚಾಪ್ಟರ್ 1 ಮತ್ತು ತನ್ವಿ ದಿ ಗ್ರೇಟ್ ಸಿನಿಮಾಗಳು ಜಾಗತಿಕ ವೇದಿಕೆಯಲ್ಲಿ ಪ್ರಬಲ ಸ್ಪರ್ಧಿಗಳಾಗಿ ಪ್ರಶಸ್ತಿಗೆ ಸುತ್ತಿಗೆ ಇಳಿದಿವೆ.
ಇನ್ನು 2025, ನವೆಂಬರ್ ತಿಂಗಳಲ್ಲಿ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್, ಅತ್ಯುತ್ತಮ ಸಾಕ್ಷ್ಯಚಿತ್ರ, ಅನಿಮೇಟೆಡ್ ಫೀಚರ್ ಮತ್ತು ಅಂತಾರಾಷ್ಟ್ರೀಯ ಫೀಚರ್ ಫಿಲ್ಮ್ ವಿಭಾಗಗಳಿಗೆ ಅರ್ಹವಾದ ಚಲನಚಿತ್ರಗಳನ್ನು ಘೋಷಿಸಿತು. ಎಲ್ಲಾ ವಿಭಾಗಗಳಲ್ಲಿ ಒಟ್ಟು 317 ಸಿನಿಮಾಗಳು ಆಯ್ಕೆಯಾಗಿವೆ. ಅಂದಹಾಗೆ, 98ನೇ ಅಕಾಡೆಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳನ್ನು ಜನವರಿ 22 ರಂದು ಘೋಷಿಸಲಾಗುತ್ತದೆ.
ಕಾಂತಾರಾ ಸಿನಿಮಾ ಬಗ್ಗೆ
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ 'ಕಾಂತಾರ: ಚಾಪ್ಟರ್ 1' 2022ರಲ್ಲಿ ತೆರೆಕಂದು ಬ್ಲಾಕ್‌ಬಸ್ಟರ್ ಆದ 'ಕಾಂತಾರ' ಚಿತ್ರದ ಪ್ರಿಕ್ವೆಲ್. ಈ ಸಿನಿಮಾ 2025, ಅಕ್ಟೋಬರ್ 2ರಂದು ಅದ್ಧೂರಿಯಾಗಿ ಬಿಡುಗಡೆಯಾಯಿತು. ಈ ಚಿತ್ರವು 4ನೇ ಶತಮಾನದ ಕದಂಬರ ಕಾಲದ ಹಿನ್ನೆಲೆಯಲ್ಲಿ ಸಾಗಲಿದ್ದು, ಪಂಜುರ್ಲಿ ಮತ್ತು ಗುಳಿಗ ದೈವಗಳ ಮೂಲ ಹಾಗೂ ತುಳುನಾಡಿನ ದೈವಾರಾಧನೆಯ ಇತಿಹಾಸವನ್ನು ತೆರೆದಿಡುತ್ತದೆ. ರಿಷಬ್ ಶೆಟ್ಟಿ ಈ ಬಾರಿ 'ಬೆರ್ಮೆ' ಎಂಬ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರಿಗೆ ಜೋಡಿಯಾಗಿ ರುಕ್ಮಿಣಿ ವಸಂತ್ (ಕನಕವತಿ ಪಾತ್ರದಲ್ಲಿ) ನಟಿಸಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಚಿತ್ರವು ತಾಂತ್ರಿಕವಾಗಿ ಅತ್ಯಂತ ಶ್ರೀಮಂತವಾಗಿದ್ದು, ಅಜನೀಶ್ ಲೋಕನಾಥ್ ಸಂಗೀತ ಮತ್ತು ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣ ಪ್ರೇಕ್ಷಕರಿಗೆ ದೃಶ್ಯ ವೈಭವವನ್ನು ಉಣಬಡಿಸಿದೆ. ಜಾಗತಿಕವಾಗಿ 800 ಕೋಟಿ ರೂ.ಗೆ ಅಧಿಕ ಕಲೆಕ್ಷನ್ ಮಾಡಿತು.
ತನ್ವಿ ದಿ ಗ್ರೇಟ್ ಸಿನಿಮಾ ಬಗ್ಗೆ
ಈ ಸಿನಿಮಾವನ್ನು ಅನುಪಮ್ ಖೇರ್ ನಿರ್ದೇಶಿಸಿದರು. ಇದು ಆಟಿಸಂ (Autism) ಹೊಂದಿರುವ ಒಬ್ಬ ಯುವತಿಯು ತನ್ನ ದಿವಂಗತ ತಂದೆಯ ಕನಸನ್ನು ನನಸು ಮಾಡಲು ಭಾರತೀಯ ಸೇನೆಯನ್ನು ಸೇರಬಯಸುವ ಹೃದಯಸ್ಪರ್ಶಿ ಕಥೆಯಾಗಿದೆ. ಚಿತ್ರದಲ್ಲಿ ಹೊಸ ಪ್ರತಿಭೆ ಶುಭಾಂಗಿ ದತ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಅನುಪಮ್ ಖೇರ್, ಅರವಿಂದ್ ಸ್ವಾಮಿ ಮತ್ತು ಜಾಕಿ ಶ್ರಾಫ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 2025, ಜುಲೈ 18 ರಂದು ವಿಶ್ವಾದ್ಯಂತ ಬಿಡುಗಡೆಯಾಗಿ ವಿಮರ್ಶಕರಿಂದ ಮೆಚ್ಚುಗೆ ಪಡೆಯಿತು, (ಏಜೆನ್ಸೀಸ್).