ಫ್ಯಾನ್ಸ್​ವಾರ್​ 
ಸ್ಯಾಂಡಲ್‌ವುಡ್

ರೇಟಿಂಗೂ ಬೇಡ, ಫೈಟಿಂಗೂ ಬೇಡ! ಫ್ಯಾನ್​ವಾರ್​ಗೆ ಬ್ರೇಕ್​ ಹಾಕಲು ಹೊಸ ಪರಿಹಾರ ಕಂಡುಕೊಂಡ ಕನ್ನಡ ಚಿತ್ರರಂಡ

ಬೇರೆ ಚಿತ್ರರಂಗಗಳಿಗೆ ಹೋಲಿಸಿದರೆ, ಕನ್ನಡ ಚಿತ್ರರಂಗದಲ್ಲಿ ಸ್ಟಾರ್​ಗಳ ಸಂಖ್ಯೆ ತೀರಾ ಕಡಿಮೆ. ಇರುವುದೇ ಮೂರು ಮತ್ತೊಬ್ಬ ಸ್ಟಾರ್​. ಅವರ ನಡುವೆ ವೈಮನಸ್ಸಿರಲಿ, ಇಲ್ಲದಿರಲಿ.. ಆದರೆ, ಅವರ ಫ್ಯಾನ್​ಗಳ ನಡುವೆ ಯಾವಾಗಲೂ ಹಗ್ಗಜಗ್ಗಾಟ ಇದ್ದಿದ್ದೇ. ಈ ಫ್ಯಾನ್​ವಾರ್​ಗಳಿಂದಾಗಿ ಆ ನಟರ ಚಿತ್ರಗಳಿಗೆ ಭಾರೀ ಹೊಡೆತ ಬೀಳುತ್ತಿದೆ. ಬುಕ್​ಮೈಶೋ, ಐಎಂಡಿಬಿಗಳಲ್ಲಿ ನೆಗೆಟಿವ್​ ರೇಟಿಂಗ್​ ಹಾಗೂ ಫೇಸ್​ಬುಕ್​, ಇನ್​ಸ್ಟಾ, ಯೂಟ್ಯೂಬ್​ಗಳಲ್ಲಿ ನೆಗೆಟಿವ್​ ರಿವ್ಯೂಗಳ ಮೂಲಕ ಮತ್ತೊಬ್ಬ ಸ್ಟಾರ್​ ಚಿತ್ರವನ್ನು ಸೋಲಿಸುವ ಹುನ್ನಾರಗಳೂ ನಡೆಯುತ್ತಿರುತ್ತವೆ. ಇದು ಸಾಮಾನ್ಯ ಪ್ರೇಕ್ಷಕರ ಮೇಲೆ ಪರಿಣಾಮ ಬೀರುವ ಜತೆಗೆ ಚಿತ್ರತಂಡ, ಅದರಲ್ಲೂ ನಿರ್ಮಾಪಕರ ಮೇಲೆ ಹೆಚ್ಚು ದುಷ್ಪರಿಣಾಮ ಬೀರುತ್ತಿತ್ತು. ಹಾಗಂತ ಈ ನೆಗೆಟಿವ್​ ಬೆಳವಣಿಗೆ ಕನ್ನಡ ಚಿತ್ರರಂಗಕ್ಕಷ್ಟೇ ಸೀಮಿತ ಅಂತಲ್ಲ. ಬದಲಾಗಿ, ಎಲ್ಲ ಚಿತ್ರರಂಗಗಳಲ್ಲೂ ಸಾಮಾನ್ಯವಾಗಿದೆ. ಕೆಲ ತಿಂಗಳ ಹಿಂದೆ ಮಲಯಾಳಂ ಚಿತ್ರರಂಗ ಸಿನಿಮಾ ರಿಲೀಸ್​ ಆದ ಮೊದಲ ಮೂರು ದಿನಗಳ ಕಾಲ ಆನ್​ಲೈನ್​ನಲ್ಲಿ ವಿಮರ್ಶೆ ಹಂಚಿಕೊಳ್ಳಬಾರದೆಂದು ತಡೆಯಾಜ್ಞೆ ತರಲು ಪ್ರಯತ್ನಿಸಿದ್ದರು. ಅದರಲ್ಲಿ ಯಶಸ್ಸು ಗಳಿಸಲಿಲ್ಲ. ಆದರೆ, ಈ ಸೋಷಿಯಲ್​ ಮೀಡಿಯಾ ಫ್ಯಾನ್​ವಾರ್​ ಸಮಸ್ಯೆಗೆ ಕನ್ನಡ ಚಿತ್ರರಂಗ ಒಂದೊಳ್ಳೆ ಪರಿಹಾರ ಹುಡುಕಿಕೊಂಡಿದೆ. ಹೌದು, ಜಾಲತಾಣಗಳಲ್ಲಿ ರೇಟಿಂಗ್​ ಮತ್ತು ರಿವ್ಯೂಗಳನ್ನು ರ್ನಿಬಂಧಿಸುವ ಮೂಲಕ ಅಭಿಮಾನಿಗಳ ಆನ್​ಲೈನ್​ ರಗಳೆಗೆ ಬ್ರೇಕ್​ ಹಾಕುವ ಯತ್ನ ಸದ್ದಿಲ್ಲದೇ ಸಾಗಿದೆ.

