ಮಹಾವತಾರ ಪರಶುರಾಮ ಚಿತ್ರದ ಪೋಸ್ಟರ್
- ಪರಶುರಾಮನ ಜಯಂತಿಗೆ ಮಹಾವತಾರ ಪರಶುರಾಮ ಸಿನಿಮಾ ಅನೌನ್ಸ್
- ಹೊಂಬಾಳೆ ಫಿಲಂಸ್ ಪ್ರಸ್ತುತಪಡಿಸುತ್ತಿರುವ ಚಿತ್ರ
- ಇನ್ನು ಬರಲಿವೆ ಸಿನಿಮ್ಯಾಟಿಕ್ ಯೂನಿವರ್ಸನ ಐದು ಚಿತ್ರಗಳು
ಬೆಂಗಳೂರು: ಕಳೆದ ವರ್ಷ ಹೊಂಬಾಳೆ ಫಿಲಂಸ್ ಸಂಸ್ಥೆಯು ವಿಷ್ಣುವಿನ ಮಹಾವತಾರದ ಸಿನಿಮ್ಯಾಟಿಕ್ ಯೂನಿವರ್ಸ್‌ನ ಒಟ್ಟು ಏಳು ಆ್ಯನಿಮೇಟೆಡ್ ಚಿತ್ರಗಳನ್ನು ಘೋಷಿಸಿತ್ತು. ಆ ಯೂನಿವರ್ಸ್‌ನ ಮೊದಲ ಚಿತ್ರ ‘ಮಹಾವತಾರ ನರಸಿಂಹ’ ಕಳೆದ ಜು.25ಕ್ಕೆ ರಿಲೀಸ್ ಆಗಿ, ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು. ಅಶ್ವಿನ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ಮಹಾವತಾರ ನರಸಿಂಹ’ ಚಿತ್ರವು ಸುಮಾರು 350 ಕೋಟಿ ಅಧಿಕ ಗಳಿಕೆ ಮಾಡಿತ್ತು. ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಆ್ಯನಿಮೇಟೆಡ್ ಚಿತ್ರ ಎಂಬ ಗರಿಗೆ ಇದು ಪಾತ್ರವಾಗಿತ್ತು. ಈ ಚಿತ್ರದ ಯಶಸ್ಸಿನ ಬೆನ್ನಲ್ಲೇ ಹೊಂಬಾಳೆ ಫಿಲಂ ವಿಷ್ಣುವಿನ ಮಹಾವತಾರ ಯೂನಿವರ್ಸ್‌ನ ಎರಡನೇ ಚಿತ್ರವಾದ ‘ಮಹಾವತಾರ ಪರಶುರಾಮ’ ಅಧಿಕೃತವಾಗಿ ಘೋಷಿಸಿದೆ. ಭಾನುವಾರ ಪರಶುರಾಮ ಜಯಂತಿ ಹಿನ್ನೆಲೆಯಲ್ಲಿ ಸಿನಿಮಾವನ್ನು ಘೋಷಿಸಿ, ಫಸ್ಟ್ ಲುಕ್ ಪೋಸ್ಟರ್ ಜತೆಗೆ ವಿಡಿಯೋ ಗ್ಲಿಂಪ್ಸ್ ರಿಲೀಸ್ ಮಾಡಲಾಗಿದೆ. ರಣರಂಗದಲ್ಲಿ ಯೋಧನೊಬ್ಬ ಕೊಡಲಿ ಹಿಡಿದು ಗರ್ಜಿಸುತ್ತಿದ್ದಾನೆ. ಹಾಗೆಯೇ, ಗ್ಲಿಂಪ್ಸ್‌ನಲ್ಲಿ ‘ಧರ್ಮಕ್ಕೆ ಕಂಟಕ ಎದುರಾದಾಗ ಭೂಮಿಯು ರಕ್ತಸಿಕ್ತವಾಗುತ್ತದೆ. ಆಗ ವಿಷ್ಣು ವಿವಿಧ ಅವತಾರ ಎತ್ತುತ್ತಾನೆ. ಮಹಾವಿಷ್ಣುವಿನ ಇಚ್ಛೆ, ಮಹಾದೇವನ ಕೋಪ ತಾಳಿ ಪರಶುರಾಮನ ಅವತಾರ ತಾಳುತ್ತಾನೆ’ ಎಂಬ ಸಾಲುಗಳನ್ನು ಕಾಣಬಹುದಾಗಿದೆ. ಈ ಚಿತ್ರದಲ್ಲಿ ಪರಶುರಾಮನ ಸಾಹಸ ಹಾಗೂ ಅವತಾರಗಳನ್ನು ಆ್ಯನಿಮೇಟೆಡ್ ರೂಪದಲ್ಲಿ ತೋರಿಸಲು ಚಿತ್ರತಂಡ ಮುಂದಾಗುತ್ತಿದೆ. ಈ ಚಿತ್ರಕ್ಕೂ ಅಶ್ವಿನ್ ಕುಮಾರ್ ನಿರ್ದೇಶನವಿರಲಿದೆ. ಸದ್ಯ ಚಿತ್ರದ ಕೆಲಸಗಳು ಆರಂಭಗೊಂಡಿವೆ. ಸಿನಿಮಾ ಘೋಷಣೆಯ ಜತೆಗೆ ರಿಲೀಸ್ ದಿನಾಂಕವನ್ನು ಕೂಡ ಚಿತ್ರತಂಡ ಅನೌನ್ಸ್ ಮಾಡಿದೆ. 2027ರ ಡಿಸೆಂಬರ್‌ಗೆ ‘ಮಹಾವತಾರ ಪರಶುರಾಮ’ ತೆರೆ ಮೇಲೆ ಬರಲಿದೆ. ಕನ್ನಡ, ಹಿಂದಿ, ತೆಲುಗು, ಮಲಯಾಳಂ ಮತ್ತು ತಮಿಳಿನಲ್ಲಿ ಈ ಸಿನಿಮಾ ಮೂಡಿಬರಲಿದೆ.
2037ರವರೆಗೆ ಬ್ಯಾಕ್ ಟು ಬ್ಯಾಕ್ ಚಿತ್ರಗಳು
2025ರಿಂದ 2037ರವರೆಗೆ ವಿಷ್ಣು ಮಹಾವತಾರ ಯೂನಿವರ್ಸ್‌ನ ಏಳು ಆ್ಯನಿಮೇಟೆಡ್ ಚಿತ್ರಗಳು ಬರಲಿವೆ. ‘ಮಹಾವತಾರ ನರಸಿಂಹ’ ಜು. 25ರಂದು ಬಿಡುಗಡೆಯಾಗಿತ್ತು. ಉಳಿದಂತೆ ‘ಮಹಾವತಾರ ಪರಶುರಾಮ’ ಸದ್ಯ ೋಷಣೆಯಾಗಿದ್ದು, 2027ರ ಡಿಸೆಂಬರ್‌ನಲ್ಲಿ ತೆರೆಗೆ ಬರಲಿದೆ. ಇನ್ನು ‘ಮಹಾವತಾರ ರಘುನಂದನ’ (2029), ‘ಮಹಾವತಾರ ದ್ವಾರಕದೇಶ್’(2031), ‘ಮಹಾವತಾರ ಗೋಕುಲಾನಂದ’ (2033), ‘ಮಹಾವತಾರ ಕಲ್ಕಿ ಭಾಗ -1’ (2035), ‘ಮಹಾವತಾರ ಕಲ್ಕಿ ಭಾಗ-2’ (2037)ತೆರೆ ಮೇಲೆ ಮೂಡಿಬರಲಿವೆ. ಈ ಮೂಲಕ ಹೊಂಬಾಳೆ ಸಂಸ್ಥೆಯು ಜಾಗತಿಕವಾಗಿ ಮೈಲಿಗಲ್ಲು ಸಾಧಿಸಲು ಸಜ್ಜಾಗುತ್ತಿದೆ.