ಕೆಡಿ ಚಿತ್ರದ 'ಸರ್ಸೆ ಸರ್ಸೆ' ಹಾಡು
- ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಚಿತ್ರ 'ಕೆಡಿ: ದಿ ಡೆವಿಲ್'
- ನೋರಾ ಫತೇಹಿ ಕುಣಿದು ಕುಪ್ಪಳಿಸಿದ ಹಾಡು ಈಗ ಯುಟ್ಯೂಬ್ನಿಂದ ಡಿಲೀಟ್
- ನೆಟ್ಟಿಗರ ವ್ಯಾಪಕ ಆಕ್ರೋಶ ಬೆನ್ನಲ್ಲೇ ಸಾಂಗ್ ಡಿಲೀಟ್
ಬೆಂಗಳೂರು: ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಕನ್ನಡದ ಪ್ಯಾನ್ ಇಂಡಿಯಾ ಕೆಡಿ: ದಿ ಡೆವಿಲ್ ಚಿತ್ರದ ಹಾಡೊಂದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಛೀಮಾರಿ ಹಾಗೂ ವಿವಾದಕ್ಕೆ ಗುರಿಯಾಗಿದೆ. ಕೆಟ್ಟ ಅರ್ಥವನ್ನು ನೀಡುತ್ತಿರುವ ಈ ಹಾಡು, ತೀರ ಅಸಭ್ಯವಾಗಿದೆ ಎಂಬ ನೆಟ್ಟಿಗರ ಖಂಡನೆ ಬೆನ್ನಲ್ಲೇ ಇದೀಗ ಚಿತ್ರತಂಡ ಹಿಂದಿ ವರ್ಶನ್ ಅನ್ನು ಯುಟ್ಯೂಬ್ನಿಂದ ಡಿಲೀಟ್ ಮಾಡಿದೆ.
ಬಾಲಿವುಡ್ನ ಹಾಟ್ ಬೆಡಗಿ ನೋರಾ ಫತೇಹಿ ಅವರು ಮಸ್ತ್ ಹೆಜ್ಜೆ ಹಾಕಿರುವ 'ಸರ್ಸೆ ಸರ್ಸೆ' ಹಾಡು ಬಿಡುಗಡೆಗೊಂಡ ಕೆಲವೇ ಕೆಲವು ನಿಮಿಷಗಳಲ್ಲಿ ದೊಡ್ಡ ವಿವಾದಕ್ಕೆ ಸಿಲುಕಿತು. ನೋರಾ ಮತ್ತು ಸಂಜಯ್ ದತ್ ಭರ್ಜರಿ ಸ್ಟೆಪ್ ಹಾಕಿರುವ ಈ ಸಾಂಗ್ನ ದೃಶ್ಯಗಳ ವಿಚಾರದಲ್ಲಿ ಯಾವುದೇ ತಕರಾರು ಕೇಳಿಬಂದಿಲ್ಲ. ಆದರೆ, ಹಾಡಿನಲ್ಲಿ ಕೆಟ್ಟ ಅರ್ಥಗಳನ್ನು ನೀಡುವ ಸಾಲುಗಳು ಬಳಸಿರುವುದು ಸರಿಯಲ್ಲ. ಇದು ಕೇಳುಗರಿಗೆ ತೀರ ಮುಜುಗರ ಉಂಟುಮಾಡಿದೆ ಎಂಬ ಸಾಲು ಸಾಲು ಆರೋಪಗಳು ವ್ಯಕ್ತವಾದ ಹಿನ್ನೆಲೆ ಹಿಂದಿ ವರ್ಶನ್ಗೆ ಗುಡ್ಬೈ ಹೇಳಲಾಗಿದೆ. ಕನ್ನಡ ಹಾಡನ್ನು ಕೂಡ ತೆಗೆದುಹಾಕಬೇಕು ಎಂಬ ಕೂಗಗಳು ಕೇಳಿಬಂದಿದ್ದೇ ಆದರೂ ಸದ್ಯದ ಮಟ್ಟಿಗೆ ಹಿಂದಿ ಹಾಡನ್ನು ಮಾತ್ರ ಡಿಲೀಟ್ ಆಗಿದೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಈ ವಿವಾದಕ್ಕೆ ಸಂಬಂಧಿಸಿದಂತೆ ಸೂಚನೆ ನೀಡಿದ್ದೇ ತಡ ಚಿತ್ರದ ನಿರ್ಮಾಪಕರು ಯೂಟ್ಯೂಬ್ ಮತ್ತು ಇತರ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಂದ ಹಿಂದಿ ಹಾಡನ್ನು ಅಧಿಕೃತವಾಗಿ ತೆಗೆದುಹಾಕಿದ್ದಾರೆ. ಕನ್ನಡ ವರ್ಶನ್ ಇನ್ನೂ ಡಿಲೀಟ್ ಆಗದೆ ಇರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ.
ANI ವರದಿಯ ಪ್ರಕಾರ, 'ಸರ್ಕೆ ಚುನರ್ ತೇರಿ ಸರ್ಕೆ' ಹಿಂದಿ ಹಾಡಿಗೂ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸಾಮಾಜಿಕ ಕಾರ್ಯಕರ್ತ ವಿನೀತ್ ಜಿಂದಾಲ್ ಎಂಬುವವರು, ಹಾಡಿಗೆ ಸಂಬಂಧಪಟ್ಟ ಪ್ರತಿಯೊಬ್ಬರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸರ ಸೈಬರ್ ಸೆಲ್‌ಗೆ ದೂರು ಸಲ್ಲಿಸಿದ್ದಾರೆ. ಇದಾದ ಬಳಿಕ ವಿರೋಧಗಳು ಇನ್ನಷ್ಟು ಹೆಚ್ಚಾಯಿತು. ಈ ಸಾಂಗ್ ಸಾರ್ವಜನಿಕ ಬಳಕೆಗೆ ಸೂಕ್ತವಲ್ಲ. ಇದರಲ್ಲಿ ಅಶ್ಲೀಲತೆಯನ್ನು ಒಳಗೊಂಡ ಸಾಹಿತ್ಯವಿದೆ ಎಂದು ದೂರುದಾರರು ಆರೋಪಿಸಿದ್ದಾರೆ,(ಏಜೆನ್ಸೀಸ್).