Sukhibava Review - "ಎ' ಚಿತ್ರದಲ್ಲಿ ಉಪೇಂದ್ರ, "ಈ ಪ್ರೀತಿ ಪ್ರೇಮ ಎಲ್ಲ ಪುಸ್ತಕದ ಬದನೇಕಾಯಿ' ಎಂದಿದ್ದರು. ಆದರೆ, "ಸುಖೀಭವ' ಚಿತ್ರದ ನಾಯಕ ವೈಭವ್ಗೆ (ಮಹೇಂದ್ರ) ಪ್ರೀತಿಸಿದ ಹುಡುಗಿ ತಾರಾ (ಸುಷ್ಮಿತಾ), "ನೀನು ಸರಿಯಾಗಿ ಕ್ಲಾಸ್ಗೇ ಬರಲ್ಲ. ಸರಿಯಾಗಿ ಓದೋದೂ ಇಲ್ಲ. ಚೆನ್ನಾಗಿ ಓದಿ ಏನಾದರೂ ಸಾಧಿಸಿಕೊಂಡು ಬಾ, ಆಮೇಲೆ ನೋಡೋಣ' ಅಂತ ಸವಾಲು ಹಾಕುತ್ತಾಳೆ. ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡು, ಅಪ್ಪನಿಂದಲೂ ದೂರಾದ ವೈಭವ್ಗೆ ಇತ್ತ ಪ್ರೀತಿಸಿದ ಹುಡುಗಿಯೂ ಸಿಗದ ದುಸ್ಥಿತಿಗೆ ಸಿಲುಕುತ್ತಾನೆ. ತಾನು ಗೌರವಿಸುವ ಚರ್ಚ್ ಫಾದರ್ ಬಳಿ ಮನಬಿಚ್ಚುತ್ತಾನೆ. ಅವರು, "ಓದದ ಹುಡುಗರನ್ನು ಯಾರೂ ಇಷ್ಟಪಡುವುದಿಲ್ಲ. ಚೆನ್ನಾಗಿ ಓದು' ಅಂತ ಬುದ್ಧಿವಾದ ಹೇಳುತ್ತಾರೆ. ಅದನ್ನೇ ಸವಾಲಾಗಿ ತೆಗೆದುಕೊಂಡು ಶಿಕ್ಷಣ ಮುಗಿಸಿ, ಕಷ್ಟ ಪಟ್ಟು ದುಡಿದು ಹಣ ಗಳಿಸುವ ವೈಭವ್, "ಫಸ್ಟ್ ಲವ್ ಈಸ್ ಬೆಸ್ಟ್ ಲವ್' ಅಂತ ತಾರಾಳನ್ನು ಪಡೆಯಲು ಹುಡುಕಾಡತೊಡಗುತ್ತಾನೆ. ಹಾಗಾದರೆ ತಾರಾ ಅವನಿಗೆ ಸಿಗುತ್ತಾಳಾ? ದೂರವಾದ ಆತನ ತಂದೆ ಮತ್ತೆ ಬರುತ್ತಾರಾ? "ಸುಖೀಭವ' ನೋಡಿ.
ನಿರ್ದೇಶಕ ರಾಜೇಶ್ ನಾಯ್ಡು ಮೊದಲ ಪ್ರಯತ್ನದಲ್ಲಿಯೇ ಒಂದು ಸರಳ, ಸುಂದರ ಪ್ರೇಮಕಥೆಯನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಪ್ರೀತಿ, ಗೆಳೆತನ, ಸಂಬಂಧಗಳ ಮೌಲ್ಯಗಳ ಕುರಿತ ಉತ್ತಮ ಸಂದೇಶಗಳ ಜತೆಜತೆಗೆ ಕಾಮಿಡಿ, ಥ್ರಿಲ್ಲಿಂಗ್, ಭಾವನಾತ್ಮಕ ಅಂಶಗಳು ಕಥೆಯನ್ನು ನೋಡಿಸಿಕೊಂಡು ಹೋಗುತ್ತವೆ. ಮಹೇಂದ್ರ, ಸುಷ್ಮಿತಾ, ಮಿಯಾನ್ಶಿ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಹೊಸಬರ ಹೊಸ ಪ್ರಯತ್ನಕ್ಕೆ ಬೆನ್ನು ತಟ್ಟಲು ಇಚ್ಛಿಸುವವರು ಥಿಯೇಟರ್ಗೆ ತೆರಳಿ ಸಿನಿಮಾ ನೋಡಿ "ಸುಖೀಭವ' ಎಂದು ತಂಡಕ್ಕೆ ಆಶೀರ್ವದಿಸಬಹುದು!