ಬೆಂಗಳೂರು: ಮನೋಜ್ ಕುಮಾರ ನಿರ್ದೇಶನದ, ಶ್ರೀರಾಮ್, ರಂಗಾಯಣ ರು, ರಮಿಕ ಶಿವು, ತಪಸ್ವಿನಿ ಪೂಣಚ್ಚ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ "ಪ್ರೇಮದ ಊರಲಿ' ಸದ್ಯ 25 ದಿನಗಳನ್ನು ಪೂರೈಸಿದ್ದು, ಮೂಲಗಳ ಪ್ರಕಾರ ₹100 ಕೋಟಿ ಗಳಿಕೆ ಮಾಡಿಕೊಂಡು ಯಶಸ್ಸಿನ ನಗು ಬೀರಿದೆ. ಆದರೆ, ಈ ಸಕ್ಸಸ್ಗೂ ಮುನ್ನ ಚಿತ್ರತಂಡದ ಪ್ರಚಾರವೈಖರಿ ಜನರಿಗೆ ಇಷ್ಟವಾಗಿತ್ತು. ನಾಯಕ, ನಾಯಕಿಯರು ಬಸ್ ನಿಲ್ದಾಣ, ರೈಲಿನ ಒಳಗೆ... ಹೀಗೆ ರಸ್ತೆಗಿಳಿದು ಚಿತ್ರದ ಮಾಹಿತಿ ಇರುವ ಕಾರ್ಡ್, ಪಾಂಪ್ಲೆಟ್ಗಳನ್ನು ಹಂಚಿ, ಆಟೋ ಸ್ಟ್ಯಾಂಡ್ಗಳಲ್ಲಿ ಚಾಲಕರಿಗೆ ಚಿತ್ರದ ಶೀರ್ಷಿಕೆಯ ಸ್ಟಿಕರ್ಗಳನ್ನು ನೀಡಿತ್ತು. ಹೆಚ್ಚೂಕಡಿಮೆ ಚುನಾವಣೆ ಸಮಯದಲ್ಲಿ ರಾಜಕೀಯ ಪಕ್ಷಗಳು ಮತದಾರರ ಮನೆಮನೆಗೆ ತೆರಳುವಂತೆಯೇ, ಪ್ರೇಕ್ಷಕರ ಬಳಿ ತೆರಳಿ ಇಡೀ ತಂಡ ಪ್ರಚಾರ ಮಾಡಿತ್ತು. ಇದೀಗ "ಪ್ರೇಮದ ಊರಲಿ' ಯಶಸ್ಸಿನ ಬೆನ್ನಲ್ಲೇ ಬೇರೆ ತಂಡಗಳು ಸಹ ಅದೇ ರೀತಿ ಪ್ರೇಕ್ಷಕರ ಬಳಿ ತಾವೇ ತೆರಳುತ್ತಿವೆ. "ನಮ್ ಗಣಿ ಬಿಕಾಂ ಪಾಸ್ 2', "ರುಧಿರ್ವನ', "ಶಬರಿ', "ಮಿ. ಲಕ್ಕಿ' ತಂಡಗಳು ಹೆಚ್ಚು ಜನ ಓಡಾಡುವ ಸ್ಥಳಗಳಿಗೆ ತೆರಳಿ ತಮ್ಮ ಸಿನಿಮಾ ಪ್ರಮೋಷನ್ ಮಾಡುತ್ತಿವೆ.
