ಬೆಂಗಳೂರು: ಕನ್ನಡದ ‘ಸೋಮು ಸೌಂಡ್ ಇಂಜಿನಿಯರ್’, ‘ಬೆಂಕಿ’ ಖ್ಯಾತಿಯ, ಬೆಳಗಾವಿ ಮೂಲದ ನಿವಿಷ್ಕಾ ಪಾಟೀಲ್ ಡಬಲ್ ಸಂಭ್ರಮದಲ್ಲಿದ್ದಾರೆ. ‘ಬೃಂದಾವಿಹಾರಿ’ ರಿಲೀಸ್ ಬೆನ್ನಲ್ಲೇ ನಟಿಯ ಮತ್ತೊಂದು ಚಿತ್ರ ‘ಅನಂತಪಯಣ’ ಇದೇ ಶುಕ್ರವಾರ (ನ. 27) ಬಿಡುಗಡೆಯಾಗುತ್ತಿದೆ. ಇದೇ ಖುಷಿಯಲ್ಲಿರುವ ಜವಾರಿ ಹುಡುಗಿ ‘ವಿಜಯವಾಣಿ’ ಜತೆ ಮಾತಿಗೆ ಸಿಕ್ಕರು. ‘‘ಯಾವಾಗಲೂ ಶೂಟಿಂಗ್ನಲ್ಲಿರುತ್ತೀಯಾ, ಸಿನಿಮಾ ಯಾವಾಗ ರಿಲೀಸ್ ಎಂಬುದು ಬಹುತೇಕರ ದೂರು ಆಗಿತ್ತು. ಇದೀಗ ಅವರಿಗೆ ಉತ್ತರ ಕೊಡುವ ಸಮಯ ಬಂದಿದೆ. ಕಳೆದ ವಾರ ರಿಲೀಸ್ ಆದ ‘ಬೃಂದಾವಿಹಾರಿ’ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನನ್ನ ಪಾತ್ರಕ್ಕೂ ಮೆಚ್ಚುಗೆ ಮಾತುಗಳು ಬಂದಿವೆ. ಆ ಬೆನ್ನಲ್ಲೇ ನನ್ನ ಇನ್ನೊಂದು ಚಿತ್ರ ‘ಅನಂತ ಪಯಣ’ ಇದೇ ವಾರ ತೆರೆಗೆ ಬರುತ್ತಿದೆ. ಮೂಲತಃ ಬೆಳಗಾವಿಯವಳು. ಇದೀಗ ನಮ್ಮೂರಿನ ಕಥಾ ಹಂದರದ ಸಿನಿಮಾದಲ್ಲಿ ನಟಿಸುತ್ತಿರುವುದು ಮತ್ತೊಂದು ವಿಶೇಷ. ಗೌರಿ ಎಂಬ ಪಾತ್ರದಲ್ಲಿದ್ದೇನೆ. ಸಂಚಾರಿ ಕುರಿಗಾಹಿಯನ್ನು ಪ್ರೀತಿಸಿ ಮದುವೆಯಾದ ಬಳಿಕ ಆಕೆ ಎದುರಿಸುವ ಸವಾಲುಗಳ ಮೇಲೆ ಪಾತ್ರ ಚಲಿಸುತ್ತದೆ. ಸಂಚಾರಿ ಕುರುಬರ ಸಮಸ್ಯೆಗಳು, ಜೀವನ ಪದ್ಧತಿಯ ಮೇಲೆ ಬೆಳಕು ಚೆಲ್ಲುವ ಕಥಾಹಂದರವಾಗಿದ್ದು, ಈ ಚಿತ್ರದ ಮೂಲಕವೇ ಆ ಸಮುದಾಯದ ಬಗ್ಗೆ ಹೆಚ್ಚು ತಿಳಿಯುವಂತಾಯಿತು. ಊರಿನ ಭಾಷೆ ಕಾರಣದಿಂದಾಗಿ ಪಾತ್ರಕ್ಕೆ ಹೆಚ್ಚು ತಯಾರಿ ಇರಲಿಲ್ಲ. ಲುಕ್ ಟೆಸ್ಟ್ ಬಳಿಕ ಕೆಲ ದಿನ ವರ್ಕ್ಶಾಪ್ ಮಾಡಿದ್ದೆವು ಅಷ್ಟೇ’ ಎಂದು ಮಾಹಿತಿ ಹಂಚಿಕೊಂಡರು.
‘ಬೃಂದಾವಿಹಾರಿ’, ‘ಅನಂತಪಯಣ’ ಬಳಿಕ ನಿವಿಷ್ಕಾ ನಟನೆಯ ಮೂರು ಸಿನಿಮಾಗಳು ರಿಲೀಸ್ಗೆ ಸಿದ್ಧವಾಗಿವೆ. ‘ಈ ಎರಡು ಸಿನಿಮಾಗಳ ಬಳಿಕ ಪವನ್ ಒಡೆಯರ್ ತಂಡದ ‘ಅಕಾಯ’, ಚಂದ್ರಕೀರ್ತಿ ನಿರ್ದೇಶನದ ‘ಕಾಫಿ ಬೈಟ್’ ಹಾಗೂ ಅಜಿತ್ ಜಯರಾಜ್ ನಟನೆಯ ‘ಜಾಂಟಿ ಸನ್ ಆ್ ಜಯರಾಜ್’ ಚಿತ್ರಗಳು ಮುಂದಿನ ವರ್ಷದ ಮೊದಲ ಅವಧಿಯಲ್ಲಿ ಬಿಡುಗಡೆಯಾಗಲಿವೆ. ಸದ್ಯ ಎರಡು-ಮೂರು ಕಥೆ ಕೇಳಿದರೂ, ಯಾವುದನ್ನು ಫೈನಲ್ ಮಾಡಿಲ್ಲ’ ಎಂದು ಹೇಳಿಕೊಳ್ಳುವ ನಿವಿಷ್ಕಾ, ‘ಬಹುತೇಕ ಉತ್ತರ ಕರ್ನಾಟಕದ ಸೊಡಗಿನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ನನ್ನ ವೃತ್ತಿ ಜೀವನಕ್ಕೆ ಪ್ಲಸ್ ಪಾಯಿಂಟ್ ಆಗಿದೆ’ ಎಂದು ನಗೆ ಬೀರುತ್ತಾರೆ.