ನಟ ಯಶ್ ನಟನೆಯ 'ಟಾಕ್ಸಿಕ್'
- ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ಟೀಸರ್
- ಟೀಸರ್ನಲ್ಲಿ ಹಸಿಬಿಸಿ ದೃಶ್ಯ, ಸಿನಿಪ್ರಿಯರು ತೀವ್ರ ಅಸಮಾಧಾನ
- ಯಶ್ ಹೇಳಿಕೆಯ ಹಳೆಯ ವಿಡಿಯೋ ವೈರಲ್, ನೆಟ್ಟಿಗರ ಪ್ರಶ್ನೆ
ಬೆಂಗಳೂರು: ಜ.8ರಂದು ಸ್ಯಾಂಡಲ್ವುಡ್ನ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್' ಚಿತ್ರದ ಟೀಸರ್ ಹೊರಬಿದ್ದಿತು. ಮಾಲಿವುಡ್ ನಿರ್ದೇಶಕಿ ಗೀತು ಮೋಹನ್ದಾಸ್, ನಟನ ಅಭಿಮಾನಿಗಳಿಗೆಂದು ಸಿನಿಮಾದ ಟೀಸರ್ ಅನ್ನು ನಟನ ಜನ್ಮದಿನದಂದೇ ಬಿಡುಗಡೆಗೊಳಿಸಿದರು. ಇದು ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿ ಹಚ್ಚಿದ್ದು, ಟೀಸರ್‌ನ ಆರಂಭದಲ್ಲಿ ಮೂಡಿಬರುವ ಹಸಿಬಿಸಿ ದೃಶ್ಯ ಸಿನಿಪ್ರಿಯರನ್ನು ತೀವ್ರ ಮುಜುಗರಕ್ಕೀಡು ಮಾಡಿತು. ಸದ್ಯ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ರೋಲ್, ಟೀಕೆಗಳಿಗೆ ಗುರಿಯಾಗಿದೆ.
ಟೀಸರ್‌ನ ಆರಂಭದಲ್ಲೇ ಯಶ್ ಅವರನ್ನು ಹಿಂದೆಂದೂ ನೋಡಿರದ ಅವತಾರದಲ್ಲಿ ನೋಡಿದ ಸಿನಿಪ್ರಿಯರು, ಅದರಲ್ಲಿನ ವಯಸ್ಕ-ಆಧಾರಿತ ದೃಶ್ಯಗಳಿಂದಾಗಿ ತೀವ್ರ ಅಸಮಾಧಾನಗೊಂಡಿದ್ದಾರೆ. ಸದ್ಯ ಈ ದೃಶ್ಯ ಕೆಲವರ ಸಿಡಿನುಡಿಗೆ ಕಾರಣವಾಗಿದ್ದು, ಭಾರೀ ಟ್ರೋಲ್ಗೆ ಸಿಲುಕಿದೆ. ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡಿರುವ ಯಶ್ ಹಾಗೂ ಹಾಲಿವುಡ್ ನಟಿಯ ವಿರುದ್ಧ ಹಲವರು ಕಿಡಿಕಾರಿದ್ದಾರೆ. ಇದಕ್ಕೆಲ್ಲ ಮೂಲ ಕಾರಣರಾಗಿರುವ ನಿರ್ದೇಶಕಿಯನ್ನು ಮಾಲಿವುಡ್ ಮಂದಿ ಸೇರಿ ಅನೇಕರು ತೀವ್ರವಾಗಿ ಟೀಕಿಸಿ, ಟ್ರೋಲ್ ಮಾಡುತ್ತಿದ್ದಾರೆ. ಇಂತಹ ಸೀನ್ನ ಅವಶ್ಯಕತೆ ಏನಿತ್ತು? ಇದನ್ನು ವ್ಯಾಟ್ಸ್ಆ್ಯಪ್ ಸ್ಟೇಟಸ್ ಅಥವಾ ಜಾಲತಾಣಗಳಲ್ಲಿ ಹಂಚಿಕೊಳ್ಳುವುದಾದರೂ ಹೇಗೆ? ಎಂಬ ಪ್ರಶ್ನೆಯನ್ನು ನೆಟ್ಟಿಗರು ಚಿತ್ರತಂಡಕ್ಕೆ ಕೇಳುತ್ತಿದ್ದಾರೆ.
ಏನದು ಹಸಿಬಿಸಿ ದೃಶ್ಯ?
ಟೀಸರ್‌ನ ಓಪನಿಂಗ್ ಸೀನ್ನಲ್ಲಿ ಕಾರಿನಲ್ಲಿ ಯಶ್ ಜತೆಗೆ ಹಾಟ್ ರೊಮ್ಯಾಂಟಿಕ್ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಕಿಚ್ಚು ಹಚ್ಚಿದೆ. ಹಾಲಿವುಡ್ ಸಿನಿಮಾಗಳಲ್ಲಿ ಇರುವಂತೆಯೇ ಟಾಕ್ಸಿಕ್ ಸಿನಿಮಾದಲ್ಲಿ ಅಶ್ಲೀಲ ದೃಶ್ಯಗಳಿವೆ. ಆ ದೃಶ್ಯಗಳನ್ನು ಮನೆ ಮಂದಿ ಒಟ್ಟಿಗೆ ನೋಡಲು ಆಗುವುದಿಲ್ಲ. ಹೆಣ್ಣಿನ ಗೌರವದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡಿದ್ದ ಗೀತು, ಇದೀಗ ತಮ್ಮ ಚಿತ್ರದಲ್ಲಿ ಮಾಡಿರುವುದೇನು ಎಂಬ ಪ್ರಶ್ನೆಗಳು ನಿರ್ದೇಶಕಿಯ ಬೆನ್ನತ್ತಿವೆ. ಇದೆಲ್ಲದರ ನಡುವೆ ಯಶ್, 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಅಂದು ಆಡಿದ ಮಾತನ್ನು ಇಂದು ನೆಟ್ಟಿಗರು ನೆನಪಿಸಿಕೊಂಡು, ಮುನ್ನೆಲೆಗೆ ತಂದಿರುವುದು ಅಚ್ಚರಿಯೇ ನಿಜ.