"ಪ್ರೇಮದ ಊರಲಿ' ನಿರ್ದೇಶಕ ಮನೋಜ್ ಕುಮಾರ್ ಗಾಂಧಿನಗರದ ಥಿಯೇಟರ್ನಲ್ಲಿ ಟಾರ್ಚ್ಬಾಯ್ ಆಗಿದ್ದರು. ಈ ಚಿತ್ರವನ್ನು ನಿರ್ಮಿಸುವುದರ ಜತೆಗೆ ಚಿತ್ರಕಥೆ ಬರೆದಿರುವ ದೇವೇಂದ್ರ ಮೇದರಮೇಟ್ಳ 19ನೇ ವಯಸ್ಸಿನಲ್ಲಿ ಮನೆಮನೆಗೆ ಪೇಪರ್ ಹಾಕುತ್ತಿದ್ದರಂತೆ. ಕ್ರಮೇಣ ವಿಜಯವಾಣಿ ಪತ್ರಿಕೆಯ ಏಜೆನ್ಸಿ ಪಡೆದಿದ್ದ ಅವರಿಗೆ ಈ ವೃತ್ತಿಯಲ್ಲಿ ಪಡೆದ ಅನುಭವಗಳೇ, ಸಿನಿಮಾ ಪ್ರಚಾರದ ವೇಳೆ ಜನರನ್ನು ನೇರವಾಗಿ ತಲುಪಲು ಪ್ರೇರೇಪಿಸಿವೆ. ಈ ಬಗ್ಗೆ, "ಮನೋಜ್ ಸಿನಿಮಾ ಕಂಟೆಂಟ್ ಜತೆಗೆ ಪ್ರೇಕ್ಷಕರನ್ನು ನಾವು ಕರೆಯುವ ರೀತಿಯೂ ಚೆನ್ನಾಗಿರಬೇಕು ಅಂತ ನಂಬಿದ್ದರು. ನಾನು ಪ್ರಿಂಟಿಂಗ್ ಉದ್ಯಮದಲ್ಲಿರುವ ಕಾರಣ, ಚಿತ್ರದ ಟೈಟಲ್ ಮೊದಲು ಜನರಿಗೆ ತಲುಪಬೇಕು ಅಂತ ಸ್ಟಿಕರ್ಗಳನ್ನು ಪ್ರಿಂಟ್ ಮಾಡಿದೆವು. ಹೀಗೆ ಪ್ರತಿಯೊಂದು ವಿಷಯದಲ್ಲೂ ಚರ್ಚಿಸಿ, ಮೂರು ತಿಂಗಳು ಸಮಯ ತೆಗೆದುಕೊಂಡೆವು. ಮೊದಲ ಎರಡು ತಿಂಗಳು ಟ್ಯಾಬ್ಲೋ ವಾಹನದಲ್ಲಿ ಪ್ರತಿ ಜಿಲ್ಲಾ ಕೇಂದ್ರಗಳಿಗೆ ತೆರಳಿ, ಆಟೋ ಚಾಲಕರಿಗೆ ಸ್ಟಿಕರ್ಗಳನ್ನು ನೀಡಿದೆವು. ಟೈಟಲ್ ರೀಚ್ ಆಗಿದೆ, ಆದರೆ ಸಿನಿಮಾ ಅಂತ ಬಹುತೇಕರಿಗೆ ಗೊತ್ತಿರಲಿಲ್ಲ. ಹೀಗಾಗಿ ನಾವೇ ವೈಯಕ್ತಿಕವಾಗಿ ಆಮಂತ್ರಣ ನೀಡೋಣ ಅಂತ ಕಲಾವಿದರ ಜತೆ 15 ದಿನಗಳ ಕಾಲ ರೈಲಿನಲ್ಲಿ, ಬಸ್ಗಳಲ್ಲಿ, ಬಸ್ ಸ್ಟ್ಯಾಂಡ್, ಆಟೋ ಸ್ಟ್ಯಾಂಡ್ಗಳಲ್ಲಿ ಸಾವಿರಾರು ಜನರಿಗೆ ಸಿನಿಮಾ ಮಾಹಿತಿಯ ಕಾರ್ಡ್ಗಳನ್ನು ನೀಡಿದೆವು. ಅಷ್ಟರಲ್ಲಿ ಚಿತ್ರದ ಕಂಟೆಂಟ್ ಬಗ್ಗೆ ಅರಿತ ಮಾಧ್ಯಮಗಳೂ ಜತೆಗೆ ನಿಂತವು. ಕಂಟೆಂಟ್ ಚೆನ್ನಾಗಿದ್ದ ಕಾರಣ ಜನರಿಗೂ ತುಂಬ ಚೆನ್ನಾಗಿ ಕನೆಕ್ಟ್ ಆಯಿತು' ಎಂದು ಮಾಹಿತಿ ನೀಡುತ್ತಾರೆ ದೇವೇಂದ್ರ.
