ಯಕ್ಷ ಚಿತ್ರದಲ್ಲಿ ನಾನಾ ಪಾಟೇಕರ್ 
ಸ್ಯಾಂಡಲ್‌ವುಡ್

Nana Patekar - ಕನ್ನಡದಲ್ಲಿ ಕಮ್​ಬ್ಯಾಕ್​ಗೆ ಸಿದ್ಧತೆ ನಡೆಸುತ್ತಿದ್ದರು ನಾನಾ!

ಪರಮೇಶ್ವರ್​ ಹಿವ್ರಾಳೆ ನಿರ್ದೇಶಿಸುತ್ತಿರುವ, ಶಿವರಾಜಕುಮಾರ್​ ನಟಿಸುತ್ತಿರುವ "ಗುಮ್ಮಡಿ ನರಸಯ್ಯ' ಚಿತ್ರದ ಮೂಲಕ ನಾನಾ 16 ವರ್ಷಗಳ ನಂತರ ಕನ್ನಡಕ್ಕೆ ಕಮ್​ಬ್ಯಾಕ್​ ಮಾಡಬೇಕಿತ್ತು.

ಬೆಂಗಳೂರು: ನಾನಾ ಪಾಟೇಕರ್​ ತಮ್ಮ 48 ವರ್ಷಗಳ ಸಿನಿಜೀವನದಲ್ಲಿ ನಟಿಸಿದ್ದು ಕೇವಲ 90 ಚಿತ್ರಗಳಷ್ಟೇ. ನಾಯಕ, ಖಳನಾಯಕ, ಹಾಸ್ಯಪ್ರಧಾನ, ಪೋಷಕ ಪಾತ್ರಗಳಲ್ಲಿ... ಹೀಗೆ ಎಲ್ಲ ಬಗೆಯ ರೋಲ್​ಗಳಲ್ಲೂ ಅವರು ಮಿಂಚಿದ್ದಾರೆ. ಬಹುತೇಕ ಹಿಂದಿ ಮತ್ತು ಮರಾಠಿ ಚಿತ್ರಗಳಲ್ಲೇ ಅವರು ನಟಿಸಿದ್ದರೂ, ಈ ಸುದೀರ್ ಕರಿಯರ್​ನಲ್ಲಿ ಮೂರು ಬಾರಿಯಷ್ಟೇ ಪರಭಾಷೆಗಳಲ್ಲಿ ಕಾಣಿಸಿಕೊಂಡಿದ್ದರು. "ಬೊಮ್ಮಲಾಟ್ಟಂ' (2008) ಅವರು ನಟಿಸಿದ ಮೊದಲ ತಮಿಳು ಸಿನಿಮಾ. ನಂತರ "ಯಕ್ಷ' (2010) ಮೂಲಕ ಕನ್ನಡಕ್ಕೂ ಪದಾರ್ಪಣೆ ಮಾಡಿದ್ದರು. ನಟ ಯೋಗಿ ತಂದೆಯಾಗಿ ಯೋಗರಾಜ್​ ಪುಲಿಕೇಶಿ ಪಾತ್ರದಲ್ಲಿ ನಾನಾ ಕಾಣಿಸಿಕೊಂಡಿದ್ದರು. ಆ ನಂತರ ತಮಿಳಿನ ರಜಿನಿಕಾಂತ್​ ನಾಯಕನಾಗಿದ್ದ "ಕಾಲಾ' (2018) ಬಳಿಕ ಅವರು ಮತ್ತೆ ದಣದ ಚಿತ್ರಗಳಲ್ಲಿ ಕಾಣಿಸಿಕೊಂಡಿರಲಿಲ್ಲ.

