'ಕೊರಗಜ್ಜ' ಚಿತ್ರದ ಪೋಸ್ಟರ್
- ಬಹುನಿರೀಕ್ಷಿತ 'ಕೊರಗಜ್ಜ' ಚಿತ್ರದ ಬಹುತೇಕ ಶೂಟಿಂಗ್ ಪೂರ್ಣ
- ಇಡೀ ಸಿನಿಮಾವನ್ನು 3ಡಿ ರೂಪದಲ್ಲಿ ತರಲು ನಿರ್ಧಾರ
- ಅಂತಾರಾಷ್ಟ್ರೀಯ ವಿತರಣಾ ಸಂಸ್ಥೆಯು 3ಡಿಗೆ ಮೇಲ್ದರ್ಜೆಗೇರಿಸುವಂತೆ ಸೂಚನೆ
ಬೆಂಗಳೂರು: ತ್ರಿವಿಕ್ರಮ್ ಸಪಲ್ಯ ನಿರ್ಮಾಣದ, ಸುಧೀರ್ ಅತ್ತಾವರ ನಿರ್ದೇಶನದ ಬಹುನಿರೀಕ್ಷಿತ 'ಕೊರಗಜ್ಜ' (Koragajja Movie) ಚಿತ್ರದ ಬಹುತೇಕ ಶೂಟಿಂಗ್ ಪೂರ್ಣಗೊಂಡಿದ್ದು, ರಿಲೀಸ್‌ಗೆ ಸಿದ್ಧತೆ ನಡೆಸುತ್ತಿದೆ. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಚಿತ್ರತಂಡ ಹೊಸ ಮಾಹಿತಿ ಹಂಚಿಕೊಂಡಿದ್ದು, ಇಡೀ 'ಕೊರಗಜ್ಜ' ಚಿತ್ರವನ್ನು 3ಡಿ ರೂಪದಲ್ಲಿ ತರಲು ನಿರ್ಧರಿಸಿದೆ.
ಈ ಮೊದಲು 2ಡಿಯಲ್ಲಿ ಚಿತ್ರದ ಶೂಟಿಂಗ್ ಮಾಡಲಾಗಿತ್ತು. ಚಿತ್ರದ ಗುಣಮಟ್ಟವನ್ನು ನೋಡಿದ ಅಂತಾರಾಷ್ಟ್ರೀಯ ವಿತರಣಾ ಸಂಸ್ಥೆಯು ಸಿನಿಮಾವನ್ನು 3ಡಿಗೆ ಮೇಲ್ದರ್ಜೆಗೇರಿಸುವಂತೆ ಸೂಚಿಸಿದೆ. 3ಡಿಯಲ್ಲಿ ಬರುವ ಚಿತ್ರಗಳು ಪ್ರೇಕ್ಷಕರಿಗೆ ಇನ್ನಷ್ಟು ಆಪ್ತವಾಗುತ್ತವೆ ಹಾಗೂ ಭಾವನಾತ್ಮಕ ಸಂಪರ್ಕ ಬೆಸೆಯುತ್ತವೆ ಎಂಬ ಕಾರಣಕ್ಕೆ ಚಿತ್ರತಂಡ ಇದೀಗ 'ಕೊರಗಜ್ಜ ಚಿತ್ರವನ್ನು 2ಡಿಯಿಂದ 3ಡಿಯಲ್ಲಿ ರೂಪಿಸಲು ಮುಂದಾಗಿದೆ. ಈ ವಿಚಾರವನ್ನು ನಿರ್ದೇಶಕ ಸುಧೀರ್ ಅತ್ತಾವರ ಅಧಿಕೃತವಾಗಿ ಘೋಷಿಸಿದ್ದು, 'ಇದಕ್ಕಾಗಿ ಸುಮಾರು 40 ಜನ ತಂತ್ರಜ್ಞರ ತಂಡ ಕೆಲಸ ಮಾಡುತ್ತಿದೆ' ಎಂದಿದ್ದಾರೆ.