ಆಡಿದ ಮಾತನ್ನು ಮರೆತರೇ ರಾಕಿ ಭಾಯ್?
ಈ ಹಿಂದೆ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಹಲವು ವಿಚಾರಗಳನ್ನು ಮುಕ್ತವಾಗಿ ಹಂಚಿಕೊಂಡ ಯಶ್, ತಮ್ಮ ಸಿನಿಮಾ ಕುರಿತಂತೆ ಮಾತನಾಡಿದ್ದರು. "ನನಗೇನಂದರೆ ಇವತ್ತಿಗೂ ಅಷ್ಟೇ, ನಾನು ನಮ್ಮ ತಂದೆ-ತಾಯಿ ಜತೆಗೆ ಕುಳಿತು ಕಮ್ಫರ್ಟೇಬಲ್ ಆಗಿ ನೋಡಲಾಗದ ಸೀನ್ಗಳನ್ನು ಮಾಡೋದಿಲ್ಲ" ಎಂದಿದ್ದರು. ಯಶ್ ಅವರ ಈ ಹೇಳಿಕೆ ಇದೀಗ ಮುನ್ನೆಲೆಗೆ ಬಂದಿದ್ದು, ಕೆಲವರು ವಿಡಿಯೋ ಮುಂದಿಟ್ಟು ನಟನನ್ನು ಪ್ರಶ್ನಿಸಿ, ಟ್ರೋಲ್ಗೆ ಗುರಿಪಡಿಸುತ್ತಿರುವುದು ಕಂಡುಬಂದಿದೆ. ಯಶ್ ಆಡಿದ ಮಾತನ್ನು ಈಗ ಚರ್ಚಿಸುತ್ತಿರುವ ಮಂದಿ, ಟಾಕ್ಸಿಕ್ನಲ್ಲಿ ಇಂತಹ ದೃಶ್ಯಗಳೇ ಹೆಚ್ಚಿರಬಹುದು. ಕುಟುಂಬ ಸಮೇತ ಕುಳಿತು ನೋಡುವ ಸಿನಿಮಾ ಇದಲ್ಲವೇ? ಎನ್ನುತ್ತಿದ್ದಾರೆ.
ಒಟ್ಟಾರೆ, ಟಾಕ್ಸಿಕ್ ಟೀಸರ್ ಹೊರಬಂದಿದ್ದೋ ಬಂದಿದ್ದು, ಅದೊಂದು ಹಸಿಬಿಸಿ ದೃಶ್ಯಕ್ಕೆ ಸಂಬಂಧಿಸಿದಂತೆ ಚಿತ್ರದ ನಿರ್ದೇಶಕಿ, ಹೀರೋ ಮತ್ತು ದೃಶ್ಯದಲ್ಲಿದ್ದ ನಟಿಯನ್ನು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಟ್ರೋಲ್ ಮಾಡಿ ಟೀಕಿಸುತ್ತಿದ್ದಾರೆ. ಈಗಾಗಲೇ ಘೋಷಣೆಯಾಗಿರುವಂತೆ ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ , ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಕಾಣಿಸಿಕೊಂಡಿದ್ದಾರೆ. ಇವರ ಪಾತ್ರಗಳು ಈ ಡಾರ್ಕ್ ಜಗತ್ತಿನಲ್ಲಿ ಎಷ್ಟು ಮುಖ್ಯ ಎಂಬುದನ್ನು ಟೀಸರ್ ಬಿಂಬಿಸಿದೆ.
ನಿರ್ದೇಶಕಿ ಗೀತು ಮೋಹನ್ ದಾಸ್ ಅವರು ಯಶ್ರನ್ನು ಹಿಂದೆಂದೂ ಕಾಣದ ರೀತಿಯಲ್ಲಿ ತೋರಿಸಿದ್ದಾರೆ. ಕೇವಲ ಆಕ್ಷನ್ ಮಾತ್ರವಲ್ಲದೆ, ಒಂದು ಗಂಭೀರ ಮತ್ತು ತೀವ್ರವಾದ ಕಥೆ ಇದರಲ್ಲಿ ಅಡಗಿದೆ ಎಂಬುದಂತು ಸ್ಪಷ್ಟ. ಟೀಸರ್‌ನ ಮ್ಯೂಸಿಕ್ ಸಖತ್ ಪವರ್‌ಫುಲ್ ಆಗಿದೆ. ಪ್ರತಿ ಶಬ್ದ ಮತ್ತು ಬಿಜಿಎಂ ದೃಶ್ಯದ ತೀವ್ರತೆಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ.