ರಿಲ್ಯಾಕ್ಸ್ ಚಿತ್ರದ ಪೋಸ್ಟರ್​ 
ಸ್ಯಾಂಡಲ್‌ವುಡ್

ರೋಲೆಕ್ಸ್ ಅಲ್ಲ ‘ರಿಲ್ಯಾಕ್ಸ್’: ಕೊನೆಯ ಕ್ಷಣದಲ್ಲಿ ಟೈಟಲ್ ಬದಲಾಯಿಸಿದ ಚಿತ್ರತಂಡ RELAX

ಕೊನೇ ಕ್ಷಣದಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಚಿತ್ರದ ಶೀರ್ಷಿಕೆ ಬದಲಾಯಿಸಲಾಗಿದೆ. ಈ ಮೊದಲು ಇದ್ದ ‘ರೋಲೆಕ್ಸ್’ ಬದಲಿಗೆ ‘ರಿಲ್ಯಾಕ್ಸ್’ ಎಂದು ಹೊಸ ಟೈಟಲ್ ಫಿಕ್ಸ್ ಮಾಡಲಾಗಿದೆ.

ಬೆಂಗಳೂರು: ಹಾಸ್ಯ ನಟ ಕೋಮಲ್ ಕುಮಾರ್, ನಟಿ ಸೋನಲ್ ಮೊಂಟೇರೊ ಕಾಂಬಿನೇಷನ್‌ನಲ್ಲಿ ‘ರೋಲೆಕ್ಸ್’ ಸಿನಿಮಾ ಮೂಡಿಬರುತ್ತಿರುವುದು ಗೊತ್ತೇ ಇದೆ. ನಟ ವಿನೋದ್ ಪ್ರಭಾಕರ್ ವಿಶೇಷ ಪಾತ್ರದಲ್ಲಿದ್ದು, ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ರಿಲೀಸ್‌ಗೆ ಸಿದ್ಧತೆ ನಡೆಸುತ್ತಿದೆ. ಹೀಗಿರುವಾಗಲೇ ಕೊನೇ ಕ್ಷಣದಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಚಿತ್ರದ ಶೀರ್ಷಿಕೆ ಬದಲಾಯಿಸಲಾಗಿದೆ. ಈ ಮೊದಲು ಇದ್ದ ‘ರೋಲೆಕ್ಸ್’ ಬದಲಿಗೆ ‘ರಿಲ್ಯಾಕ್ಸ್’ ಎಂದು ಹೊಸ ಟೈಟಲ್ ಫಿಕ್ಸ್ ಮಾಡಲಾಗಿದೆ. ಆ ಬಗ್ಗೆ ನಿರ್ದೇಶಕ ಶ್ರೀನಿವಾಸ್ ಮಂಡ್ಯ ಸ್ಪಷ್ಟನೆ ನೀಡಿದ್ದು, ‘ಹೆಸರಾಂತ ಸಂಸ್ಥೆಯೊಂದು ‘ರೋಲೆಕ್ಸ್’ ಶೀರ್ಷಿಕೆಯನ್ನಾಗಲಿ ಅಥವಾ ಅದಕ್ಕೆ ಸಂಬಂಧಿಸಿದ ಸೌಂಡ್ ಆಗಲಿ ಬಳಸಿಕೊಳ್ಳಬಾರದು ಎಂದು ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿದೆ. ಇನ್ನು ನೋಟಿಸ್ ನೀಡಿರುವ ಸಂಸ್ಥೆಗೆ ಸಂಬಂಧಿಸಿದ ಹಾಗೆ ನಮ್ಮ ಚಿತ್ರದಲ್ಲಿ ಯಾವುದನ್ನು ಬಳಸಿಕೊಂಡಿಲ್ಲ. ಈಗ ಸಿನಿಮಾ ಬಿಡುಗಡೆ ಹಂತದಲ್ಲಿದ್ದು, ಹಾಗಾಗಿ, ಶೀರ್ಷಿಕೆಗಾಗಿ ಕಾನೂನು ಹೋರಾಟ ಮಾಡಲು ನಮ್ಮಲ್ಲಿ ಸಮಯವಿಲ್ಲ. ಚಿತ್ರದ ಕಂಟೆಂಟ್ ಬಹಳ ಚೆನ್ನಾಗಿದೆ. ಕಂಟೆಂಟ್ ಎಲ್ಲರಿಗೂ ಮೆಚ್ಚುಗೆಯಾಗುವ ಭರವಸೆಯಿದೆ. ಹಾಗಾಗಿ, ಚಿತ್ರದ ಶೀರ್ಷಿಕೆಯನ್ನೇ ಬದಲಾಯಿಸಲು ಮುಂದಾಗಿದ್ದು, ‘ರೋಲೆಕ್ಸ್’ ಬದಲಿಗೆ ‘ರಿಲ್ಯಾಕ್ಸ್’ ಎಂದು ಹೊಸ ಟೈಟಲ್ ಇಡುತ್ತಿದ್ದೇವೆ. ಶೀರ್ಷಿಕೆಗಿಂತ ನಮ್ಮ ಕಂಟೆಂಟ್ ಮುಖ್ಯ ಎನ್ನುವುದು ನಮ್ಮ ತೀರ್ಮಾನವಾಗಿದೆ’ ಎಂದು ಹೇಳಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್‌ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಜೆಸ್ಸಿ ಗ್‌ಟಿ ಸಂಗೀತ, ರಾಕೇಶ್ ಸಿ. ತಿಲಕ್ ಛಾಯಾಗ್ರಹಣ, ಅರವಿಂದ್ ರಾಜ್ ಸಂಕಲನ ಚಿತ್ರಕ್ಕಿದೆ.