ರಕ್ಕಸಪುರದೋಳ್​ 
ಸ್ಯಾಂಡಲ್‌ವುಡ್

Raj B Shetty - ರಕ್ಕಸಪುರದೋಳ್​ ಟ್ರೇಲರ್ ಬಿಡುಗಡೆ ಮಾಡಿದ ಕಿಚ್ಚ ಸುದೀಪ್​

Raj B Shetty - ರಾಜ್​ ಬಿ. ಶೆಟ್ಟಿ ನಾಯಕನಾಗಿರುವ, ನಿರ್ದೇಶಕ ಪ್ರೇಮ್​ ಶಿಷ್ಯ ರವಿ ಸಾರಂಗ ಚೊಚ್ಚಲ ಬಾರಿಗೆ ನಿರ್ದೇಶಿಸಿ, ಸಾಹಸ ನಿರ್ದೇಶಕ ಡಾ. ರವಿವರ್ಮಾ ಮೊದಲ ಬಾರಿಗೆ ನಿರ್ಮಿಸಿರುವ ಸಿನಿಮಾ "ರಕ್ಕಸಪುರದೋಳ್​'. ಇದು ಕೊಳ್ಳೇಗಾಲದ ಹಿನ್ನೆಲೆಯಲ್ಲಿ ಸಾಗುವ ಸೈಕಲಾಜಿಕಲ್​ ಆ್ಯಕ್ಷನ್​ ಥ್ರಿಲ್ಲರ್​ ಕಥೆಯಾಗಿದ್ದು, ಸಿನಿಮಾ ಇದೇ ತಿಂಗಳ 6ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. 
ಹೀಗಾಗಿ ಇತ್ತೀಚೆಗಷ್ಟೆ ನಟ ಕಿಚ್ಚ ಸುದೀಪ್​ ಚಿತ್ರದ ಟ್ರೇಲರ್​ ಬಿಡುಗಡೆ ಮಾಡಿ, "ರಾಜ್​ ಹೆಸರನ್ನೇ ಹೇಳಲಾಗದ ಶೀರ್ಷಿಕೆಗಳನ್ನಿಟ್ಟು ಸಿನಿಮಾ ಮಾಡಿ ಗೆಲ್ಲುತ್ತಾರೆ. ನನಗೂ ಹಾಗೊಂದು ಹೆಸರು ಹೇಳಲಾಗದ ಟೈಟಲ್​ ಇಟ್ಟು ಸಿನಿಮಾ ಮಾಡಿ. "ರಕ್ಕಸಪುರದೋಳ್​' ಟ್ರೇಲರ್​ ಚೆನ್ನಾಗಿ ಮೂಡಿಬಂದಿದೆ. ನಾನು ಮತ್ತು ರವಿವರ್ಮಾ ಹೆಚ್ಚೂಕಡಿಮೆ ಚಿತ್ರರಂಗಕ್ಕೆ ಒಟ್ಟಿಗೆ ಬಂದೆವು. ಅವರಿಗೆ ಮತ್ತು ಇಡೀ ತಂಡಕ್ಕೆ ಒಳಿತಾಗಲಿ' ಎಂದು ಶುಭಹಾರೈಸಿದರು. 
ನಾಯಕ ರಾಜ್​ ಬಿ. ಶೆಟ್ಟಿ, "ನಾನು ಈ ಸಿನಿಮಾ ಒಪ್ಪಿಕೊಳ್ಳಲು ನಿರ್ದೇಶಕರೇ ಕಾರಣ. ಕನ್ನಡದಲ್ಲಿ ನಿರ್ದೇಶಕರ ಕೊರತೆ ಇದೆ ಅಂತ ಮತ್ತೆ ಹೇಳುವೆ. ಇದು ರಿಚ್​ ಸಿನಿಮಾ. ಹಾಗಂತ ಬಜೆಟ್​ನಲ್ಲಲ್ಲ. ತಂತ್ರಜ್ಞರು ಶ್ರೀಮಂತರು ಇರುವಾಗ ಕಡಿಮೆ ಬಜೆಟ್​ ಚಿತ್ರವೂ ಯಶಸ್ಸು ಗಳಿಸುತ್ತದೆ' ಎಂದರು. ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ರಿಲೀಸ್​ ಆಗಲಿದ್ದು, ಎರಡೂ ಭಾಷೆಗಳಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ದಿನಗಳಲ್ಲಿ ಬೇರೆ ಭಾಷೆಗಳಿಗೂ ಡಬ್​ ಮಾಡುವ ಆಲೋಚನೆ ಚಿತ್ರತಂಡದ್ದು. 
ರಾಜ್​ಗೆ ಚಿತ್ರದಲ್ಲಿ "ಒಂದು ಸರಳ ಪ್ರೇಮಕಥೆ' ಖ್ಯಾತಿಯ ತಮಿಳು ನಟಿ ಸ್ವಾತಿಷ್ಠ ಕೃಷ್ಣನ್​ ಜೋಡಿಯಾಗಿದ್ದು, ಅರ್ಚನಾ ಕೊಟ್ಟಿಗೆ, ಅನಿರುದ್ಧ್​ ಭಟ್​, ಬಿ. ಸುರೇಶ್​, ಗೋಪಾಲ್​ ದೇಶಪಾಂಡೆ, ಗೌರವ್​ ಶೆಟ್ಟಿ, ಜಹಾಂಗೀರ್​ ಪ್ರಮುಖ ತಾರಾಗಣದಲ್ಲಿದ್ದಾರೆ. ಅರ್ಜುನ್​ ಜನ್ಯ ಸಂಗೀತ, ವಿಲಿಯಮ್​ ಡೇವಿಡ್​ ಛಾಯಾಗ್ರಹಣದಲ್ಲಿ ಸಿನಿಮಾ ಮೂಡಿಬಂದಿದೆ.