Vanditha Gowda - "ನಮೋ ಭೂತಾತ್ಮ 2' ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಮೈಸೂರು ಮೂಲದ ನಟಿ ಮೋನಿಕಾ ಗೌಡ ಇದೀಗ ವಂದಿತಾ ಗೌಡ ಎಂದು ಹೆಸರು ಬದಲಿಸಿಕೊಂಡಿದ್ದಾರೆ. ಹೊಸ ಹೆಸರಿನಲ್ಲಿ ಹೊಚ್ಚ ಹೊಸ ಘೋಷಣೆ ಮಾಡಿರುವ ಅವರು, "ಲಕ್ಷ್ಮೀಪುತ್ರ' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. "ಉಪಾಧ್ಯಕ್ಷ' ಬಳಿಕ ಹಾಸ್ಯನಟ ಚಿಕ್ಕಣ್ಣ ನಾಯಕನಾಗಿ ನಟಿಸುತ್ತಿರುವ ಈ ಚಿತ್ರವನ್ನು ವಿಜಯ್ ಸ್ವಾಮಿ ನಿರ್ದೇಶಿಸುತ್ತಿದ್ದಾರೆ.
"ನಮೋ ಭೂತಾತ್ಮ 2' ಚಿತ್ರದಲ್ಲಿ ಎರಡನೇ ನಾಯಕಿಯಾಗಿದ್ದ ವಂದಿತಾ, "ಲಕ್ಷ್ಮೀಪುತ್ರ'ದಲ್ಲಿ ನಾಯಕಿಯಾಗಿ ಪದಾರ್ಪಣೆ ಮಾಡಿದ್ದು, "ಕುಟುಂಬ ಮತ್ತು ಚಿತ್ರತಂಡದವರು ಹೆಸರು ಬದಲಿಸಿಕೊಳ್ಳಲು ಹೇಳುತ್ತಿದ್ದರು. ನನ್ನ ಜನ್ಮದಿನಾಂಕಕ್ಕೆ ವ ಮತ್ತು ನ ಅಕ್ಷರಗಳ ಹೆಸರು ಹೊಂದುತ್ತದೆ ಎಂದಾಗ, ವಂದಿತಾ ಗೌಡ ಹೆಸರನ್ನು ಆಯ್ಕೆ ಮಾಡಿಕೊಂಡೆ. "ಲಕ್ಷ್ಮೀಪುತ್ರ' ಚಿತ್ರದಲ್ಲಿ ಒಂದೊಳ್ಳೆ ಗಟ್ಟಿ ಪಾತ್ರದ ಮೂಲಕ ನಾಯಕಿಯಾಗಿರುವುದು ಖುಷಿ ನೀಡಿದೆ. ಬಬ್ಲಿಯಾಗಿದ್ದರೂ ತಿಳುವಳಿಕೆ ಇರುವ ಬುದ್ಧಿವಂತ ಹಳ್ಳಿ ಹುಡುಗಿ ಪಾತ್ರ ನನ್ನದು' ಎಂದು ಸಂತಸ ಹಂಚಿಕೊಳ್ಳುತ್ತಾರೆ.
ಕೆಡಿಯಲ್ಲಿ ನಟನೆ
"ಲಕ್ಷ್ಮೀಪುತ್ರ' ಚಿತ್ರದ ಮಾತಿನ ಭಾಗದ ಶೂಟಿಂಗ್ ಪೂರ್ಣಗೊಂಡಿದ್ದು, ಸದ್ಯ ತಂಡ ಡಬ್ಬಿಂಗ್ನಲ್ಲಿ ಬಿಜಿಯಾಗಿದೆ. ಇನ್ನು ನಾಲ್ಕು ಹಾಡುಗಳು ಮತ್ತು ಕೆಲ ಪ್ಯಾಚ್ ವರ್ಕ್ ಮಾತ್ರ ಬಾಕಿಯಿದೆ. ಇದರ ಜತೆಗೆ ವಂದಿತಾ ಪ್ರೇಮ್ ನಿರ್ದೇಶಿಸುತ್ತಿರುವ ಧ್ರುವ ಸರ್ಜಾ ನಾಯಕನಾಗಿರುವ "ಕೆಡಿ' ಚಿತ್ರದಲ್ಲೂ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. "ಕೆಡಿ' ಇದೇ ಏ.30ರಂದು ತೆರೆಗೆ ಬರಲಿದ್ದು, ಆ ಬಳಿಕ "ಲಕ್ಷ್ಮೀಪುತ್ರ' ರಿಲೀಸ್ ಆಗಲಿದ್ದಾನೆ. "ಇನ್ನೂ ಎರಡು ಕಥೆಗಳನ್ನು ಕೇಳಿದ್ದೇನೆ. ಆದರೆ, ಸದ್ಯಕ್ಕೆ ಓಕೆ ಮಾಡಿಲ್ಲ. ಈಗಷ್ಟೇ "ಲಕ್ಷಿ$್ಮಪುತ್ರ' ಲುಕ್ ರಿವೀಲ್ ಆಗಿದೆ. ಉತ್ತಮ ಪಾತ್ರವೂ ಸಿಕ್ಕಿದೆ. ನಾಯಕಿ ಪಾತ್ರ ಅಂದರೆ ಮೂರ್ನಾಲ್ಕು ಸೀನ್, ಒಂದೆರಡು ಹಾಡುಗಳಿಗಷ್ಟೇ ಸೀಮಿತ ಎಂಬ ಮಾತಿದೆ. ಆದರೆ, "ಲಕ್ಷ್ಮೀಪುತ್ರ'ದಲ್ಲಿ ಒಳ್ಳೆ ಪಾತ್ರ ಸಿಕ್ಕಿದೆ. ಅಂತಹ ಉತ್ತಮ ಪಾತ್ರಗಳ ನಿರೀಕ್ಷೆಯಲ್ಲಿದ್ದೇನೆ' ಎಂದು ಭರವಸೆ ವ್ಯಕ್ತಪಡಿಸುತ್ತಾರೆ ವಂದಿತಾ ಗೌಡ.