ಯಕ್ಷ ಚಿತ್ರದಲ್ಲಿ ನಾನಾ, ಮಾ. ಹಿರಣ್ಣಯ್ಯ, ಯೋಗಿ ಮತ್ತು ಮಹೇಶ್​

ಕನ್ನಡಕ್ಕೆ ಕಮ್​ಬ್ಯಾಕ್​ ಆಗಬೇಕಿತ್ತು

ಪರಮೇಶ್ವರ್​ ಹಿವ್ರಾಳೆ ನಿರ್ದೇಶಿಸುತ್ತಿರುವ, ಶಿವರಾಜಕುಮಾರ್​ ನಟಿಸುತ್ತಿರುವ "ಗುಮ್ಮಡಿ ನರಸಯ್ಯ' ಚಿತ್ರದ ಮೂಲಕ ನಾನಾ 16 ವರ್ಷಗಳ ನಂತರ ಕನ್ನಡಕ್ಕೆ ಕಮ್​ಬ್ಯಾಕ್​ ಮಾಡಬೇಕಿತ್ತು. ಈ ಬಗ್ಗೆ ನಿರ್ದೇಶಕ ಪರಮೇಶ್ವರ್​, "ನಾನಾ ಪಾಟೇಕರ್​ ಅವರು ನನ್ನ ದೂರದ ಸಂಬಂಧಿಯಾಗಬೇಕು. ನಾನೀಗ ಅವರ ಅಂತಿಮ ದರ್ಶನಕ್ಕೆಂದು ತೆರಳುತ್ತಿದ್ದೇನೆ. "ಗುಮ್ಮಡಿ ನರಸಯ್ಯ' ಅವರಿಗೆ ಇಬ್ಬರು ಗುರುಗಳಿದ್ದರು. ಅವರಲ್ಲಿ ಒಬ್ಬ ಗುರುವಿನ ಪಾತ್ರದಲ್ಲಿ ನಟಿಸಬೇಕೆಂದು ನಾನಾ ಬಳಿ ಕೇಳಿಕೊಂಡೆ. ಅವರು ಕಥೆ ಕೇಳಿ ಖುಷಿಯಿಂದ ಒಪ್ಪಿಕೊಂಡರು. ಕಳೆದ ಆರು ತಿಂಗಳಲ್ಲಿ ಎರಡು ಬಾರಿ ಅವರನ್ನು ಭೇಟಿಯಾಗಿದ್ದೆ. ದಸರಾ ಹಬ್ಬದ ಬಳಿಕ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವವರಿದ್ದರು. ಆದರೆ, ಅಷ್ಟರಲ್ಲಿ ಹೀಗಾಗಿದೆ. ರಾಜಕಾರಣದ ಬಗ್ಗೆ ಯುವಜನತೆ ಪುಸ್ತಕದಲ್ಲಿ ವಿಷಯವಾಗಿ ಓದುತ್ತಾರಷ್ಟೆ. ಆದರೆ, ಭಾರತದ ರಾಜಕಾರಣದಲ್ಲಿ ಏನೆಲ್ಲ ನಡೆಯುತ್ತಿದೆ ಎಂಬುದರ ಬಗ್ಗೆ ಅವರಲ್ಲಿ ಹೆಚ್ಚು ಜ್ಞಾನವಿಲ್ಲ. ಹಣ, ಜಾತಿ, ಧರ್ಮದ ಹಿನ್ನೆಲೆಯಲ್ಲಿ ರಾಜಕಾರಣ ನಡೆಯುತ್ತಿದೆ. ಜನರಲ್ಲಿ ಅವರ ಮತದಾನದ ಶಕ್ತಿಯ ಬಗ್ಗೆ ಅರಿವು ಆಗಬೇಕಿದೆ. ರಾಜಕಾರಣಿಗಳ ಕಾಲರ್​ ಹಿಡಿದು ಕರೆತಂದು ಕೆಲಸ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ಇನ್ನೂ ಹಲವು ವರ್ಷ ಹೋದರೂ ನೀರು, ಶಿಕ್ಷಣ, ರಸ್ತೆ, ಜೀವನಕ್ಕಾಗಿ ಹೋರಾಟ ನಡೆಸುತ್ತಲೇ ಇರಬೇಕಾಗುತ್ತದೆ. ಆ ನಿಟ್ಟಿನಲ್ಲಿ ಈ ಸಿನಿಮಾ ಜನರಲ್ಲಿ ಅರಿವು ಮೂಡಿಸಲಿದೆ ಎಂಬ ಆತ್ಮವಿಶ್ವಾಸವಿದೆ ಎಂದು ಹೇಳಿಕೊಂಡಿದ್ದರು' ಎಂದು ನಾನಾ ಜತೆಗಿನ ಒಡನಾಟದ ಬಗ್ಗೆ ಹೇಳಿಕೊಳ್ಳುತ್ತಾರೆ.

ಡಾ. ರಾಜಕುಮಾರ್ ಜತೆ ನಾನಾ

ನಟಸಾರ್ವಭೌಮ ಜತೆ ನಟಸಾಮ್ರಾಟ

"ಕ್ರಾಂತಿವೀರ್​' (1994) ಚಿತ್ರದ ನಟನೆಗಾಗಿ ನಾನಾ ಪಾಟೇಕರ್​ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ದೊರಕಿತ್ತು. 1995ರಲ್ಲಿ ಅವರು ಅತ್ಯುತ್ತಮ ನಟ ಪ್ರಶಸ್ತಿ ಪಡೆಯುವಾಗ, ಅದೇ ವರ್ಷ ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದ ಡಾ. ರಾಜಕುಮಾರ್​ ಕೂಡ ಇದ್ದರು. ಆಗ ಈ ಇಬ್ಬರು ದಿಗ್ಗಜರು ವೇದಿಕೆ ಮೇಲೆ ಪರಸ್ಪರ ಶುಭಾಶಯ ಹಂಚಿಕೊಂಡಿದ್ದರು.

ನಾನಾ ಪಾಟೇಕರ್

ತುಳುನಲ್ಲಿ ಮಾತನಾಡಿದ್ದರು ನಾನಾ

ನಾನಾ ಪಾಟೇಕರ್​ "ವೆಲ್ಕಮ್​' (2007) ಮತ್ತು "ವೆಲ್ಕಮ್​ ಬ್ಯಾಕ್​' (2015) ಚಿತ್ರಗಳಲ್ಲಿ ಡಾನ್​ ಉದಯ್​ ಶೆಟ್ಟಿ ಪಾತ್ರದಲ್ಲಿ ನಟಿಸಿದ್ದರು. ಪಾತ್ರಕ್ಕಾಗಿ ಕೆಲ ತುಳು ಸಾಲುಗಳನ್ನೂ ಕಲಿತಿದ್ದ ಅವರು, 2024ರಲ್ಲಿ ಮಂಗಳೂರಿಗೆ ಬಂದಿದ್ದಾಗ ತುಳುವಿನಲ್ಲೇ ಮಾತು ಪ್ರಾರಂಭಿಸಿದ್ದು ವಿಶೇಷ.

ನಾನಾ ಜತೆ ನಟ ಕೋಮಲ್ ಕುಮಾರ್
ನಾನು ಪೊಲೀಸರಿಗೆ ಮಾಹಿತಿದಾರನಾಗಿ "ಯಕ್ಷ' ಚಿತ್ರದಲ್ಲಿ ನಟಿಸಿದ್ದೆ. ನಾನಾ ಸರ್​ ಕಾಂಬಿನೇಷನ್​ನಲ್ಲಿ ಮೂರು ದಿನಗಳ ಕಾಲ ಶೂಟಿಂಗ್​ ಮಾಡಿದ್ದೆ. ಅವರೊಬ್ಬ ಲೆಜೆಂಡ್​. ನಟನೆ ಮಾತ್ರವಲ್ಲ ವ್ಯಕ್ತಿತ್ವದಲ್ಲೂ ಸ್ಪೂರ್ತಿ. ಅವರ ಮೌನದಲ್ಲೂ ನಟನೆಯಿರುತ್ತಿತ್ತು. ಅವರೊಬ್ಬ ಅಪರೂಪದ ಕಲಾವಿದ. "ನಟಸಾಮ್ರಾಟ್​' ಚಿತ್ರದಲ್ಲಿ ಅದೆಷ್ಟು ಅದ್ಭುತವಾಗಿ ನಟಿಸಿದ್ದರು. "ವೆಲ್ಕಮ್​'ನಲ್ಲಿ ಕಾಮಿಡಿಯನ್​ಆಗಿ, "ಖಾಮೋಷಿ'ಯಲ್ಲಿ ಮೂಗನಾಗಿ... ಎಂತಹ ವರ್ಸಟೈಲ್​ ನಟ. ಪ್ರತಿಯೊಬ್ಬ ಕಲಾವಿದರಿಗೂ ಅವರು ಸ್ಪೂರ್ತಿ. - ಕೋಮಲ್​ ಕುಮಾರ್​, ನಟ