Kichcha Sudeep  
ಸ್ಯಾಂಡಲ್‌ವುಡ್

ಅವರು ಯಾವ ನೋವಲ್ಲಿದ್ದಾರೋ ಗೊತ್ತಿಲ್ಲ: ವಿಜಯಲಕ್ಷ್ಮೀ ದರ್ಶನ್​ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು?

ಬೆಂಗಳೂರು:ಕನ್ನಡ ಚಿತ್ರರಂಗದಲ್ಲಿ ಪೈರಸಿ ಒಂದು ಮಾರಕ ಸಮಸ್ಯೆಯಾಗಿ ಪರಿಣಮಿಸಿದೆ. ನಟ ಕಿಚ್ಚ ಸುದೀಪ್ ಅವರು ತಮ್ಮ ಹೊಸ ಚಿತ್ರ 'ಮಾರ್ಕ್' ರಿಲೀಸ್ ಹೊಸ್ತಿಲಲ್ಲಿ ಪೈರಸಿ ವಿರುದ್ಧ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದೇ ಡಿಸೆಂಬರ್ 25ಕ್ಕೆ ರಿಲೀಸ್ ಆಗಲಿರುವ 'ಮಾರ್ಕ್' ಚಿತ್ರದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಸುದೀಪ್ ಅವರು "ನನ್ನ ಸಿನಿಮಾ ರಿಲೀಸ್ ಆಗುವಾಗ ಒಂದು ಪಡೆ ಯುದ್ಧಕ್ಕೆ ಸಜ್ಜಾಗಿದೆ. ನಾವೂ ಸಿದ್ಧರಾಗಿದ್ದೇವೆ" ಎಂದು ಹೇಳಿದ್ದರು. ಇದು ಪೈರಸಿ ಮಾಡುವವರ ವಿರುದ್ಧವೇ ಎಂದು ಸುದೀಪ್ ಅವರೇ ಸ್ಪಷ್ಟನೆ ನೀಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಉಂಟಾದ ಈ ದೊಡ್ಡ ವಿವಾದಕ್ಕೆ ನಟ ಕಿಚ್ಚ ಸುದೀಪ್ ಅವರ ಹೇಳಿಕೆ ಕಾರಣವಾಗಿದೆ. ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಮೂಡಿಸಿದೆ.

ದರ್ಶನ್​ ಅಭಿಮಾನಿಗಳ ಆಕ್ರೋಶ

ಅಂದಹಾಗೆ, ಇಲ್ಲಿ ಸುದೀಪ್​ ಅವರು ಯಾರ ಹೆಸರನ್ನು ಸಹ ಉಲ್ಲೇಖಿಸಲಿಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ನಟ ದರ್ಶನ್​ ಅಭಿಮಾನಿಗಳು ಸುದೀಪ್​ ಅವರ ವಿರುದ್ಧ ಮುಗಿಬಿದ್ದಿದ್ದಾರೆ. ಸುದೀಪ್​ ಅವರು ನಮ್ಮನ್ನು ಉದ್ದೇಶಿಸಿ ಈ ಮಾತನ್ನು ಹೇಳಿದ್ದಾರೆ ಎಂದು ಭಾವಿಸಿರುವ ದರ್ಶನ್​ ಅಭಿಮಾನಿಗಳು ಸುದೀಪ್​ ವಿರುದ್ಧ ಹರಿಹಾಯ್ದಿದ್ದಾರೆ.

ವಿಜಯಲಕ್ಷ್ಮೀ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು..?

ಇದೀಗ ಈ ವಿವಾದಕ್ಕೆ ಸುದೀಪ್ ಅವರು ಸ್ಪಷ್ಟನೆ ನೀಡಿದ್ದಾರೆ. ತಮ್ಮ ಹೇಳಿಕೆ ಪೈರಸಿ ಮಾಡುವವರ ವಿರುದ್ಧವೇ ಹೊರತು ದರ್ಶನ್ ಅಥವಾ ಅವರ ಅಭಿಮಾನಿಗಳ ವಿರುದ್ಧವಲ್ಲ ಎಂದು ಹೇಳಿದ್ದಾರೆ. ವಿಜಯಲಕ್ಷ್ಮೀ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, "ವೇದಿಕೆ ಹತ್ತಿ ಸಂದರ್ಶನ ಕೊಡ್ತಿದಾರೆ ಎಂದು ಅವರು ಹೇಳಿದ್ದಾರೆ. ನನಗೆ ಹೇಳಿದ್ರೆ ನಾನು ಉತ್ತರ ಕೊಡ್ತೀನಿ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರೂ ವೇದಿಕೆ ಹತ್ತುತ್ತಾರೆ. ಅವರಿಗೂ ಹೇಳಿದ್ದು ಇರಬಹುದಲ್ಲ. ಅವರಿಗೆ ಏನು ನೋವಿದೆ ಗೊತ್ತಿಲ್ಲ" ಎಂದು ಹೇಳಿದ ಸುದೀಪ್, ಇದು ಪೈರಸಿ ವಿರುದ್ಧದ ಹೋರಾಟ ಎಂದು ಸ್ಪಷ್ಟಪಡಿಸಿದ್ದಾರೆ.

