ಚಿತ್ರ: ಮಿ. ಲಕ್ಕಿ
ನಿರ್ದೇಶನ: ಹರ್ಷಿತ್ ರಂಗಸ್ವಾಮಿ
ತಾರಾಗಣ: ರಾಮ್ ತೇಜ್, ರಿಷಿ ಶೆಟ್ಟಿ, ಐಶ್ವರ್ಯಾ ಶೆಟ್ಟಿ, ಶ್ರೀನಿಧಿ ಬೆಂಗಳೂರು ಮತ್ತಿತರರು
ರೇಟಿಂಗ್: 3.5
ಶಿವ ಸ್ಥಾವರಮಠ
ಕೆಲಸ ಕಳೆದಕೊಂಡ ಲಕ್ಷ್ಮಣ ಅಲಿಯಾಸ್ ಲಕ್ಕಿ (ರಾಮ್) ಅಸಹಾಯಕನಾಗಿ ಬಸ್ಸ್ಟ್ಯಾಂಡ್ವೊಂದರಲ್ಲಿ ಕುಳಿತಿರುತ್ತಾನೆ. ಆತನ ಕಣ್ಣಲ್ಲಿ ಎರಡು ಕನಸುಗಳಿವೆ. ಕೈತಪ್ಪಿ ಹೋದ ಮನೆಯನ್ನು ಮರಳಿ ಪಡೆಯುವುದು ಮತ್ತು ತಂಗಿ ಲಕ್ಷ್ಮೀಯನ್ನು (ಐಶ್ವರ್ಯಾ) ಓದಲು ವಿದೇಶಕ್ಕೆ ಕಳಿಸುವುದು. ಈ ಎರಡು ಈಡೇರಬೇಕಾದರೆ ಆತನಿಗೆ ಕೋಟಿ ಲೆಕ್ಕದಲ್ಲಿ ಹಣ ಬೇಕು. ಆದರೆ, ಕೈಯಲ್ಲಿ ಬಿಡಿಗಾಸೂ ಇಲ್ಲ. ಇನ್ನೇನ್ ಬಸ್ಸ್ಟ್ಯಾಂಡ್ನಿಂದ ಎದ್ದು ಹೋಗಬೇಕು ಎನ್ನುವಷ್ಟರಲ್ಲಿ ಅಪರಿಚಿತನೊಬ್ಬ ಲಕ್ಕಿಗೆ ಟೋಪಿ ನೀಡಿ, ‘ಇದು ಅದೃಷ್ಟದ ಕ್ಯಾಪ್. ನಿನ್ನ ತಲೆ ಮೇಲೆ ಇರುವವರೆಗೂ ನಿನ್ನಲ್ಲಿ ದುಡ್ಡೇ ದುಡ್ಡು. ಆದರೆ, ಒಂದನ್ನು ಪಡೆಯಬೇಕಾದರೆ, ಮತ್ತೊಂದನ್ನು ಕಳೆದುಕೊಳ್ಳಬೇಕಾಗುತ್ತದೆ. ಅದೃಷ್ಟದ ಹೆಸರಿನ ಮೇಲೆ ರಕ್ತಹೀರುವ ರಾಕ್ಷಸ’ ಎಂದು ಹೇಳಿ ಮಾಯವಾಗುತ್ತಾನೆ. ಮೊದಲಿಗೆ ನಿರ್ಲ್ಯಕ್ಷಿಸುವ ಲಕ್ಕಿ, ಟೋಪಿಯ ಉಪಯೋಗ ಅನುಭವಕ್ಕೆ ಬಂದ ಬಳಿಕ ಅದನ್ನು ಧರಿಸುತ್ತಾನೆ. ಅಲ್ಲಿಂದ ಆತನ ಅದೃಷ್ಟವೇ ಬದಲಾಗುತ್ತದೆ. ಅದನ್ನ ಬಳಸಿಕೊಂಡು ಹೆಚ್ಚು ದುಡ್ಡು ಮಾಡಲು ಲಕ್ಕಿ ಬೆಟ್ಟಿಂಗ್ ದಂಧೆಗಿಳಿಯುತ್ತಾನೆ. ಮೊದಲಿಗೆ ಗೆಲ್ಲುವ ಕುದುರೆಯಂತೆ ಓಡುವ ಆತ ರಾತ್ರೋರಾತ್ರಿ ಕೋಟ್ಯಧಿಪತಿಯಾಗುತ್ತಾನೆ. ಆದರೆ, ಕೇವಲ ದುಡ್ಡಿನಿಂದಲೇ ತನ್ನ ಕನಸುಗಳು ಈಡೇರಲ್ಲ ಎಂದು ಆತ ಕೊನೇ ಬಾರಿ ಇರುವ ಹಣವನ್ನೆಲ್ಲ ಬೆಟ್ಟಿಂಗ್ಗೆ ಸುರಿಯುತ್ತಾನೆ. ಅದರಲ್ಲಿ ಗೆಲ್ಲುತ್ತಾನಾ? ಇಲ್ಲವಾ? ಎನ್ನುವ ಪ್ರಶ್ನೆಯೊಂದಿಗೆ ‘ಮಿ. ಲಕ್ಕಿ’ ಕಥೆಯ ಮತ್ತೊಂದು ಆಯಾಮ ತೆರೆದುಕೊಳ್ಳುತ್ತದೆ.
ಮನುಷ್ಯ ಅತಿಯಾಸೆಗೆ ಬಿದ್ದರೆ ಹೇಗೆ ತನ್ನ ಆರೋಗ್ಯ ಕಳೆದುಕೊಳ್ಳುತ್ತಾನೆ ಎಂಬುದನ್ನೇ ನಿರ್ದೇಶಕ ಹರ್ಷಿತ್ ರಂಗಸ್ವಾಮಿ ಕ್ಯಾಪ್ಅನ್ನು ರೂಪಕವಾಗಿ ಬಳಸಿಕೊಂಡು ‘ಮಿ. ಲಕ್ಕಿ’ ಕಥೆ ನಿರೂಪಿಸಿದ್ದಾರೆ. ಆರಂಭದಿಂದ ಕ್ಲೈಮ್ಯಾಕ್ಸ್ವರೆಗೆ ಕಥೆಯಲ್ಲಿ ಕುತೂಹಲ ಕಾಯ್ದುಕೊಂಡಿದ್ದಾರೆ. ಅದೃಷ್ಟದ ಆಟ ಹಾಗೂ ಜೀವನ ಹೇಳುವ ಪಾಠಗಳ ಮೇಲಿನ ಸಂಭಾಷಣೆಗಳು ಇಷ್ಟವಾಗುತ್ತವೆ. ಕೆಲವು ಸೂಕ್ಷ್ಮ ವಿಚಾರಗಳನ್ನು ಅಚ್ಚುಕಟ್ಟಾಗಿ ಪ್ರೇಕ್ಷಕರಿಗೆ ದಾಟಿಸಲು ಯತ್ನಿಸಿದ್ದಾರೆ. ನಾಯಕ ರಾಮ್ ತೇಜ್ ವಯಸ್ಸಿಗೆ ಮೀರಿದ ಪಾತ್ರವಾದರೂ ಚೆನ್ನಾಗಿ ನಿರ್ವಹಿಸಿದ್ದಾರೆ. ರಿತಿ, ಐಶ್ವರ್ಯಾ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಶ್ರೀನಿಧಿ ಬೆಂಗಳೂರು ಪಾತ್ರ ಏನೆಂದು ಥಿಯೇಟರ್ನಲ್ಲಿಯೇ ನೋಡಬೇಕು. ಥ್ರಿಲ್ಲಿಂಗ್ ಸನ್ನಿವೇಶಗಳಲ್ಲಿ ಪ್ರಸನ್ನ ಕುಮಾರ್ ಸಂಗೀತ ಗಮನಸೆಳೆಯುತ್ತದೆ.