25ರ ಸಂಭ್ರಮದಲ್ಲಿ ಕೋಟಿಗೊಬ್ಬ ತಂಡ 
ಸ್ಯಾಂಡಲ್‌ವುಡ್

ಕೋಟಿಗೊಬ್ಬ ಬೆಳ್ಳಿಹಬ್ಬ : ಕರ್ನಾಟಕ ರತ್ನ ಡಾ.ವಿಷ್ಣುವರ್ಧನ್ ನೆನಪುಗಳ ಸವಾರಿಯಲ್ಲಿ ಸ್ಯಾಂಡಲ್‌ವುಡ್ ಗಣ್ಯರು

ಪ್ರಮುಖ ಮುಖ್ಯಾಂಶಗಳು

  • 25 ವರ್ಷದ ಸಂಭ್ರಮದಲ್ಲಿ ಕೋಟಿಗೊಬ್ಬ ಚಿತ್ರ
  • ಬೆಳ್ಳಿ ಸಂಭ್ರಮ ಆಚರಿಸಿದ ಚಿತ್ರತಂಡ
  • ವಿಷ್ಣು ನೆನಪುಗಳನ್ನು ಸ್ಮ,ರಿಸಿದ ಸ್ಯಾಂಡಲ್ವುಡ್ ತಾರೆಯರು
ಬೆಂಗಳೂರು : ಕರ್ನಾಟಕ ರತ್ನ, ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಭಿನಯಿಸಿದ್ದ ‘ಕೋಟಿಗೊಬ್ಬ’ 2001ರಲ್ಲಿ ರಿಲೀಸ್ ಆಗಿ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ರಾಜ್ಯಾದ್ಯಂತ 200ಕ್ಕೂ ಅಧಿಕ ದಿನಗಳ ಕಾಲ ಭರ್ಜರಿ ಪ್ರದರ್ಶನ ಕಂಡಿದ್ದ ಈ ಚಿತ್ರಕ್ಕೆ ಹೆಚ್ಚು ಜನ ಮೆಚ್ಚುಗೆ ವ್ಯಕ್ತವಾಗಿತ್ತು. ನಾಗಣ್ಣ ನಿರ್ದೇಶನದ ಚಿತ್ರದಲ್ಲಿ ಡಾ.ವಿಷ್ಣುವರ್ಧನ್‌ಗೆ ಪ್ರಿಯಾಂಕಾ ಉಪೇಂದ್ರ ಜೋಡಿಯಾಗಿದ್ದರು. ದೇವರಾಜ್, ಅಭಿಜಿತ್, ಅಶಿಷ್ ವಿದ್ಯಾರ್ಥಿ, ರಮೇಶ್ ಭಟ್ ಸೇರಿ ಹಲವರು ಅಭಿನಯಿಸಿದ್ದರು. ಇದೀಗ ‘ಕೋಟಿಗೊಬ್ಬ’ ಸಿನಿಮಾ ತೆರೆಕಂಡು 25 ವರ್ಷಗಳು ಸಂದಿವೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಚಿತ್ರತಂಡವು ಬೆಳ್ಳಿ ಹಬ್ಬದ ಸಂಭ್ರಮ ಆಯೋಜಿಸಿತ್ತು. ಉಪೇಂದ್ರ, ‘ವಿಷ್ಣು ಸರ್ ಮಾತನಾಡಿಸಲೆಂದೇ ಅವರ ಮನೆಗೆ ಹೋಗುತ್ತಿದ್ದೆ. ಅಧ್ಯಾತ್ಮ, ದೇವರ ಬಗ್ಗೆ ಅವರು ತುಂಬಾ ಹೊತ್ತು ಮಾತನಾಡುತ್ತಿದ್ದರು. ಅಂಥ ಮಹಾನ್ ವ್ಯಕ್ತಿಯ ಮಾತು ಕೇಳುವುದೇ ಪುಣ್ಯ. ಅವರಿಂದ ನಾನು ಸ್ಪೂರ್ತಿ ಪಡೆಯುತ್ತಿದ್ದೆ. ನಿಮ್ಮ ಸಿನಿಮಾಗಳು ಬೇರೆಯದೇ ಪ್ರೇಕ್ಷಕರನ್ನು ಹುಟ್ಟು ಹಾಕುತ್ತಿವೆ ಎಂದು ನನ್ನ ಸಿನಿಮಾಗಳ ಬಗ್ಗೆ ವಿಷ್ಣು ಸರ್ ಮೆಚ್ಚಿಕೊಂಡಿದ್ದರು’ ಎಂದರು. ಪ್ರಿಯಾಂಕಾ ಉಪೇಂದ್ರ, ‘ಈ ಚಿತ್ರದ ಮೂಲಕ ಹೃದಯವಂತ ವ್ಯಕ್ತಿಯ ಜತೆ ನಟಿಸುವ ಅವಕಾಶ ಸಿಕ್ಕಿದ್ದು, ನನ್ನ ಬದುಕಿನ ಪುಣ್ಯ’ ಎಂದರು. ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ, ನಿರ್ದೇಶಕ ನಾಗಣ್ಣ, ನಿರ್ಮಾಪಕ ಸೂರಪ್ಪ ಬಾಬು, ಹಿರಿಯ ನಟ ದೇವರಾಜ್, ನಟಿ ಪ್ರಿಯಾಂಕಾ ಉಪೇಂದ್ರ, ಗುರುದತ್, ಸಾಹಿತಿ ಕೆ.ಕಲ್ಯಾಣ್ ಇದ್ದರು.

