ಕನ್ನಡದ ಮೂರು ಹೊಸ ಸಿನಿಮಾಗಳು
- ಒಂದೇ ದಿನವೇ ಮೂರು ಚಿತ್ರಗಳಿಗೆ ಮುಹೂರ್ತ
- ಮ್ಯಾಟ್ರಿಕ್ ಸಂಸ್ಥೆಯ ಹ್ಯಾಟ್ರಿಕ್ ಸಾಧನೆ
- ಸೀತಾ ರಾಮರಾಜು, ದರ್ಶನ ಸೇರಿ ಇನ್ನೊಂದು ಹೆಸರಿಡದ ಚಿತ್ರಕ್ಕೆ ಚಾಲನೆ
ಬೆಂಗಳೂರು: ಕನ್ನಡದ ಒಂದೇ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಮೂರು ಹೊಸ ಸಿನಿಮಾಗಳಿಗೆ ಇತ್ತೀಚೆಗೆ ಮುಹೂರ್ತ ನೆರವೇರಿಸಲಾಯಿತು. ಈ ಮೂಲಕ ‘ಮ್ಯಾಟ್ರಿಕ್’ ಸಂಸ್ಥೆ ಒಂದೇ ದಿನ ಹ್ಯಾಟ್ರಿಕ್ ಬಾರಿಸಿದೆ. ‘ಅಂದೊಂದಿತ್ತು ಕಾಲ’ ಖ್ಯಾತಿಯ ಕೀರ್ತಿ ಕೃಷ್ಣಪ್ಪ ನಿರ್ದೇಶನದಲ್ಲಿ ‘ಸೀತಾ ರಾಮ ರಾಜು’ ಸೆಟ್ಟೇರಿತು. ಈ ಚಿತ್ರದಲ್ಲಿ ‘ಬಿಗ್‌ಬಾಸ್ ಕನ್ನಡ ಸೀಸನ್ 10’ ವಿಜೇತ ಕಾರ್ತಿಕ್ ಮಹೇಶ್ ಮುಖ್ಯಭೂಮಿಕೆಯಲ್ಲಿದ್ದು, ಅವರಿಗೆ ‘ಬ್ಯಾಡ್ ಮ್ಯಾನರ್ಸ್’ ನಟಿ ಪ್ರಿಯಾಂಕಾ ಕುಮಾರ್ ಜೋಡಿಯಾಗಿದ್ದಾರೆ. ರವಿಶಂಕರ್, ‘ಮಹಾನಟಿ’ ಶೋ ನ ದೀಪಿಕಾ, ಜಗಪ್ಪ ಕಲಾಬಳಗದಲ್ಲಿದ್ದಾರೆ. ಚಿಕ್ಕಮಗಳೂರು, ಬೆಂಗಳೂರು ಸುತ್ತ ನಡೆಯುವ ಕಥೆ ಇದಾಗಿದೆ. ಕ್ರಾಂತಿ ಸಂಭಾಷಣೆ, ರಾಘವೇಂದ್ರ ಸಂಗೀತ, ಅಭಿಲಾಶ್ ಕಳತಿ ಛಾಯಾಗ್ರಹಣ ಚಿತ್ರಕ್ಕಿದೆ.
ಪೃಥ್ವಿಯ ಹೊಸ ‘ದರ್ಶನ’
‘ಚೌಕಿದಾರ್’ ಬಳಿಕ ನಟ ಪೃಥ್ವಿ ಅಂಬಾರ್ ನಟನೆಯ ಹೊಸ ಚಿತ್ರ ೋಷಣೆಯಾಗಿದ್ದು, ‘ದರ್ಶನ’ ಎಂದು ಹೆಸರಿಡಲಾಗಿದೆ. ಇಲ್ಲಿ ಅವರಿಗೆ ಕಿರುತೆರೆ ನಟಿ ನಿಶಾ ರವಿಕೃಷ್ಣನ್ ಜೋಡಿಯಾಗಿದ್ದಾರೆ. ಈ ಕಾಮಿಡಿ ಡ್ರಾಮಾಕ್ಕೆ ಹೊಸಬರಾದ ಸ್ವಸ್ತಿಕ್ ನಿರ್ದೇಶನವಿರಲಿದೆ. ಬೆಂಗಳೂರು ಸುತ್ತಮುತ್ತ ಗುರುವಾರದಿಂದ ಶೂಟಿಂಗ್ ಆರಂಭವಾಗಲಿದೆ. ಪೃಥ್ವಿ ಜತೆ ಗೌರವ್ ಶೆಟ್ಟಿ, ಸಂತು ಪ್ರಮುಖ ಪಾತ್ರದಲ್ಲಿದ್ದಾರೆ.
ಎದ್ದೇಳು ನಾಣಿ!
ಈ ಮಧ್ಯೆ, ‘ಕೆಮಿಸ್ಟ್ರಿ ಆ್ ಕರಿಯಪ್ಪ’, ‘ಲವ್ ಯು ಮುದ್ದು’ ಖ್ಯಾತಿಯ ನಿರ್ದೇಶಕ ಕುಮಾರ್ ಆ್ಯಕ್ಷನ್-ಕಟ್ ಹೇಳಲಿರುವ ಇನ್ನೂ ಹೆಸರಿಡದ ಚಿತ್ರಕ್ಕೂ ಚಾಲನೆ ದೊರೆಯಿತು. ಈ ಚಿತ್ರದಲ್ಲಿ ತಬಲಾ ನಾಣಿ ಮುಖ್ಯಭೂಮಿಕೆಯಲ್ಲಿದ್ದು, ಉಳಿದಂತೆ ಕಲಾ ಹಾಗೂ ತಾಂತ್ರಿಕ ಬಳಗದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ವಿಶೇಷ ಅಂದರೆ 2009ರ ಹಿಟ್ ಸಿನಿಮಾ ‘ಎದ್ದೇಳು ಮಂಜುನಾಥ’ ಚಿತ್ರದಲ್ಲಿ ನಟ ತಬಲಾ ನಾಣಿ ಕಣ್ಣು ಕಾಣದ ನಾಣಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ 17 ವರ್ಷಗಳ ನಂತರ ಅದೇ ಪಾತ್ರದ ಮುಂದುವರಿದ ಕಥೆ ಹೇಳಲಿದ್ದಾರೆ ನಿರ್ದೇಶಕ ಕುಮಾರ್. ‘ಎದ್ದೇಳು ಮಂಜುನಾಥ’ದಲ್ಲಿ ನಾಣಿ ಸಿನಿಮಾ ನಿರ್ದೇಶಕನಾಗುವ ಕನಸಿನ ಬಗ್ಗೆ ಹೇಳಿಕೊಂಡಿದ್ದರು. ಈ ಚಿತ್ರದಲ್ಲಿ ಅವರ ಸಿನಿಮಾ ಜರ್ನಿಯನ್ನು ಹಾಸ್ಯ ಮತ್ತು ಭಾವನಾತ್ಮಕ ಸ್ಪರ್ಶದೊಂದಿಗೆ ಹೇಳುವ ಪ್ರಯತ್ನ ನಡೆಯಲಿದೆ.