"ರುಧಿರ್ವನ' ಚಿತ್ರತಂಡ ಕೂಡ ಸದ್ಯ ಮೈಸೂರಿನ ಹಲವೆಡೆ ಜನರ ಬಳಿ ತೆರಳುತ್ತಿದೆ. ನಿರ್ದೇಶಕ ಕನ್ನಡಿಗ ಅಗ್ನಿ, "ಪ್ರತಿ ಚಿತ್ರಕ್ಕೂ ಒಂದೊಂದು ರೀತಿಯ ಪ್ರಚಾರ ವರ್ಕ್ ಆಗುತ್ತದೆ. "ಸು ಫ್ರಮ್ ಸೋ'ಗೆ ಪ್ರೀಮಿಯರ್ ಶೋಗಳು ಕೈಹಿಡಿದವು. "ಪ್ರೇಮದ ಊರಲಿ' ಪ್ರಚಾರ ತುಂಬ ಚೆನ್ನಾಗಿ ಮಾಡಿದರು. ನಾವೇ ಹೋಗಿ ಜನರನ್ನು ಭೇಟಿಯಾದಾಗ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಪರ್ಸನಲ್ ಕನೆಕ್ಷನ್ ಬೆಳೆಯುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಲಕ್ಷ ಜನ ನೋಡುತ್ತಾರೆ. ಆದರೆ, ಪರ್ಸನಲ್ ಕನೆಕ್ಷನ್ ಬೆಳೆದರೆ ಸಿನಿಮಾಗೆ ಬರುತ್ತಾರೆ. ಅದನ್ನು "ಪ್ರೇಮದ ಊರಲಿ' ಪ್ರೂವ್ ಮಾಡಿತು. ಮೊದಲು ಎಲ್ಲರೂ ರಸ್ತೆಗಿಳಿದು ಪ್ರಚಾರ ಮಾಡುತ್ತಿದ್ದರು. ಇತ್ತೀಚೆಗೆ ಅದನ್ನು ಬಿಟ್ಟಿದ್ದರು. ಜನರನ್ನು ನೇರವಾಗಿ ಭೇಟಿಯಾಗುವುದು ಉತ್ತಮ ಪ್ರಚಾರ ಅಂತ ನಾನೂ ತಂಡದ ಜತೆ ಚಾಮುಂಡಿ ಬೆಟ್ಟ, ಆಹಾರ ಮೇಳ, ಎಕ್ಸಿಬಿಷನ್, ಕೇಕ್ ಶೋ, ಕೆಫೆಗಳು, ಜನಪ್ರಿಯ ಹೋಟೆಲ್ಗಳು ಹೀಗೆ ಹಲವೆಡೆ ಜನರನ್ನು ಭೇಟಿಯಾಗುತ್ತಿದ್ದೇನೆ. ನ.27ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದೆ ಅಂತ ಮಾಹಿತಿ ನೀಡುತ್ತಿದ್ದೇನೆ. ಜನರಿಂದಲೂ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಮುಂದಿನ ದಿನಗಳಲ್ಲಿ ಪಾವನಾ ಗೌಡ, ಬಲರಾಜವಾಡಿ, ಅಪೂರ್ವಶ್ರೀ ಸೇರಿ ನಮ್ಮ ತಂಡದ ಕಲಾವಿದರೂ ಪ್ರಚಾರದಲ್ಲಿ ತೊಡಗಲಿದ್ದಾರೆ' ಎಂದು ಮಾಹಿತಿ ನೀಡುತ್ತಾರೆ.
