- 'ಟಾಕ್ಸಿಕ್' ಟೀಸರ್ನಲ್ಲಿ ಯಶ್ ಜತೆಗಿರುವುದು ನಟಾಲಿ ಬರ್ನ್ ಅಲ್ಲವೇ ಅಲ್ಲ
- ಸಿನಿಪ್ರಿಯರನ್ನು ಗೊಂದಲಕ್ಕೆ ದೂಡಿದ ನಿರ್ದೇಶಕಿ ಗೀತು ಮೋಹನ್ದಾಸ್
- ವೈರಲ್ ದೃಶ್ಯದಲ್ಲಿ ಕಾಣಿಸಿಕೊಂಡಿರುವ ಬ್ಯೂಟಿಯೇ ಬೇರೆ, ಈಕೆಯೇ ಬೇರೆ
ಬೆಂಗಳೂರು: ಕೆಜಿಎಫ್ ಸರಣಿಯ ಭರ್ಜರಿ ಯಶಸ್ಸಿನ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿರುವ ನಟ ರಾಕಿಂಗ್ ಸ್ಟಾರ್ ಯಶ್ 40ನೇ ವಸಂತಕ್ಕೆ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ಟೀಸರ್ ರಿಲೀಸ್ ಮಾಡಲಾಯಿತು. ಟೀಸರ್ನ ಆರಂಭದಲ್ಲಿ ಬರುವ ಅದೊಂದು ಹಸಿಬಿಸಿ ದೃಶ್ಯವಂತು ಸದ್ಯ ನೆಟ್ಟಿಗರ ಟೀಕೆಗಳಿಗೆ ಗುರಿಯಾಗಿದ್ದು, ಹಾಟ್ ಲುಕ್ನಲ್ಲಿ ಕಾಣಿಸಿಕೊಂಡ ಹಾಲಿವುಡ್ ನಟಿಯ ಬಗ್ಗೆ ಶುರುವಾದ ಚರ್ಚೆ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ.
ಜ.8ರಂದು ಯಶ್ ಹುಟ್ಟುಹಬ್ಬಕ್ಕೆ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್' ಚಿತ್ರದ ನಿರ್ಮಾಪಕಿ ಗೀತು ಮೋಹನ್ದಾಸ್, ನಟನ ಅಭಿಮಾನಿಗಳಿಗೆಂದು ಸಿನಿಮಾದ ಟೀಸರ್ ಅನ್ನು ಬಿಡುಗಡೆಗೊಳಿಸಿದರು. ಇದು ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬೆಂಕಿ ಹಚ್ಚಿತು. ಟೀಸರ್ ಆರಂಭದಲ್ಲೇ ಯಶ್ ಅವರನ್ನು ಹಿಂದೆಂದೂ ನೋಡಿರದ ಅವತಾರದಲ್ಲಿ ತೋರಿಸಲಾಗಿದೆ. ಇದನ್ನು ನೋಡಿದ ಸಿನಿಪ್ರಿಯರು, ಅದರಲ್ಲಿನ ವಯಸ್ಕ-ಆಧಾರಿತ ದೃಶ್ಯಗಳಿಂದಾಗಿ ತೀವ್ರ ಅಸಮಾಧಾನಗೊಂಡಿದ್ದಾರೆ. ಸದ್ಯ ಈ ದೃಶ್ಯ ಕೆಲವರ ಸಿಡಿನುಡಿಗೆ ಕಾರಣವಾಗಿದ್ದು, ಭಾರೀ ಟ್ರೋಲ್ಗೆ ಸಿಲುಕಿದೆ.
ಟೀಸರ್ನಲ್ಲಿರುವ ಚೆಲುವೆಯೇ ಬೇರೆ!
ಟೀಸರ್ನ ಓಪನಿಂಗ್ ಸೀನ್ನಲ್ಲಿ ಕಾರಿನಲ್ಲಿ ಯಶ್ ಜತೆಗೆ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡಿರುವ ನಟಿಯ ಹೆಸರು ನಟಾಲಿ ಬರ್ನ್ ಎಂಬ ಪರಿಚಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತು. ಸುದ್ದಿ ಸಂಸ್ಥೆಗಳು ಕೂಡ ಈಕೆಯೇ ಕಾರಿನೊಳಗೆ ಯಶ್ ಜತೆಗಿದ್ದ ಬೋಲ್ಡ್ ಬ್ಯೂಟಿ ಎಂದಿತು. ಕೇವಲ, ಒಂದೇ ದಿನದಲ್ಲಿ ಬರ್ನ್ ಹೆಸರು ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಯಿತು. ಇದರಿಂದ ಹಾಲಿವುಡ್ ನಟಿಯ ಜನಪ್ರಿಯತೆ ಕೂಡ ವೇಗವಾಗಿ ಹೆಚ್ಚಿತು.
ಕೆಲವರಂತು ಚಿತ್ರದಲ್ಲಿನ ಹಾಟ್ ದೃಶ್ಯಗಳ ಅವಶ್ಯಕತೆ ಇದೆಯೇ ಎಂದು ಕೇಳುವ ಮೂಲಕ ನಟಿಯ ಹಿನ್ನೆಲೆ? ಈಕೆ ಯಾರು ಎಂಬ ಮಾಹಿತಿಯನ್ನು ಜಾಲತಾಣಗಳಲ್ಲಿ ಹುಡುಕಾಡಿದರು. ನೆಟ್ಟಿಗರಲ್ಲಿ ಭಾರೀ ಚರ್ಚೆಗೆ ಗ್ರಾಸವಾದ ನಟಾಲಿ, ಟೀಸರ್ನಲ್ಲಿ ಯಶ್ ಜತೆ ಕಾಣಿಸಿಕೊಂಡ ನಟಿ ಅಲ್ಲವೇ ಅಲ್ಲ ಎಂಬ ವಿಷಯ ಸದ್ಯ ಹೊರಬಿದ್ದಿದೆ. ಇದಕ್ಕೆ ಸ್ವತಃ ಚಿತ್ರದ ನಿರ್ದೇಶಕಿ ಗೀತು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಾಕಿಕೊಂಡಿರುವ ಸ್ಟೋರಿಯೇ ಸಾಕ್ಷಿ.
ಯಾರು ಈ ಬೀಟ್ರಿಜ್?
ಅಷ್ಟಕ್ಕೂ, ಗೀತು ಮೋಹನ್ದಾಸ್ ಹಾಕಿರುವ ಸ್ಟೋರಿ ಗಮನಿಸಿದರೆ, ಅದರಲ್ಲಿ ಅವರೇಳುವಂತೆ, ಟೀಸರ್ನಲ್ಲಿ ಕಂಡುಬರುವ ಸ್ಮಶಾನದ ಜಾಗದಲ್ಲಿ ನಡೆಯುವ ದೃಶ್ಯದಲ್ಲಿ ನಟ ಯಶ್ ಜತೆ ಕಾರಿನೊಳಗಿರುವುದು ನಟಾಲೀ ಬರ್ನ್ ಅಲ್ಲ. ಬದಲಿಗೆ ಮತ್ತೋರ್ವ ನಟಿ ಬೀಟ್ರಿಜ್ ಎನ್ನಲಾಗಿದೆ. ಇದು ಹಲವರ ಗೊಂದಲಕ್ಕೆ ಕಾರಣವಾದರೆ, ಟೀಸರ್ನಲ್ಲಿ ಮಿಂಚಿದ ಬೋಲ್ಡ್ ಬ್ಯೂಟಿ ಬರ್ನ್ ಅಲ್ಲವೇ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ,(ಏಜೆನ್ಸೀಸ್).