ಅಂಡರ್-ವಾಟರ್ ಶೂಟಿಂಗ್
ಕನ್ನಡದಲ್ಲಿ ಅಂಡರ್-ವಾಟರ್ ಶೂಟಿಂಗ್ ಮಾಡಿರುವುದು ವಿರಳ. ಈ ಹಿಂದೆ ವರನಟ, ಡಾ. ರಾಜ್ಕುಮಾರ್ ಅಭಿನಯದ 'ಒಂದು ಮುತ್ತಿನ ಕಥೆ' ಚಿತ್ರವನ್ನು ಚಿತ್ರೀಕರಿಸಲಾಗಿತ್ತು. ಇದೀಗ ಈ ಸಾಹಸಕ್ಕೆ 'ಕೊರಗಜ್ಜ' ಚಿತ್ರತಂಡ ಮುಂದಾಗುತ್ತಿದೆ. ಅದರಲ್ಲೂ ನಟಿ ಶ್ರುತಿ ಅಂಡರ್-ವಾಟರ್‌ನಲ್ಲಿ ಚಿತ್ರೀಕರಿಸಿರುವುದು ವಿಶೇಷ. ಕೈಮ್ಯಾಕ್ಸ್ ವೈಭವೀಕರಿಸುವ ಕಾರಣಕ್ಕೆ ಚಿತ್ರತಂಡ ಅಂಡರ್ ವಾಟರ್ ಶೂಟಿಂಗ್‌ನಲ್ಲಿ ಕೆಲ ದೃಶ್ಯಗಳನ್ನು ರಿ-ಶೂಟ್ ಮಾಡಿದೆ. ಕೇರಳದ ತಿರುವಂತನಪುರಂನ ವಿಸ್ಮಯ ಸ್ಟುಡಿಯೋದಲ್ಲಿ ವಿಶೇಷ ಸೆಟ್ ನಿರ್ಮಿಸಿ ಚಿತ್ರೀಕರಿಸಲಾಗಿದೆ.
ಛಾಯಾಗ್ರಾಹಕ ಮನೋಜ್ ಪಿಳ್ಳೆ ನೀರಿನಾಳಕ್ಕಿಳಿದು ನಾಲ್ಕು ಕ್ಯಾಮರಾಗಳಲ್ಲಿ ದೃಶ್ಯಗಳನ್ನು ಚಿತ್ರೀಕರಿಸಿದ್ದಾರೆ. ಇದಕ್ಕಾಗಿ ಶ್ರುತಿ 15 ದಿನಗಳ ಕಾಲ ತರಬೇತಿ ಪಡೆದಿದ್ದಾರೆ. ಸೆಟ್‌ನಲ್ಲಿ ಸ್ಕೂಬಾ ಡೈವರ್ಸ್‌ಗಳನ್ನು ನಿಯೋಜಿಸಲಾಗಿತ್ತು. ಜತಗೆ ಆಂಬುಲೆನ್ಸ್, ವೈದ್ಯರ ತಂಡ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದವು. 30 ಅಡಿ ಎತ್ತರದಿಂದ ನೀರಿಗೆ ಜಿಗಿದು ಮತ್ತೆ ಹಾರಿ ಹೊರಬರುವ ಮೈನವಿರೇಳಿಸುವ ಸಾಹಸಮಯ ದೃಶ್ಯದಲ್ಲಿ ಶ್ರುತಿ ಕಾಣಿಸಿಕೊಳ್ಳಲಿದ್ದಾರೆ. ಜತೆಗೆ 22 ಸೆಕೆಂಡ್‌ಗಳ ಕಾಲ ಯಾವುದೇ ಆಮ್ಲಜನಕದ ಸಹಾಯವಿಲ್ಲದೆ ನೀರಿನೊಳಗೆ ಅಭಿನಯಿಸಿದ್ದಾರೆ. ಮರು ಚಿತ್ರೀಕರಣದಿಂದ ಸುಮಾರು 12 ಕೋಟಿ ರೂ. ಬಜೆಟ್ ಹೆಚ್ಚಳವಾಗಿದೆ ಎಂದು ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ ಮಾಹಿತಿ ಹಂಚಿಕೊಂಡಿದ್ದಾರೆ.