ವೇದಿಕೆಯಲ್ಲಿ ಕಿಚ್ಚ ಹೇಳಿದ್ದೇನು?

ಡಿಸೆಂಬರ್​ 20ರಂದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಾರ್ಕ್​ ಚಿತ್ರದ ಪ್ರೀರಿಲೀಸ್​ ಈವೆಂಟ್​ ಅದ್ಧೂರಿಯಾಗಿ ನಡೆಯಿತು. ವೇದಿಕೆಯಲ್ಲಿ ಮಾತನಾಡಿದ ಕಿಚ್ಚ, ನಾನು ಇಲ್ಲಿಯವರೆಗೂ ನಮ್ಮ ಅಭಿಮಾನಿಗಳಿಗೆ ಏನೂ ಮಾತನಾಡದೇ ಸುಮ್ಮನಿದ್ದೇನೆ. ನಾನು ಸುಮ್ಮನಿದ್ದ ಮಾತ್ರಕ್ಕೆ ನನ್ನಿಂದು ಏನು ಆಗಲ್ಲ ಅಂತಲ್ಲ. ತಾಳ್ಮೆಗೂ ಒಂದು ಮಿತಿ ಇದೆ. ಎಲ್ಲವನ್ನು ಸಹಿಸಿಕೊಂಡು ಇರಲಾಗದು. ಇದೇ ಡಿ.25ಕ್ಕೆ ಒಂದು ಸಿನಿಮಾ ಬರುತ್ತಿದೆ. ಇನ್ನೊಂದೆಡೆ ಒಂದು ಪಡೆ ಯುದ್ಧಕ್ಕೆ ರೆಡಿಯಾಗುತ್ತಿದೆ. ಆ ಯುದ್ಧಕ್ಕೆ ನಾವು ರೆಡಿಯಾಗಿದ್ದೇವೆ. ಏಕೆಂದರೆ, ನಾವು ನಮ್ಮ ಮಾತಿಗೆ ಬದ್ದ ಎಂದು ಸುದೀಪ್​ ಹೇಳಿದರು.

ವಿಜಯಲಕ್ಷ್ಮೀ ಟಾಂಗ್​ ಕೊಟ್ರಾ?

ದಾವಣಗೆರೆಯಲ್ಲಿ 'ಡೆವಿಲ್' ಚಿತ್ರದ ವಿಜಯಯಾತ್ರೆ ವೇಳೆ ಪರೋಕ್ಷವಾಗಿ ಟಾಂಗ್ ನೀಡಿದರು. "ದರ್ಶನ್ ಇಲ್ಲದೇ ಇದ್ದಾಗ ಕೆಲವರು ಅವರ ಬಗ್ಗೆ, ಅಭಿಮಾನಿಗಳ ಬಗ್ಗೆ ಏನೇನೋ ಮಾತಾಡ್ತಾರೆ. ಆದರೆ ದರ್ಶನ್ ಇದ್ದಾಗ ಅವರು ಬೆಂಗಳೂರಲ್ಲೇ ಇರ್ತಾರಾ ಇಲ್ವಾ ಅಂತ ಗೊತ್ತಾಗಲ್ಲ" ಎಂದು ಕುಟುಕಿದರು. ಇದು ಸುದೀಪ್ ಅವರನ್ನೇ ಉದ್ದೇಶಿಸಿದ್ದು ಎಂದು ಅಭಿಮಾನಿಗಳು ಭಾವಿಸಿದರು.ಈ ವಿವಾದಕ್ಕೆ ಸುದೀಪ್ ಅವರು ಸ್ಪಷ್ಟನೆ ನೀಡಿದ್ದಾರೆ. ತಮ್ಮ ಹೇಳಿಕೆ ಪೈರಸಿ ಮಾಡುವವರ ವಿರುದ್ಧವೇ ಹೊರತು ದರ್ಶನ್ ಅಥವಾ ಅವರ ಅಭಿಮಾನಿಗಳ ವಿರುದ್ಧವಲ್ಲ ಎಂದು ಹೇಳಿದ್ದಾರೆ,(ಏಜೆನ್ಸೀಸ್​).