- ರಂಗಭೂಮಿ ಕಲಾವಿದೆ ಯಲ್ಲಾಪುರ ಮೂಲದ ನಟಿ ನಾಗಶ್ರೀ ಹೆಬ್ಬಾರ್
- ವಿಕಲ್ಪ ಚಿತ್ರದಲ್ಲಿ ಸಮುದ್ಯತಾ ಎಂಬ ಪಾತ್ರ ನಿರ್ವಹಣೆ
- ಪಾತ್ರಕ್ಕಾಗಿ ತಿಂಗಳು ಕಾಲ ರಿಹರ್ಸಲ್ ಮಾಡಿದ ನಟಿ
ಬೆಂಗಳೂರು: ಐಟಿ ಉದ್ಯೋಗದಲ್ಲಿದ್ದುಕೊಂಡು ರಂಗಭೂಮಿ ಹಿನ್ನೆಲೆಯ ಹಲವು ಕಲಾವಿದರು ಕನ್ನಡ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಮಿಂಚುತ್ತಿದ್ದಾರೆ. ಇದೀಗ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ರಂಗಭೂಮಿ ಪ್ರತಿಭೆ ನಾಗಶ್ರೀ ಹೆಬ್ಬಾರ್ ‘ವಿಕಲ್ಪ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಐಟಿ ಉದ್ಯೋಗಿ ಪೃಥ್ವಿರಾಜ್ ಪಾಟೀಲ್ ನಟಿಸಿ, ನಿರ್ದೇಶಿಸಿರುವ ಸೈಕಲಾಜಿಕಲ್-ಥ್ರಿಲ್ಲರ್ ‘ವಿಕಲ್ಪ’ ಬಿಡುಗಡೆಗೆ ಸಿದ್ಧವಾಗಿದ್ದು, ಇದೇ ಚಿತ್ರದಲ್ಲಿ ನಾಗಶ್ರೀ ಹೆಬ್ಬಾರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಸಿನಿಮಾ ಜರ್ನಿ ಹಾಗೂ ಪಾತ್ರದ ಕುರಿತು, ‘ಪ್ರಸ್ತುತ ನಾನು ಐಟಿ ಉದ್ಯೋಗಿ ಜತೆಗೆ ರಂಗಭೂಮಿ ಕಲಾವಿದೆ. ರಂಗತಂಡದ ಸಂಪರ್ಕದಿಂದ ಈ ಚಿತ್ರಕ್ಕೆ ಅವಕಾಶ ದೊರೆಯಿತು. ಆಡಿಷನ್ ಮೂಲಕ ಆಯ್ಕೆಯಾದೆ. ಇಲ್ಲಿ ನನ್ನದು ಸಮುದ್ಯತಾ ಎಂಬ ಪಾತ್ರ. ಸಮುದ್ರಮಂಥನದ ವೇಳೆ ಜನಿಸಿದವಳನ್ನು ಸಮುದ್ಯತಾ ಎನ್ನುತ್ತಾರೆ. ಅವಳ ಮನಸ್ಸಿನೊಳಗೆ ಕೆಲ ಏರುಪೇರು, ತೊಳಲಾಟಗಳಿರುತ್ತವೆ. ಅದನ್ನು ಹೇಗೆ ಗೆಲ್ಲುತ್ತಾಳೆ? ಜತೆಗೆ ಹಳೆಯದ್ದನ್ನು ಯೋಚಿಸಿ ಕೊರಗುವುದಕ್ಕಿಂತ ಮುಂದೆ ಇರುವ ಸುಂದರವಾದ ಜೀವನವನ್ನು ಅನುಭವಿಸಬೇಕು ಎಂಬ ಸಾರವನ್ನು ತಿಳಿಸುವ ಪಾತ್ರ. ವರ್ಷದ ಮುಂಚೆಯೇ ನನಗೆ ಈ ಚಿತ್ರದ ಸ್ಕ್ರಿಪ್ಟ್ ಕೊಟ್ಟಿದ್ದರು. ಅದನ್ನು ಅಧ್ಯಯನ ಮಾಡಿದೆ. ಬಳಿಕ ಕೆಲ ತಿಂಗಳು ಪಾತ್ರಕ್ಕಾಗಿ ರಿಹರ್ಸಲ್ ಮಾಡಿದೆವು’ ಎಂದು ಹೇಳಿಕೊಳ್ಳುತ್ತಾರೆ.
ಸಾಮಾನ್ಯವಾಗಿ ಮತ್ತೊಬ್ಬರ ಕಷ್ಟ, ನೋವುಗಳ ಬಗ್ಗೆ ಹೇಳುವಾಗ ‘ಒಂದೇ ಕಣ್ಣಲ್ಲಿ ನೀರು ಹಾಕುತ್ತಿದ್ದಾರೆ’ ಎನ್ನುತ್ತೇವೆ. ಆದರೆ, ‘ವಿಕಲ್ಪ’ದಲ್ಲಿ ನಾಗಶ್ರೀ ನಿಜವಾಗಲೂ ಒಂದೇ ಕಣ್ಣಿನಲ್ಲಿ ನೀರು ಹಾಕುವ ದೃಶ್ಯದಲ್ಲಿ ನಟಿಸಿದ್ದಾರಂತೆ. ‘ಕಣ್ಣು ಮುಚ್ಚದೆ ಒಂದೇ ಕಣ್ಣಿನಲ್ಲಿ ಕಣ್ಣೀರು ಹಾಕುವ ದೃಶ್ಯದ ಶೂಟಿಂಗ್ ನನಗೆ ತುಂಬಾ ಸವಾಲಿನದ್ದಾಗಿತ್ತು. ಕಣ್ಣಿಗೆ ಗ್ಲಿಸರಿನ್ ಕೂಡ ಹಾಕುವಂತಿರಲಿಲ್ಲ. ಹೀಗಾಗಿಯೇ ತುಂಬಾ ಕಷ್ಟವಾಗುತ್ತಿತ್ತು. ಸುಮಾರು 10 ಟೇಕ್ ತೆಗೆದುಕೊಂಡೆ. ಕೊನೆಗೆ ಪೃಥ್ವಿ ಸರ್ ಧೈರ್ಯ ತುಂಬಿ ಪಾತ್ರ ಮಾಡಿಸಿದರು’ ಎಂದು ನಾಗಶ್ರೀ ಹೆಬ್ಬಾರ್ ಮಾಹಿತಿ ನೀಡುತ್ತಾರೆ. ವಿಕಲ್ಪ ಚಿತ್ರವನ್ನು ಐಟಿ ಉದ್ಯಮಿ ಪೃಥ್ವಿರಾಜ್ ಪಾಟೀಲ್ ನಿರ್ದೇಶಿಸಿದ್ದು, ಸುರೂಸ್ ಟಾಕೀಸ್ ಬ್ಯಾನರಡಿಯಲ್ಲಿ ಇಂದಿರಾ ಶಿವಸ್ವಾಮಿ ನಿರ್ಮಿಸಿದ್ದಾರೆ.