Shubhakruth Naam Samvatsara - "ಫೋರ್ ವಾಲ್ಸ್' ಖ್ಯಾತಿಯ ನಿರ್ದೇಶಕ ಎಸ್ಎಸ್ ಸಜ್ಜನ್ ಆ್ಯಕ್ಷನ್&ಕಟ್ ಹೇಳುತ್ತಿರುವ, "ಲಕ್ಷ್ಮೀ ನಿವಾಸ' ನಟ ಧನಂಜಯ್ ನಾಯಕನಾಗಿರುವ ಹೊಸ ಸಿನಿಮಾ "ಶುಭಕೃತ್ ನಾಮ ಸಂವತ್ಸರ'. ಈ ಚಿತ್ರದ ಮೂಲಕ ತೆಲುಗು ನಟ ನರೇಶ್ ವಿಜಯ್ ಕೃಷ್ಣ ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿರುವುದು ವಿಶೇಷ. 2023ರಲ್ಲಿ ಪವಿತ್ರಾ ಲೋಕೇಶ್ ಜತೆ ನರೇಶ್ ನಟಿಸಿದ್ದ ತೆಲುಗಿನ "ಮಳ್ಳಿ ಪೆಳ್ಳಿ' ಸಿನಿಮಾ, ಕನ್ನಡದಲ್ಲಿ "ಮತ್ತೆ ಮದುವೆ' ಶೀರ್ಷಿಕೆಯಲ್ಲಿ ಬಿಡುಗಡೆಯಾಗಿತ್ತು. ಆದರೆ, ನರೇಶ್ ಕನ್ನಡದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿರಲಿಲ್ಲ. ಇದೀಗ ತಮ್ಮ 325ನೇ ಚಿತ್ರವಾದ "ಶುಭಕೃತ್ ನಾಮ ಸಂವತ್ಸರ'ದ ಮೂಲಕ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡುತ್ತಿದ್ದಾರೆ.
ಇದೇ 19ರಂದು ಅವರ ಪಾತ್ರವನ್ನು ಪರಿಚಯಿಸಲು ಚಿತ್ರತಂಡ ಸಿದ್ಧತೆ ನಡೆಸಿದೆ. ನಿರ್ದೇಶಕ ಸಜ್ಜನ್, "ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸಿನಿಮಾ ಮೂಡಿಬರಲಿದೆ. ಹೀಗಾಗಿ ಎರಡೂ ಭಾಷೆಗಳ ಕಲಾವಿದರು ಚಿತ್ರದಲ್ಲಿ ಇರಲಿದ್ದಾರೆ. ಸೆಪ್ಟೆಂಬರ್ನಲ್ಲೇ ಸಿನಿಮಾ ಘೋಷಣೆಯಾದರೂ, ಎರಡು ಭಾಷೆಗಳ ಕಲಾವಿದರ ಡೇಟ್ಸ್ ಪಡೆಯುವುದು ತಡವಾದ ಕಾರಣ ಫೆಬ್ರವರಿಯಲ್ಲಿ ಚಿತ್ರೀಕರಣ ಪ್ರಾರಂಭಿಸಲಿದ್ದೇವೆ. ನರೇಶ್ ಸರ್ ಇದೇ ಮೊದಲ ಬಾರಿಗೆ ಒಂದು ವಿಭಿನ್ನ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪಾತ್ರದ ಬಗ್ಗೆ ಹೇಳಿದಾಗ ಖುದ್ದು ಅವರೇ ಖುಷಿಪಟ್ಟರು. "ಶುಭಕೃತ್ ನಾಮ ಸಂವತ್ಸರ' ಫ್ಯಾಮಿಲಿ ಕಾಮಿಡಿ ಡ್ರಾಮಾ ಆಗಿದ್ದು, ಒಂದು ಸಂವತ್ಸರದಿಂದ ಇನ್ನೊಂದು ಸಂವತ್ಸರದವರೆಗೆ ಹಿಂದೂ ಸಂಪ್ರದಾಯದ ಹಬ್ಬಗಳ ಹಿನ್ನೆಲೆಯಲ್ಲಿ ಕಥೆ ಸಾಗುತ್ತದೆ. ಇದೇ ದಸರಾ ಹಬ್ಬಕ್ಕೆ ರಿಲೀಸ್ ಮಾಡುವ ಪ್ಲ್ಯಾನ್ ಇದೆ' ಎಂದು ಮಾಹಿತಿ ನೀಡುತ್ತಾರೆ.
ವಿಭಿನ್ನ ಭಾಷಾಪ್ರಯೋಗ!
ಸಾಮಾನ್ಯವಾಗಿ ಕನ್ನಡ ಚಿತ್ರಗಳಲ್ಲಿ ಯಾವುದೋ ಒಂದು ಪಾತ್ರದ ಒಂದೆರಡು ಸಾಲು, ಅಥವಾ ಒಂದು ಸೀನ್ನ ಕೆಲ ದೃಶ್ಯಗಳಲ್ಲಿ ಪಾತ್ರಕ್ಕೆ ಅನುಗುಣವಾಗಿ ಬೇರೆ ಭಾಷೆಯನ್ನು ಬಳಸಲಾಗುತ್ತದೆ. ಆದರೆ, "ಶುಭಕೃತ್ ನಾಮ ಸಂವತ್ಸರ'ದಲ್ಲಿ ನಿರ್ದೇಶಕ ಸಜ್ಜನ್ ಕನ್ನಡದ ಜತೆ ತೆಲುಗನ್ನೂ ಬಳಸಲಿದ್ದಾರಂತೆ. ಈ ಬಗ್ಗೆ, "ಬೆಂಗಳೂರಿನಲ್ಲಿ ಪ್ರಾರಂಭವಾಗಿ, ಭಾರತ ಸುತ್ತಿಕೊಂಡು ಬಂದು ಬೆಂಗಳೂರಿನಲ್ಲೇ ಮುಗಿಯುವ ತೆಲುಗು ಕುಟುಂಬದ ಕುರಿತ ಕಥೆಯಿದು. ಹೀಗಾಗಿಯೇ ಕನ್ನಡ, ತೆಲುಗು ಎರಡೂ ಭಾಷೆಗಳ ಚಿತ್ರಗಳಲ್ಲಿ ಎರಡು ಭಾಷೆಗಳೂ ಇರಲಿವೆ. ಕನ್ನಡ ಅವತರಣಿಕೆಯಲ್ಲಿ ಶೇಕಡಾ 70ರಷ್ಟು ಕನ್ನಡ ಮತ್ತು ಶೇಕಡಾ 30ರಷ್ಟು ತೆಲುಗು ಇದ್ದರೆ, ತೆಲುಗು ವರ್ಷನ್ನಲ್ಲಿ ಶೇಕಡಾ 70ರಷ್ಟು ತೆಲುಗು ಮತ್ತು ಶೇಕಡಾ 30ರಷ್ಟು ಕನ್ನಡ ಇರಲಿದೆ' ಎನ್ನುತ್ತಾರೆ.