ಅರ್ಚನಾ ಜೋಯಿಸ್ 
ಸ್ಯಾಂಡಲ್‌ವುಡ್

ಹಾದಿ ಬದಲಿಸಿದ ಅರ್ಚನಾ : ರೊಮ್-ಕಾಮ್ ಜಾನರ್ ಚಿತ್ರದ ಮೂಲಕ ತೆಲುಗಿಗೆ ಡೆಬ್ಯೂ ಮಾಡಿದ ‘ಕೆಜಿಎಫ್​’ ನಟಿ

ಅರ್ಚನಾ ಜೋಯಿಸ್ ಮಮ್ಮಿ ಕ್ಯಾರೆಕ್ಟರ್‌ನಿಂದ ಹೊರಬರುತ್ತಿದ್ದು, ಮುಂದಿನ ಸಿನಿಮಾದ ಮೂಲಕ ಜಾನರ್ ಬದಲಾಯಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಅವರು ರೊಮ್-ಕಾಮ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನು ಹೊಸ ಚಿತ್ರದ ಮೂಲಕ ಅವರು ಟಾಲಿವುಡ್‌ಗೆ ಎಂಟ್ರಿಯಾಗುತ್ತಿರುವುದು ವಿಶೇಷ. ಇತ್ತೀಚೆಗೆ ಚಿತ್ರಕ್ಕೆ ಮುಹೂರ್ತ ನೆರವೇರಿದ್ದು, ದಿವಾಕರ್ ಯೆಡ್ಲಾ ಆ್ಯಕ್ಷನ್-ಕಟ್ ಹೇಳುತ್ತಿದ್ದು, ವಿಜಯ್ ರಾಜ್‌ಕುಮಾರ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಬೆಂಗಳೂರು: ‘ಕೆಜಿಎಫ್’ ಸರಣಿ ಮೂಲಕವೇ ಬಣ್ಣದ ಲೋಕಕ್ಕೆ ಪರಿಚಯವಾದವರೂ ನಟಿ ಅರ್ಚನಾ ಜೋಯಿಸ್. ರಾಕಿ ಭಾಯ್ ಅಮ್ಮನಾಗಿ ಕಾಣಿಸಿಕೊಂಡಿದ್ದ ಅವರಿಗೆ ಆ ಚಿತ್ರದ ಬಳಿಕ ಅಂತಹದ್ದೇ ಪಾತ್ರಗಳು ಸಿಕ್ಕಿದ್ದವು. ‘ಹೊಂದಿಸಿ ಬರೆಯಿರಿ’, ‘ಕ್ಷೇತ್ರಪತಿ’ ಪಾತ್ರಗಳು ಪ್ರಬುದ್ಧವಾದರೂ, ಹಾದಿ ಮಾತ್ರ ಹಳೆಯದ್ದೇ ಆಗಿತ್ತು. ಆದರೆ, ಇದೀಗ ಅರ್ಚನಾ ಜೋಯಿಸ್ ಮಮ್ಮಿ ಕ್ಯಾರೆಕ್ಟರ್‌ನಿಂದ ಹೊರಬರುತ್ತಿದ್ದು, ಮುಂದಿನ ಸಿನಿಮಾದ ಮೂಲಕ ಜಾನರ್ ಬದಲಾಯಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಅವರು ರೊಮ್-ಕಾಮ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನು ಹೊಸ ಚಿತ್ರದ ಮೂಲಕ ಅವರು ಟಾಲಿವುಡ್‌ಗೆ ಎಂಟ್ರಿಯಾಗುತ್ತಿರುವುದು ವಿಶೇಷ. ಇತ್ತೀಚೆಗೆ ಚಿತ್ರಕ್ಕೆ ಮುಹೂರ್ತ ನೆರವೇರಿದ್ದು, ದಿವಾಕರ್ ಯೆಡ್ಲಾ ಆ್ಯಕ್ಷನ್-ಕಟ್ ಹೇಳುತ್ತಿದ್ದು, ವಿಜಯ್ ರಾಜ್‌ಕುಮಾರ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹೊಸ ಜರ್ನಿ ಬಗ್ಗೆ ನಟಿ ಅರ್ಚನಾ ಜೋಯಿಸ್ ‘ವಿಜಯವಾಣಿ’ ಜತೆ ಮಾಹಿತಿ ಹಂಚಿಕೊಂಡರು. ‘‘ಕ್ಷೇತ್ರಪತಿ’ ನಿರ್ದೇಶಕರ ಮುಖಾಂತರ ಈ ಹೊಸ ತಂಡ ಪರಿಚಯವಾಗಿ, ಆ ಮೂಲಕ ಚಿತ್ರಕ್ಕೆ ಅವಕಾಶ ಸಿಕ್ಕಿತು. ಮೊದಲ ತೆಲುಗು ಚಿತ್ರವಾಗಿದ್ದು, ಇದೇ ಮೊದಲ ಬಾರಿಗೆ ರೊಮ್ಯಾಂಟಿಕ್-ಕಾಮಿಡಿ ಚಿತ್ರವೊಂದರಲ್ಲಿ ನಟಿಸುತ್ತಿದ್ದೇನೆ. ಈವರೆಗೆ ನನ್ನನ್ನು ಮಮ್ಮಿ ಕ್ಯಾರೆಕ್ಟರ್‌ಗಳಿಗೆ ಸೀಮಿತ ಮಾಡಲಾಗಿತ್ತು. ಬಳಿಕ ಅಂತಹದ್ದೇ ಕಥೆಗಳು ಬರುತ್ತಿದ್ದರಿಂದ ಅಂತಹ ಪಾತ್ರಗಳಿಂದ ಹೊರಬರುವ ಕಾರಣಕ್ಕಾಗಿ ಎರಡು ವರ್ಷಗಳಿಂದ ಯಾವ ಚಿತ್ರಗಳನ್ನು ಒಪ್ಪಿಕೊಂಡಿರಲಿಲ್ಲ. ಇದೀಗ ಹೊಸ ಅವಕಾಶ ಸಿಕ್ಕಿದೆ ಆ ಮೂಲಕ ವಿಭಿನ್ನ ಎಂಬುದನ್ನು ತೋರಿಸಿಕೊಳ್ಳಬೇಕಿದೆ. ಚಿತ್ರಕ್ಕೆ ಇನ್ನಷ್ಟೆ ಹೆಸರಿಡಬೇಕಿದೆ. ಫನ್ ಸಿನಿಮಾವಾಗಿದ್ದು, ಪಾತ್ರವು ಲೈವ್ಲಿ ಆಗಿ ಮೂಡಿಬರಲಿದೆ. ತೆಲುಗು ಮಾತನಾಡಲು ಬರುತ್ತದೆ. ಚಿತ್ರಕಾಗಿ ಇನ್ನಷ್ಟು ಕಲಿಯಬೇಕಿದೆ. ಹೊಸಬರ ತಂಡವಾಗಿದ್ದು, 25 ದಿನಗಳ ಶೂಟಿಂಗ್ ಡೇಟ್ ಇರಲಿದೆ’ ಎಂದು ಅರ್ಚನಾ ಮಾಹಿತಿ ನೀಡಿದರು.

