ಕಿಚ್ಚ ಸುದೀಪ್ ಅಭಿನಯದ ಹೊಸ ಸಿನಿಮಾ ಅನೌನ್ಸ್: ಪಾತ್ರ ಯಾವುದು? ನೈಜ ಘಟನೆಗಳ ಪ್ರೇರಿತ ಚಿತ್ರ! Kichcha Sudeep
- ಕಾಲಿವುಡ್ ಸಿನಿಮಾವೊಂದರಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆ
- ಕಾರ್ತಿಕ್ ಪೆರುಮಾಳಸಾಮಿ ನಿರ್ದೇಶನದ ಮುಂಬರುವ ಬಹುನಿರೀಕ್ಷಿತ 'ಅಂಡರ್ 18' ಚಿತ್ರದಲ್ಲಿ ಕಿಚ್ಚ
- ಐಶ್ವರ್ಯ ರಾಜೇಶ್, ವಿಕ್ರಾಂತ್ ಹಾಗೂ ಕಿಶೋರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಅಂಡರ್ 18 ಸಿನಿಮಾ
- ಈ ಸಿನಿಮಾ ಪ್ರಯಾಣಕ್ಕೆ ಸಿಕ್ಕ ಅತ್ಯಂತ ದೊಡ್ಡ ಬಲ ಕಿಚ್ಚ ಸುದೀಪ್ ಎಂಟ್ರಿ ಎಂದ ಚಿತ್ರತಂಡ
Kichcha Sudeep : ಕಾರ್ತಿಕ್ ಪೆರುಮಾಳಸಾಮಿ ನಿರ್ದೇಶನದ ಮುಂಬರುವ ಬಹುನಿರೀಕ್ಷಿತ 'ಅಂಡರ್ 18' (Under 18) ಚಿತ್ರತಂಡಕ್ಕೆ ಕರ್ನಾಟಕದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನು ಚಿತ್ರದ ನಿರ್ಮಾಪಕರು ಅಧಿಕೃತವಾಗಿ ಬರಮಾಡಿಕೊಂಡಿದ್ದಾರೆ. ಈ ಕುರಿತು ಚಿತ್ರತಂಡವು ಗುರುವಾರದಂದು ಸಾಮಾಜಿಕ ಜಾಲತಾಣದ ಮೂಲಕ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದ್ದು, ಸುದೀಪ್ ಅವರ ಸೇರ್ಪಡೆಯಿಂದ ಚಿತ್ರದ ಮೇಲಿನ ನಿರೀಕ್ಷೆಗಳು ಈಗ ಮತ್ತಷ್ಟು ದುಪ್ಪಟ್ಟಾಗಿವೆ.
ಈ ರೋಚಕ ಅಪ್‌ಡೇಟ್ ಅನ್ನು AIM PRO ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಚಿತ್ರದ ಪ್ರೊಡಕ್ಷನ್ ಹೌಸ್, "ಬಾದ್‌ಶಾ ಆಗಮಿಸಿದ್ದಾರೆ! #Under18 ಚಿತ್ರತಂಡಕ್ಕೆ ಅತ್ಯದ್ಭುತ ನಟ ಕಿಚ್ಚ ಸುದೀಪ್ ಅವರನ್ನು ತುಂಬು ಹೃದಯದಿಂದ ಬರಮಾಡಿಕೊಳ್ಳುತ್ತಿದ್ದೇವೆ. ನಮ್ಮ ಈ ಸಿನಿಮಾ ಪ್ರಯಾಣಕ್ಕೆ ಸಿಕ್ಕ ಅತ್ಯಂತ ದೊಡ್ಡ ಬಲ ಇದು, ಅಸಲಿ ಪಯಣ ಈಗಷ್ಟೇ ಆರಂಭವಾಗಿದೆ! ಎಂದು ಬರೆದುಕೊಂಡು ತಮ್ಮ ಸಂಭ್ರಮವನ್ನು ವ್ಯಕ್ತಪಡಿಸಿದೆ.
ಅಂದಹಾಗೆ, 'ಅಂಡರ್ 18' ಸಿನಿಮಾವು ಅಪರಾಧ ಲೋಕದ ಕರಾಳ ಮುಖಗಳು ಹಾಗೂ ಅದರಿಂದ ಸಂತ್ರಸ್ತರಾದ ಕುಟುಂಬಗಳು ಅನುಭವಿಸುವ ನೋವಿನ ಮೇಲೆ ಬೆಳಕು ಚೆಲ್ಲುವ ಕಥಾಹಂದರ ಹೊಂದಿರುವ ಒಂದು ಎಮೋಷನಲ್ ಕ್ರೈಮ್ ಡ್ರಾಮಾ ಎನ್ನಲಾಗಿದೆ. ಐಎಎನ್‌ಎಸ್ (IANS) ವರದಿಯ ಪ್ರಕಾರ, ತಮಿಳುನಾಡಿನ ವಿವಿಧ ಭಾಗಗಳಲ್ಲಿ ನಡೆದ ನೈಜ ಘಟನೆಗಳಿಂದ ಪ್ರೇರಿತಗೊಂಡು ಈ ಕಥೆಯನ್ನು ಸಿದ್ಧಪಡಿಸಲಾಗಿದ್ದು, ವಿವಿಧ ಅಪರಾಧ ಹಿನ್ನೆಲೆಗಳನ್ನು ಇದು ಅನ್ವೇಷಿಸಲಿದೆ. ಈ ಚಿತ್ರವು ಪ್ರೇಕ್ಷಕರ ಮನಸ್ಸಿನಲ್ಲಿ ಆಳವಾದ ಭಾವನಾತ್ಮಕ ಪ್ರಭಾವ ಬೀರಲಿದೆ ಎಂಬ ಬಲವಾದ ನಂಬಿಕೆಯನ್ನು ಚಿತ್ರತಂಡ ವ್ಯಕ್ತಪಡಿಸಿದೆ.
