- ಮಹೇಂದರ್ ನಿರ್ದೇಶನದ ಮುಂದಿನ ಸಿನಿಮಾ ಕೆಂಬರಗ
- ಶೀರ್ಷಿಕೆ ಅರ್ಥದ ಗುಟ್ಟುಬಿಟ್ಟುಕೊಡದ ಚಿತ್ರತಂಡ
- ಹಳೆಯ ಮೈಸೂರು ಭಾಗದ ಮಲೆ ಮಹದೇಶ್ವರ ಹಾಡಿನ ಹಿನ್ನೆಲೆಯ ಕಥೆ
ಬೆಂಗಳೂರು : ಕನ್ನಡದ ‘ಶೃಂಗಾರ ಕಾವ್ಯ’, ‘ಕರ್ಪೂರದ ಗೊಂಬೆ’, ‘ಕೌರವ’, ‘ಗೌಡ್ರು’ ಸೇರಿ 20ಕ್ಕೂ ಅಧಿಕ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ನಿರ್ದೇಶಕ ಎಸ್.ಮಹೇಂದರ್ ಮತ್ತು ಸಂಗೀತ ನಿರ್ದೇಶಕ ಹಂಸಲೇಖ ಕಾಂಬಿನೇಷನ್‌ನಲ್ಲಿ ಇತ್ತೀಚೆಗೆ ಹೊಸ ಚಿತ್ರವನ್ನು ಘೋಷಿಸಲಾಗಿತ್ತು. 22 ವರ್ಷಗಳ ಬಳಿಕ ಈ ಜೋಡಿ ಮತ್ತೆ ಒಂದಾಗಲಿರುವ ಸುದ್ದಿ ಕೇಳಿ ಅಭಿಮಾನಿಗಳೂ ಖುಷಿಪಟ್ಟಿದ್ದರು. ಇದೀಗ ಈ ಚಿತ್ರದ ಬಗ್ಗೆ ಮಹತ್ವದ ಅಪ್‌ಡೇಟ್ ದೊರೆತಿದ್ದು, ಟೈಟಲ್ ರಿವೀಲ್ ಮಾಡಲಾಗಿದೆ. ವಿಭಿನ್ನ, ವಿಶೇಷ ಅನಿಸುವ ‘ಕೆಂಬರಗ’ ಎಂಬ ಶೀರ್ಷಿಕೆಯನ್ನು ಅಂತಿಮಗೊಳಿಸಲಾಗಿದೆ. ಈ ಪದದ ಅರ್ಥ ಏನಿರಬಹುದು ಎಂಬ ಕುತೂಹಲ ಹೆಚ್ಚಾಗಿದ್ದು, ಚಿತ್ರತಂಡ ಈ ಬಗ್ಗೆ ಸುಳಿವು ಬಿಟ್ಟುಕೊಟ್ಟಿಲ್ಲ. ನಿರ್ದೇಶಕ ಮಹೇಂದರ್, ‘‘ಕೆಂಬರಗ’ ಅಚ್ಚ ಹಾಗೂ ಕನ್ನಡ ನೆಲಮೂಲದ ಪದ. ಅದಕ್ಕಾಗಿಯೇ ಈ ಪದವನ್ನು ಶೀರ್ಷಿಕೆಯನ್ನಾಗಿ ಮಾಡಿದ್ದೇವೆ. ಈ ಪದದ ಅರ್ಥ ಹುಡುಕುವ ಜತೆಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ನಾವು ಈಗಲೇ ಇದರ ಅರ್ಥವನ್ನು ಬಿಟ್ಟುಕೊಡುವುದಿಲ್ಲ. ಒಂದಷ್ಟು ಜನ ಈ ಪದದ ಬಗ್ಗೆ ಹುಡುಕುವಂತಾಗಲಿ ಎಂಬ ಉದ್ದೇಶ ನಮ್ಮದು. ಆರೇಳು ಶತಮಾನಗಳ ಹಿಂದೆ ರಾಜ್ಯದ ಒಂದು ಭಾಗದಲ್ಲಿ ಹೆಚ್ಚಾಗಿ ಈ ಪದವನ್ನು ಬಳಕೆ ಮಾಡುತ್ತಿದ್ದರು ಎಂದಷ್ಟೇ ಹೇಳಬಲ್ಲೆ. ಇದೊಂದು ಪರಿಪೂರ್ಣವಾದ ಸಿನಿಮಾ ಆಗಿರಲಿದ್ದು, ಲವ್, ಎಮೋಷನ್ಸ್ ಸೇರಿ ಎಲ್ಲ ಅಂಶಗಳು ಒಳಗೊಂಡಿರುತ್ತವೆ. ಮೂರು ತಲೆಮಾರುಗಳಿಗೆ ಆಪ್ತವಾಗುವ ಅದ್ಭುತ ಕಥೆ ಹೇಳುತ್ತಿದ್ದೇವೆ. ಇಲ್ಲಿ ಯಾವುದೇ ಗಿಮಿಕ್ ಇರುವುದಿಲ್ಲ. ಮುಂದಿನ ದಿನಗಳಲ್ಲಿ ತಾರಾ ಬಳಗ, ತಾಂತ್ರಿಕವರ್ಗ ಪರಿಚಯಿಸಲಾಗುವುದು’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ.
ಕೆಂಬರಗ ಎಂದರೇನು?
ಚಿತ್ರತಂಡ ‘ಕೆಂಬರಗ’ದ ಅರ್ಥ ಗುಟ್ಟಾಗಿಟ್ಟಿದ್ದರೂ, ಸಿನಿಮಾ ಪ್ರೇಮಿಗಳು ಅದರ ಅರ್ಥ ಹುಡುಕಾಟದಲ್ಲಿ ಬಿಜಿಯಾಗಿದ್ದಾರೆ. ರಾಜ್ಯದ ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಮನೆಯ ಕಂಭ, ಸ್ತಂಭ ಅಥವಾ ಪಿಲ್ಲರ್‌ಅನ್ನು ಕೆಂಬರಗ ಎಂದೂ ಕರೆಯುತ್ತಾರೆ. ಹಾಗೇ ‘ಮಲೆ ಮಹದೇಶ್ವರ’ ಹಾಡಿನಲ್ಲಿ ‘ಮಹದೇವರು ಬರುತ್ತಿದ್ದಾರೆ ದಾರಿ ಬಿಡಿ’ ಹಾಡಿನಲ್ಲಿ ‘ಕರಿಬರಗ’ ಮತ್ತು ‘ಕೆಂಬರಗ’ ಪದಗಳಿವೆ. ‘ಉತ್ತರ ದೇಶದ ಪುಟ್ಟ ಮರಿದೇವರು, ಹನ್ನೆರಡು ಹೆಜ್ಜೆ ಕರಿಬರಗ, ಅದಕ್ಕೆ ಬ್ಯಾಲದ ಕಾಯಿ ಗಾತ್ರ ಕಣ್ಣುಗುಡ್ಡೆಗಳು... ದೊಡ್ಡಕೆ ಸೂತ್ರ ಶಿವದಾರ, ಕೆಂಬರಗ ಮ್ಯಾಲೆ ಎಳೆಗಾವಿ, ಸುಳಿಗಾವಿ ಮಂಡೆ ಮ್ಯಾಲೆ ಮುಸುಕಿಟ್ಟು...’ ಎಂದು ಭಕ್ತಿಗೀತೆ ಸಾಗುತ್ತದೆ.