ತೆಲುಗು ಆಡಿಯನ್ಸ್‌ಗೆ ಪರಿಚವಿದ್ದೇನೆ

‘ಕೆಜಿಎಫ್​’ ಸರಣಿಯ ಅಮ್ಮ ಪಾತ್ರವು ಪ್ಯಾನ್ ಇಂಡಿಯಾವಾಗಿ ಪರಿಚಯಿಸಿದೆ ಎನ್ನುವ ಅರ್ಚನಾ, ‘‘ಕೆಜಿಎಫ್’ ಸರಣಿ ಮೂಲಕ ತೆಲುಗು ಸೇರಿ ಪರಭಾಷೆಗೆ ಪರಿಚಯವಿದ್ದೇನೆ. ತೆಲುಗು ಆಡಿಯನ್ಸ್ ನನ್ನನ್ನು ಗುರುತು ಹಿಡಿಯುತ್ತಾರೆ. ಹೀಗಾಗಿ, ಈ ಸಿನಿಮಾದ ಮೂಲಕ ಮತ್ತೊಂದು ಭರವಸೆಯಲ್ಲಿದ್ದೇನೆ’ ಎನ್ನುತ್ತಾರೆ. ಸದ್ಯ ಕನ್ನಡದಲ್ಲಿ ಎರಡು-ಮೂರು ಕಥೆಗಳನ್ನು ಕೇಳಿರುವ ಅರ್ಚನಾ ಫೈನಲ್ ಮಾಡಬೇಕಷ್ಟೇ.