"ನಮ್ ಗಣಿ ಬಿಕಾಂ ಪಾಸ್ 2' ನಟ, ನಿರ್ದೇಶಕ ಅಭಿಷೇಕ್ ಶೆಟ್ಟಿ, ಚಿತ್ರದ ಮೊದಲ ಭಾಗದ ಬಿಡುಗಡೆ ವೇಳೆ ಜನರ ಬಳಿಗೆ ತೆರಳಿ ಪಾಂಪ್ಲೆಟ್ ಹಂಚಿದ್ದರಂತೆ. "ನಮ್ಮ ಕಂಟೆಂಟ್ಗೆ ಸೋಷಿಯಲ್ ಮೀಡಿಯಾದಲ್ಲಿ ಒಂದು ಕೋಟಿ ವೀವ್ಸ್, ಲಾಂತರ ಲೈಕ್ಸ್ ಸಿಕ್ಕರೂ, ಅವರಲ್ಲಿ ಥಿಯೇಟರ್ಗೆ ಬಂದು ಸಿನಿಮಾ ನೋಡುವವರ ಸಂಖ್ಯೆ ತೀರ ಕಡಿಮೆ. ಹೀಗಾಗಿ ಈಗ ಮತ್ತೆ ಜನರ ಬಳಿ ತೆರಳುತ್ತಿದ್ದೇನೆ. ಪ್ರೇಕ್ಷಕರ ಜತೆ ವಯಕ್ತಿಕವಾಗಿ ಕನೆಕ್ಟ್ ಆದಾಗ ಇವರು ನಮ್ಮವರು, ಬೆಂಬಲಿಸಬೇಕು ಎಂಬ ಭಾವನೆ ಮೂಡುತ್ತದೆ. "ನಮ್ ಗಣಿ ಬಿಕಾಂ ಪಾಸ್' ಸಮಯದಲ್ಲೂ ಯಾಕೆ ಈ ಚಿತ್ರ ನೋಡಬೇಕು? ಅಂತ 20 ಅಂಶಗಳ ಲಿಸ್ಟ್ ಮಾಡಿ ಪಾಂಪ್ಲೆಟ್ ಮಾಡಿಸಿ ಹಂಚಿದ್ದೆವು. ಇನ್ನು ನಾನು ಪಾಂಪ್ಲೆಟ್ ಹಂಚುವುದನ್ನು ನೋಡಿ ಕೆಲ ಚಿತ್ರರಂಗದ ಸ್ನೇಹಿತರೇ ಏಕೆ ಹೀಗೆಲ್ಲಾ ಮಾಡುತ್ತಿದ್ದೀರಿ, ಸ್ಟ್ಯಾಂಡರ್ಡ್ ಆಗಿ ಪ್ರಚಾರ ಮಾಡಬೇಕು ಅಂದರು. ಆದರೆ, ಪ್ರೇಕ್ಷಕರ ಜತೆ ನೇರವಾಗಿ ಕನೆಕ್ಟ್ ಆಗಲು ಇದಕ್ಕಿಂತ ಉತ್ತಮ ಮಾರ್ಗವಿಲ್ಲ ಅನ್ನೋದು ನನ್ನ ಅಭಿಪ್ರಾಯ. ಹಾಗೇ ನಾನು ಹೋದಲ್ಲೆಲ್ಲ ಜನ ಕೂಡ ಉತ್ತಮ ಪ್ರತಿಕ್ರಿಯೆ ನೀಡುತ್ತಿರುವುದು ಖುಷಿ ನೀಡಿದೆ' ಎಂದು ಹೇಳಿಕೊಳ್ಳುತ್ತಾರೆ ಅಭಿಷೇಕ್ ಶೆಟ್ಟಿ.