ಆನ್​ಲೈನ್​ ಮಾಯೆ, ಕರಾಳ ಛಾಯೆ

ಬುಕ್​ಮೈಶೋನಲ್ಲಿ ಎಷ್ಟು ಲೈಕ್ಸ್​ ಬಂತು? 10 ಅಂಕಗಳಲ್ಲಿ ಪ್ರೇಕ್ಷಕರು ಎಷ್ಟು ರೇಟಿಂಗ್​ ನೀಡುತ್ತಿದ್ದಾರೆ? ಅಂತೆಲ್ಲ ನೋಡಿಕೊಂಡು, ಬೇರೆ ನಟರ ಅಭಿಮಾನಿಗಳು ಸಿನಿಮಾ ನೋಡದಿದ್ದರೂ 10ರಲ್ಲಿ 1 ಅಂಕ ನೀಡುವ ಮೂಲಕ ಚಿತ್ರದ ರೇಟಿಂಗ್​ ಕುಗ್ಗಿಸಲು ಯತ್ನಿಸುತ್ತಿದ್ದರು. ಕಳೆದ ವರ್ಷ ತೆರೆಗೆ ಬಂದ ತೂಗುದೀಪ ದಿನಕರ್​ ನಿರ್ದೇಶನದ "ರಾಯಲ್​', ಧ್ರುವ ಸರ್ಜಾ ನಟಿಸಿದ್ದ "ಮಾರ್ಟಿನ್​', ಧನ್ವೀರ್​ ಅಭಿನಯದ "ವಾಮನ' ಚಿತ್ರಗಳಿಗೆ ಈ ನೆಗೆಟಿವ್​ ರೇಟಿಂಗ್​ ಭಾರೀ ಹೊಡೆತ ನೀಡಿತ್ತು ಎಂದು ಖುದ್ದು ಚಿತ್ರತಂಡದವರೇ ಆರೋಪಿಸಿದ್ದರು. ಆ ಬಳಿಕ ಎಚ್ಚೆತ್ತುಕೊಂಡ "ದ ಡೆವಿಲ್​', "ಮಾರ್ಕ್​', "45', "ಹಯಗ್ರೀವ' ಸೇರಿ ಕೆಲ ಚಿತ್ರತಂಡಗಳು ಬುಕ್​ಮೈಶೋ ರೇಟಿಂಗ್​ ನೀಡದಂತೆ ಕೋರ್ಟ್​ ಮೂಲಕ ತಡೆ ತಂಡದರು. ಇನ್ನೂ ಕೆಲ ತಂಡಗಳು ಐಎಂಡಿಬಿ ಮಾತ್ರವಲ್ಲ ಸಾಮಾಜಿಕ ಜಾಲತಾಣ, ಯೂಟ್ಯೂಬ್​, ಫೇಸ್​ಬುಕ್​, ಇನ್ಸ್​ಟಾ, ವೆಬ್​ಸೈಟ್​ಗಳಲ್ಲೂ ರೇಟಿಂಗ್​ಗೆ ರ್ನಿಬಂಧ ಹೇರಬೇಕೆಂದು ಕಾನೂನು ಮೊರೆ ಹೋದರು.

ಪರಭಾಷೆಗಳಲ್ಲೂ ರೇಟಿಂಗ್​ಗೆ ಬ್ರೇಕ್​

ಕನ್ನಡದಲ್ಲಿ ನೆಗೆಟಿವ್​ ರೇಟಿಂಗ್​ಗೆ ಬ್ರೇಕ್​ ಹಾಕಿದ್ದನ್ನು ನೋಡಿದ ತೆಲುಗು ಚಿತ್ರರಂಗದವರೂ ಇದೀಗ ಇದೇ ಹಾದಿ ಹಿಡಿದಿದ್ದು, ಚಿರಂಜೀವಿ ನಟಿಸಿದ್ದ "ಮನಶಂಕರ ವರಪ್ರಸಾದ ಗಾರು', "ಅನಗನಗಾ ಒಕ ರಾಜು', "ನಾರಿ ನಾರಿ ನಡುವು ಮುರಾರಿ' ಮತ್ತು "ಬಿಎಂಡಬ್ಲೂ' ಚಿತ್ರಗಳಿಗೂ ರೇಟಿಂಗ್​ ವಿರುದ್ಧ ತಡೆ ತಂದಿದ್ದಾರೆ. ಅಂದಹಾಗೆ, ಫ್ಯಾನ್​ವಾರ್​ಗೆ ಬ್ರೇಕ್​ ಹಾಕಲು ಈ ಹೊಸ ಪರಿಹಾರ ಕಂಡುಹಿಡಿದಿರುವುದು ಬೆಂಗಳೂರಿನ ಐಪ್ಲೆಕ್ಸ್​ ಸಂಸ್ಥೆ. ಕನ್ನಡ ಮತ್ತು ತೆಲುಗು ಚಿತ್ರರಂಗಗಳಲ್ಲಿ ಆನ್​ಲೈನ್​ ಫ್ಯಾನ್​ವಾರ್​ ಹಾವಳಿಗೆ ಬ್ರೇಕ್​ ಬಿದ್ದ ಬೆನ್ನಲ್ಲೇ ಸದ್ಯ ಮಲಯಾಳಂ, ತಮಿಳು ಹಾಗೂ ಹಿಂದಿ ಚಿತ್ರತಂಡಗಳೂ ಸಹ ಇದೇ ರೀತಿ ಪರಿಹಾರ ಕಂಡುಕೊಳ್ಳಲು ಮುಂದಾಗಿವೆ ಎನ್ನಲಾಗಿದೆ.