ಈ ಚಿತ್ರದಲ್ಲಿ ಐಶ್ವರ್ಯ ರಾಜೇಶ್, ವಿಕ್ರಾಂತ್ ಹಾಗೂ ಕಿಶೋರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು, ಇವರೊಂದಿಗೆ ಇತರ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿರುವ ಕಾರ್ತಿಕ್ ಪೆರುಮಾಳಸಾಮಿ ಅವರು, ಈ ಹಿಂದೆ ಖ್ಯಾತ ತಮಿಳು ಚಲನಚಿತ್ರ ನಿರ್ದೇಶಕ ವೆಟ್ರಿಮಾರನ್ ಅವರೊಂದಿಗೆ ಸಹ-ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಇತ್ತೀಚೆಗಷ್ಟೇ ವೆಟ್ರಿಮಾರನ್ ಅವರೇ ಈ ಚಿತ್ರದ 'ಟೈಟಲ್ ಲುಕ್' ಅನ್ನು ಬಿಡುಗಡೆ ಮಾಡಿದ್ದು, ಇದು ಚಲನಚಿತ್ರ ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.
ಬಹುನಿರೀಕ್ಷಿತ ‘ಅಂಡರ್ 18’ ಚಿತ್ರವು ಶುಕ್ರವಾರದಂದು ಅಧಿಕೃತ ಪೂಜಾ ಕಾರ್ಯಕ್ರಮದೊಂದಿಗೆ ಅದ್ಧೂರಿಯಾಗಿ ಚಾಲನೆ ಪಡೆದುಕೊಂಡಿದೆ. ಚಿತ್ರದ ಪ್ರಮುಖ ಭಾಗಗಳ ಚಿತ್ರೀಕರಣವನ್ನು ಹೊಸೂರು, ಚೆಂಗಲ್ಪಟ್ಟು ಮತ್ತು ಚೆನ್ನೈನಲ್ಲಿ ನಡೆಸಲು ಚಿತ್ರತಂಡ ನಿರ್ಧರಿಸಿದೆ. ಸಿನಿಮಾದಲ್ಲಿ ನೈಜತೆ ಹಾಗೂ ಸ್ವಾಭಾವಿಕತೆಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ನೈಜ ಸ್ಥಳಗಳಲ್ಲೇ ಶೂಟಿಂಗ್ ಮಾಡಲು ನಿರ್ಮಾಪಕರು ಯೋಜಿಸಿದ್ದಾರೆ. ಇನ್ನು ತಾಂತ್ರಿಕ ವಿಭಾಗದಲ್ಲಿ ಪ್ರಸಿದ್ಧ ಛಾಯಾಗ್ರಾಹಕ ವೇಲ್‌ರಾಜ್ ಅವರು ಕ್ಯಾಮೆರಾ ಜವಾಬ್ದಾರಿ ಹೊತ್ತಿದ್ದರೆ, ಸ್ಯಾಮ್ ಸಿ.ಎಸ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಇಳಂಗೋ ಕೃಷ್ಣನ್ ಮತ್ತು ಕಾರ್ತಿಕ್ ನೇತಾ ಸಾಹಿತ್ಯ ಬರೆಯಲಿದ್ದಾರೆ.
ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾಗಳು
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಸಿನಿಮಾಗಳ ವಿಚಾರಕ್ಕೆ ಬಂದರೆ, ಅವರು ಕೊನೆಯದಾಗಿ 2025ರ ಆಕ್ಷನ್ ಥ್ರಿಲ್ಲರ್ ಸಿನಿಮಾ ‘ಮಾರ್ಕ್’ (Mark) ನಲ್ಲಿ ಕಾಣಿಸಿಕೊಂಡಿದ್ದರು. ಅವರ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ನೋಡುವುದಾದರೆ, ಸುದೀಪ್ ಅವರು ಬಹುನಿರೀಕ್ಷಿತ 'ಬಿಲ್ಲ ರಂಗ ಭಾಷಾ' ಚಿತ್ರದಲ್ಲಿ ನಟಿಸಲಿದ್ದಾರೆ. ಇದರೊಂದಿಗೆ ನಿರ್ದೇಶಕ ವಿಜಯ್ ಕಾರ್ತಿಕೇಯಾ ಅವರ ಜೊತೆ ಮತ್ತೊಮ್ಮೆ ಕೈಜೋಡಿಸಲಿದ್ದಾರೆ ಎಂಬ ಮಾತುಗಳಿವೆ. ಅಲ್ಲದೆ, ಟಾಲಿವುಡ್ ಸ್ಟಾರ್ ಡೈರೆಕ್ಟರ್ ಸುಕುಮಾರ್ ಅವರ ಶಿಷ್ಯರೊಬ್ಬರ ನಿರ್ದೇಶನದಲ್ಲಿ ಸುದೀಪ್ ರೊಮ್ಯಾಂಟಿಕ್ ಕಾಮಿಡಿ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ, (ಏಜೆನ್ಸೀಸ್).