- ಕನ್ನಡಕ್ಕೆ ಬಂದ ಮಲಯಾಳಂ ನಟಿ
- ಗನ್ ಹಿಡಿದು ಯುದ್ಧಕ್ಕೆ ನಿಂತ ಅದಿತಿ
- ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರದ ಕಾವೇರಿ ಪಾತ್ರ ನಿರ್ವಹಣೆ
ಬೆಂಗಳೂರು: ‘ಸಪ್ತ ಸಾಗರದಾಚೆ ಎಲ್ಲೋ’ ಸರಣಿ ಬಳಿಕ ನಿರ್ದೇಶಕ ಹೇಮಂತ್ ರಾವ್, ಸ್ಟಾರ್‌ಗಳನ್ನು ಕಟ್ಟಿಕೊಂಡು ಸ್ಯಾಂಡಲ್‌ವುಡ್‌ನಲ್ಲಿ ಆಪರೇಷನ್ ನಡೆಸುತ್ತಿರುವುದು ಗೊತ್ತೇ ಇದೆ. ಅರ್ಥಾತ್, ಅವರು ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ನಟ ಶಿವರಾಜ್‌ಕುಮಾರ್, ಧನಂಜಯ ಹಾಗೂ ಪ್ರಿಯಾಂಕಾ ಮೋಹನ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ದೊಡ್ಡ ಬಜೆಟ್‌ನಲ್ಲಿ ಚಿತ್ರ ಮೂಡಿಬರುತ್ತಿದ್ದು, ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ರೆಟ್ರೋ ಕಾಲದ ಅದ್ದೂರಿ ಸೆಟ್ ನಿರ್ಮಿಸಿ ಚಿತ್ರೀಕರಣ ನಡೆಸಲಾಗುತ್ತಿದೆ. ಈಗಾಗಲೇ ಶೇ.50ರಷ್ಟು ಶೂಟಿಂಗ್ ಮುಗಿಸಿರುವ ಚಿತ್ರತಂಡ ಯುಗಾದಿ ಹಬ್ಬಕ್ಕೂ ಮುನ್ನ ಚಿತ್ರದ ಮತ್ತೊಬ್ಬ ಕಲಾವಿದೆಯನ್ನು ಪರಿಚಯಿಸಿದೆ. ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಮಿಂಚಿರುವ ನಟಿ ಅದಿತಿ ಬಾಲನ್ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚೆಗೆ ನಟಿಯ ಫಸ್ಟ್ ಲುಕ್ ರಿಲೀಸ್ ಮಾಡಿ, ಚಿತ್ರತಂಡ ಸ್ವಾಗತಿಸಿದೆ. ಅದಿತಿ ಇಲ್ಲಿ ಏಜೆಂಟ್ ಕಾವೇರಿ ಎಂಬ ಪಾತ್ರದಲ್ಲಿ ನಟಿಸುತ್ತಿದ್ದು, ಸೀರೆ ಧರಿಸಿರುವ ಅವರು ಒಂದು ಕೈಯಲ್ಲಿ ಗನ್, ಮತ್ತೊಂದು ಕೈಯಲ್ಲಿ ವಾಕೀ ಟಾಕಿ ಹಿಡಿದು ಗಂಭೀರ ಲುಕ್‌ನಲ್ಲಿ ಮಿಂಚಿದ್ದಾರೆ. 2017ರಲ್ಲಿ ತೆರಕಂಡ ತಮಿಳಿನ ‘ಆರುವಿ’ ಮೂಲಕ ಬಣ್ಣದ ಲೋಕಕ್ಕೆ ಬಂದ ಅದಿತಿ ಬಳಿಕ ‘ಕುಟ್ಟಿ ಸ್ಟೋರಿ’, ‘ಕ್ಯಾಪ್ಟನ್ ಮಿಲ್ಲರ್’, ‘ಲೈನ್‌ಮ್ಯಾನ್’, ಮಲಯಾಳಂನ ‘ಕೋಲ್ಡ್ ಕೇಸ್’, ತೆಲುಗಿನ ‘ಶಾಕುಂತಲಮ್’, ‘ಸರಿಪೋದಾ ಶನಿವಾರಂ’ ಸೇರಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ‘666 ಆಪರೇಷನ್ ಡ್ರೀಮ್ ಥಿಯೇಟರ್’ ನಟಿಗೆ ಕನ್ನಡದ ಮೊದಲ ಸಿನಿಮಾ.