ಅವರಂತೆ ನಾನು ಕಡಗ ಹಾಕಿಕೊಳ್ತೇನೆ

ನಟ ಗಣೇಶ್, ‘ನಾನು ವಿಷ್ಣು ಸರ್ ದೊಡ್ಡ ಅಭಿಮಾನಿ. ಅವರ ಹಾಗೇ ಕೈಯಲ್ಲಿ ಕಡಗ ಹಾಕಿಕೊಂಡಿದ್ದೇನೆ. ವಿಷ್ಣು ಸರ್ ಸಿನಿಮಾಗಳನ್ನು ಬ್ಲಾಕ್ ಟಿಕೆಟ್ ತೆಗೆದುಕೊಂಡು ನೋಡುತ್ತಿದ್ದೆ. ಯಾವಾಗಲೂ ಸಂತೋಷವಾಗಿರುವಂತೆ ಇರಬೇಡ, ಸಂತೋಷವಾಗಿರು ಎಂದು ನನಗೆ ಸಲಹೆ ನೀಡುತ್ತಿದ್ದರು’ ಎಂದು ನೆನಪುಗಳನ್ನು ಹಂಚಿಕೊಂಡರು.

ಶಿಸ್ತು, ಸಂಯಮ ಕಲಿಸಿದರು

ನಟ ದೇವರಾಜ್, ವಿಷ್ಣು ಜತೆಗಿನ ಒಡನಾಟ ನೆನೆದು, ‘ಯಾವಾಗ ಮನೆಗೆ ಹೋದರೂ ನನ್ನನ್ನು ತಮ್ಮನ ತರ ಆತ್ಮೀಯತೆಯಿಂದ ಬರಮಾಡಿಕೊಂಡು, ಮನೆಯ ತೂಗುಯ್ಯಲೆಯಲ್ಲಿ ಕೂರಿಸಿಕೊಳ್ಳುತ್ತಿದ್ದರು. ಅಲ್ಲಿ ಭಾರತಿ ಕೈತುತ್ತು ನೀಡುತ್ತಿದ್ದರು. ವಿಷ್ಣು ಶಿಸ್ತು, ಸಂಯಮಗಳನ್ನೇ ನನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ. ಮುಂಬೈನಲ್ಲಿ ಈ ಚಿತ್ರದ ಶೂಟಿಂಗ್‌ಗಾಗಿ 30 ದಿನಗಳ ಕಾಲ ಅವರ ಜತೆ ಕಾಲ ಕಳೆದಿದ್ದು, ಮರೆಯಲಾಗದು. ‘ಸೂರಪ್ಪ’ ಚಿತ್ರದಲ್ಲಿ ನಾನು ಅವರ ವಿಗ್ರಹ ಒಡೆದು ಹಾಕುವ ಸನ್ನಿವೇಶವಿದ್ದರಿಂದ ಪಾತ್ರ ಮಾಡಲು ಒಪ್ಪಿಕೊಳ್ಳಲಿಲ್ಲ. ಆದರೆ, ‘ಕೋಟಿಗೊಬ್ಬ’ ಚಿತ್ರಕ್ಕೆ ಕರೆ ಬಂದಾಗ ಬ್ಯುಸಿ ಇದ್ದರೂ ತಕ್ಷಣ ಒಪ್ಪಿ, ಇನ್‌ಸ್ಪೆಕ್ಟರ್ ಪಾತ್ರ ಮಾಡಿದೆ’ ಎಂದು ಮೆಲುಕು ಹಾಕಿದರು.