Sudharani Post: ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಫೇಕ್ ನ್ಯೂಸ್ಗಳ ಹಾವಳಿ ಹೆಚ್ಚಾಗಿದೆ. ದಂಪತಿಗಳ ವಿಚ್ಛೇದನ, ನಟಿಯರ ಪ್ರೀತಿ, ಪ್ರೇಮದಂತಹ ಖಾಸಗಿ ವಿಚಾರಗಳ ಬಗ್ಗೆ ಇಲ್ಲಸಲ್ಲದ ಸುದ್ದಿ ಮಾಡಲಾಗುತ್ತಿದೆ. ಅನುಪಮಾ ಗೌಡ ಅವರ ನಿಶ್ಚಿತಾರ್ಥ ಬಗ್ಗೆ ಎದ್ದಿದ್ದ ಊಹಾಪೋಹಕ್ಕೆ ಅವರು ಸರಿಯಾಗಿ ಕೌಂಟರ್ ಕೊಟ್ಟು ಟ್ರೋಲ್ ಪೇಜ್ಗಳ ಚಳಿ ಬಿಡಿಸಿದ್ದರು. ಸದ್ಯ ಈ ಸಾಲಿನಲ್ಲಿ ಈಗ ಹಿರಿಯ ಮತ್ತು ಯಂಗ್ ಅಂಡ್ ಎನರ್ಜಿಟಿಕ್ ಹೀರೋಯಿನ್ ಸುಧಾರಾಣಿಯವರು ಸೇರಿದ್ದಾರೆ.
ಯೂಟ್ಯೂಬ್, ಇನ್ಸ್ಟಾಗ್ರಾಮ್ನ ವ್ಯೂವ್ಸ್ ಮತ್ತು ಲೈಕ್ಸ್ ಹಾಗೂ ಫಾಲೋವರ್ಸ್ಗಾಗಿ ಹಲವರು ಸುಳ್ಳು ಸುದ್ದಿಗಳನ್ನು ಬರೆದು ಅದನ್ನೇ ಥಂಬ್ನೇಲ್ನಲ್ಲಿ ಹಾಕಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ, ನಟ-ನಟಿಯರು ಸಂದರ್ಶನದಲ್ಲಿ ಮಾತನಾಡದ ವಿಚಾರವನ್ನು ಉಲ್ಲೇಖಿಸಿ, ಅಪಪ್ರಚಾರ ಮಾಡುವುದು ವಾಡಿಕೆಯಾಗಿದೆ. ಸುಧಾರಾಣಿಯವರಿಗೆ ನಟ ಶಿವರಾಜ್ ಕುಮಾರ್ ಮೇಲೆ ಪ್ರೀತಿ ಇತ್ತು ಎನ್ನುವ ಬಗ್ಗೆಯೂ ರೂಮರ್ಸ್ ಎಬ್ಬಿಸಿದ್ದು, ಆ ಬಗ್ಗೆ ಸ್ಕ್ರೀನ್ಶಾಟ್ ಹಂಚಿಕೊಂಡು ನಟಿ ಕಿಡಿಕಾರಿದ್ದಾರೆ. ಕೇಸ್ ದಾಖಲಿಸುವ ಎಚ್ಚರಿಕೆ ಕೊಟ್ಟಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಏನಿದೆ?
1986ರಲ್ಲಿ ತೆರೆಕಂಡ 'ಆನಂದ್' ಸಿನಿಮಾ ಮೂಲಕ ಸುಧಾರಾಣಿ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ರಣರಂಗ, ಕಿಲಾಡಿ ಕಿಟ್ಟು, ದೇವತಾ ಮನುಷ್ಯ, ಆಸೆಗೊಬ್ಬ ಮೀಸೆಗೊಬ್ಬ, ಮನೆ ದೇವ್ರು ಹೀಗೆ ನಾನಾ ಹಿಟ್ ಸಿನಿಮಾಗಳನ್ನು ಸ್ಯಾಂಡಲ್ವುಡ್ಗೆ ಕೊಟ್ಟರು.
ಸದ್ಯ ಅವರ ಮತ್ತು ಶಿವಣ್ಣ ನಡುವಿನ ಸಂಬಂಧದ ಬಗ್ಗೆ ಚಾನೆಲ್ವೊಂದು ಮಾಡಿರುವ ಅಪಪ್ರಚಾರದ ಸ್ಕ್ರೀನ್ ಶಾಟ್ ಅನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಹೀಗಿದೆ, "ಆನಂದ್ ಸಿನಿಮಾದ ನಂತರ ಸುಧಾರಾಣಿಯವರು ಶಿವಣ್ಣನನ್ನು ಮದುವೆಯಾಗಬೇಕೆಂದು ಆಸೆ ಪಟ್ಟಿದ್ದರು. ಶಿವಣ್ಣನ ಮೇಲೆ ಅವರಿಗೆ ಪ್ರೀತಿ ಭಯ ಎರಡು ಇತ್ತು. ಡಾ. ರಾಜ್ ಕುಮಾರ್ ಮಗ ಆದ ಕಾರಣ ಇದನ್ನು ತೋರ್ಪಡಿಸಿಕೊಳ್ಳಲು ಆಗದೆ ಸುಮ್ಮನಾದರು ಈ ವಿಚಾರವನ್ನು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ" ಎಂದು ಸುಳ್ಳು ಮಾಹಿತಿಯನ್ನು ಹಂಚಿಕೊಂಡಿದೆ.
ಸುಧಾರಾಣಿ ಕೌಂಟರ್ ಕೊಟ್ಟಿದ್ದು ಹೀಗೆ
ಅಂಬರೀಶ್ ಅವರ ಫೇಮಸ್ ಡೈಲಾಗ್ "ನನ್ನ ಮೇಲೆ ಆಣೆ ಇಟ್ಟು ಹೇಳು" ಎನ್ನುವ ವಿಡಿಯೋ ಜೊತೆಗೆ ಅವರ ಸಾಕು ನಾಯಿ ಉತ್ತರಿಸುವಂತೆ ವಿಡಿಯೋ ಮಾಡಿದ್ದಾರೆ. ಇದು ಫೇಕ್ ನ್ಯೂಸ್ ಎಂದಿದ್ದು, ಸುಳ್ಳು ಸುದ್ದಿ ಪ್ರಚಾರ ಮಾಡಿದರೆ ಕೇಸ್ ದಾಖಲಿಸೋದಾಗಿ ಎಚ್ಚರಿಕೆ ಕೊಟ್ಟಿದ್ದಾರೆ. "ದಯವಿಟ್ಟು ಸ್ವಲ್ಪನಾದರೂ ನೈತಿಕತೆಯನ್ನು ಬೆಳೆಸಿಕೊಳ್ಳಿ. ನಿಮ್ಮ ವ್ಯೂವ್ಸ್ಗಾಗಿ ಸುಳ್ಳು ಸುದ್ದಿ ಹರಡೋದು ನಿಜಕ್ಕೂ ಬೇಸರ ಸಂಗತಿ. ಕಷ್ಟಪಟ್ಟು ಕೆಲಸ ಮಾಡಿ, ಪ್ರಾಮಾಣಿಕತೆಯಿಂದ ನಡೆದುಕೊಂಡು ಯಶಸ್ಸು ಕಂಡುಕೊಳ್ಳಿ" ಎಂದು ಬರೆದುಕೊಂಡಿದ್ದಾರೆ, (ಏಜೆನ್ಸೀಸ್).