ಸೆಲೆಬ್ರಿಟಿ ಚಿತ್ರತಂಡದ ಜತೆ ಸುದೀಪ್ 
ಸ್ಯಾಂಡಲ್‌ವುಡ್

‘ಸೆಲೆಬ್ರಿಟಿ’ಗೆ ಕಿಚ್ಚ ಸಾಥ್ : ಕಿರಣ್ ವಿಶ್ವನಾಥ್ ನಿರ್ದೇಶನದ ಚೊಚ್ಚಲ ಚಿತ್ರಕ್ಕೆ ಶುಭ ಕೋರಿದ ಸುದೀಪ್

ಪ್ರಮುಖ ಮುಖ್ಯಾಂಶಗಳು

  • ಕಿರಣ್ ವಿಶ್ವನಾಥ್ ಚೊಚ್ಚಲ ನಿರ್ದೇಶನದ ಚಿತ್ರ
  • ಯುವ ನಟ ಅಶ್ವಿನ್- ಪ್ರಿಯಾಂಕಾ ಮುಖ್ಯಭೂಮಿಕೆಯಲ್ಲಿರುವ ಸಿನಿಮಾ
  • ಚಿಕ್ಕನಾಯಕನಹಳ್ಳಿ ಅದ್ದೂರಿ ಸಮಾರಂಭದಲ್ಲಿ ಸಿನಿಮಾ ಲಾಂಚ್​
ಬೆಂಗಳೂರು: ‘ರನ್ನ’, ‘ವಿಕ್ಟರಿ’ ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಕಿರಣ್ ವಿಶ್ವನಾಥ್ ಇತ್ತೀಚೆಗೆ ಹೊಸ ಸಿನಿಮಾ ಘೋಷಿಸಿ, ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ಧರಿಸಲು ಸಿದ್ಧರಾಗಿದ್ದರು. ಟೈಟಲ್ ನಿಗದಿ ಮಾಡದ ಈ ಚಿತ್ರಕ್ಕೆ ನಾಯಕಿಯಾಗಿ ‘ಏಳುಮಲೆ’ ಖ್ಯಾತಿಯ ಪ್ರಿಯಾಂಕಾ ಆಚಾರ್ ಮತ್ತು ಮುಖ್ಯ ಪಾತ್ರಕ್ಕೆ ‘ಯಾರೇ ನೀನು ಚೆಲುವೆ’ ನಟಿ ಸಂಗೀತ ಆಯ್ಕೆಯಾಗಿದ್ದರು. ಆದರೆ, ಟೈಟಲ್ ಹಾಗೂ ನಾಯಕ ನಟ, ನಿರ್ಮಾಪಕ, ತಾಂತ್ರಿಕ ಬಳಗದ ಬಗ್ಗೆ ಯಾವ ಮಾಹಿತಿ ನೀಡಿರಲಿಲ್ಲ. ಇತ್ತೀಚೆಗೆ ಚಿತ್ರತಂಡವು ಚಿಕ್ಕನಾಯಕನಹಳ್ಳಿಯಲ್ಲಿ ಆಯೋಜಿಸಿದ್ದ ಅದ್ದೂರಿ ಸಮಾರಂಭದಲ್ಲಿ ಟೈಟಲ್ ಟೀಸರ್ ರಿಲೀಸ್ ಮಾಡಲಾಯಿತು. ಚಿತ್ರಕ್ಕೆ ‘ಸೆಲೆಬ್ರಿಟಿ’ ಎಂದು ಶೀರ್ಷಿಕೆ ನಿಗದಿಗೊಳಿಸಲಾಗಿದ್ದು, ಯುವ ನಟ ಅಶ್ವಿನ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ನಟ ಸುದೀಪ್ ಟೀಸರ್ ಲಾಂಚ್ ಮಾಡಿ, ‘ಟೀಸರ್ ತಾಂತ್ರಿಕವಾಗಿ ಚೆನ್ನಾಗಿ ಮೂಡಿಬಂದಿದ್ದು, ಸುಂದರವಾಗಿ ಮೂಡಿಬಂದಿದೆ. ವಿಜಯ್ ಮ್ಯೂಸಿಕ್ ಗಮನಸೆಳೆಯುತ್ತದೆ. ಇನ್ನು ನಾಯಕ ನಟ ಅಶ್ವಿನ್ ಟೀಸರ್‌ನಲ್ಲಿ ಡಾನ್ಸ್, ಲೈಟ್ ಮೂಲಕ ಗಮನಸೆಳೆದಿದ್ದಾರೆ. ನಾನು ಇಲ್ಲಿಗೆ ಬರಲು ಸಾ.ರಾ.ಮಹೇಶ್ ಕಾರಣ. ಸಿನಿಮಾ ಮಾಡುವುದು ಸುಲಭವಾದರೂ, ಬೆಳೆಯಬೇಕು ಎಂದರೆ ಎಲ್ಲರ ಸಹಕಾರ ಬೇಕು’ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು. ‘ಗೌರಿ ಆರ್ಟ್ಸ್ ಬ್ಯಾನರ್‌ಯಡಿಯಲ್ಲಿ ಜೆಡಿಎಸ್ ನಾಯಕ ಸಾ.ರಾ.ಮಹೇಶ್ ಹಾಗೂ ಸುಷ್ಮಾ ಅಶ್ವಿನ್ ‘ಸೆಲೆಬ್ರಿಟಿ’ಗೆ ಬಂಡವಾಳ ಹೂಡುತ್ತಿದ್ದಾರೆ. ಗುಮ್ಮಿನೇನಿ ವಿಜಯ್ ಸಂಗೀತ, ರವಿವರ್ಮಾ ಸಾಹಸ, ಅನಿರುದ್ಧ ಶಾಸಿ ಸಾಹಿತ್ಯ, ಜಾನಿ ಮಾಸ್ಟರ್ ನೃತ್ಯ ಚಿತ್ರಕ್ಕಿರಲಿದೆ.