ಕರಳೆ ಚಿತ್ರದ ದೃಶ್ಯ 
ಸ್ಯಾಂಡಲ್‌ವುಡ್

ಕನ್ನಡ, ಚೀನಿಯಲ್ಲಿ ‘ಕರಳೆ’: ಅಂತಾರಾಷ್ಟ್ರೀಯ ಭಾಷೆಗಳಲ್ಲಿ ಮೂಡಿಬರಲಿದೆ ಅವಿರಾಮ್ ನಿರ್ದೇಶನದ ಚಿತ್ರ

ಪ್ರಮುಖ ಮುಖ್ಯಾಂಶಗಳು

  • ಕೊನೆಯ ಹಂತದ ಚಿತ್ರೀಕರಣದಲ್ಲಿ ಕರಳೆ ಚಿತ್ರತಂಡ
  • ನಾಯಕಿ ಕುಂಕುಮ್​ ಹರಿಹರ್ ಪಾತ್ರ ಪರಿಚಯಿಸುವ ಫಸ್ಟ್ ಲುಕ್ ಬಿಡುಗಡೆ
  • 1980-90 ಕಾಲಘಟ್ಟದ ಸಾಮಾಜಿಕ ಕಥಾ ಹಂದರದ ಚಿತ್ರ
ಬೆಂಗಳೂರು: ಕನ್ನಡದ ‘ಕಲಿವೀರ’, ‘ಕನ್ನಡ ದೇಶದೋಳ್’ ಖ್ಯಾತಿಯ ಅವಿರಾಮ್ ಕಂಠೀರವ ನಿರ್ದೇಶನದ ಮುಂದಿನ ಸಿನಿಮಾ ‘ಕರಳೆ’. ಇದು ನೈಜ ಘಟನಾಧಾರಿತ ಚಿತ್ರವಾಗಿದ್ದು, ಕನ್ನಡ ಮತ್ತು ಚೀನಿ ಭಾಷೆಯಲ್ಲಿ ಮೂಡಿಬರಲಿದೆ. ಈಗಾಗಲೇ ಬಹುತೇಕ ಶೂಟಿಂಗ್ ಪೂರ್ಣಗೊಂಡಿದ್ದು, ಕೊನೆಯ ಹಂತದ ಚಿತ್ರೀಕರಣ ಬಾಕಿಯಿದೆ. ಇದೇ ವರ್ಷ ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದ್ದು, ಇತ್ತೀಚೆಗೆ ಚಿತ್ರದ ನಾಯಕಿ ಕುಂಕುಮ್ ಹರಿಹರ ಪಾತ್ರ ಪರಿಚಯಿಸುವ ಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಇಲ್ಲಿ ಕುಂಕುಮ್ ‘ದೇವಕಿ’ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಅವಿರಾಮ್ ಕಂಠೀರವ, ‘‘ಕರಳೆ’ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಕೆಲ ದೃಶ್ಯಗಳ ಜತೆಗೆ ತಲಾ ಒಂದು ಸಾಂಗ್ ಮತ್ತು ಫೈಟ್ ಮಾತ್ರ ಬಾಕಿಯಿದೆ. 1980-90ರ ಕಾಲಘಟ್ಟದಲ್ಲಿ ನಡೆದ ನೈಜ ಘಟನೆ ಇದಾಗಿದೆ. ಏಕಕಾಲದಲ್ಲಿ ಭಾರತ ಮತ್ತು ಚೀನಾದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಿಗೆ ಸಾಮ್ಯತೆಯಿದ್ದು, ಅದರ ಬಗ್ಗೆ ಅಧ್ಯಯನ ನಡೆಸಿ ಮಾಡಿಕೊಂಡಿರುವ ಕಥೆಯಿದು. ಈ ಕಾರಣಕ್ಕಾಗಿ ಚಿತ್ರವನ್ನು ಕನ್ನಡ ಮತ್ತು ಚೀನಾದ ಮಂಡಾರಿನ್ ಭಾಷೆಗಳಲ್ಲಿ ತರಲು ಮುಂದಾಗಿದ್ದೇವೆ. ಬೆಂಗಳೂರು ವಿವಿಯ ಅಂತಾರಾಷ್ಟ್ರೀಯ ಭಾಷೆಯ ವಿಭಾಗದ ಪ್ರಾಧ್ಯಾಪಕರೊಬ್ಬರು ನಮಗೆ ಕನ್ನಡ ಕಂಟೆಂಟ್‌ಅನ್ನು ಚೀನಿ ಭಾಷೆಗೆ ಅನುವಾದ ಮಾಡಿಕೊಟ್ಟು ಸಹಕರಿಸಿದ್ದಾರೆ. ನೈಜತೆಗೆ ಒತ್ತು ನೀಡುವ ನಿಟ್ಟಿನಲ್ಲಿ ಚೀನಿ ಕಲಾವಿದರು ಸಹ ಅಭಿನಯಿಸುತ್ತಿದ್ದಾರೆ. ಚಿಂತಾಮಣಿ ತಾಲೂಕಿನ ಗುಮ್ಮನಾಯಕ ಕೋಟೆ, ಅನುಪಲ್ಲಿ ಸೇರಿ ಹುಲಿಯೂರು ದುರ್ಗ, ಮದ್ದೂರು, ಚಾಮರಾಜನಗರದ ಚೆಂಗಡಿ ಸೇರಿ ವಿವಿಧ ಭಾಗಗಳಲ್ಲಿ 60ಕ್ಕೂ ಅಧಿಕ ದಿನಗಳ ಕಾಲ ಶೂಟಿಂಗ್ ನಡೆಸಲಾಗಿದೆ’ ಎಂದು ಮಾಹಿತಿ ನೀಡುತ್ತಾರೆ. ಕುಂಕುಮ್ ಹರಿಹರ್ ಜತೆಗೆ ಮಿತ್ರ, ಶೋಭಾ ರಾಘವೇಂದ್ರ, ಬೇಬಿ ಶ್ರೀಯಾನ್ ನಂಬಿಯಾರ್ ಕಲಾಬಳಗದಲ್ಲಿದ್ದಾರೆ. ಈ ಚಿತ್ರದ ಪ್ರಮುಖ ಪಾತ್ರಕ್ಕಾಗಿ ಹಿರಿಯ ನಟ ಅನಂತ್ ನಾಗ್ ಜತೆ ಚಿತ್ರತಂಡ ಮಾತುಕತೆ ನಡೆಸುತ್ತಿದೆ. ನಿಶಾಂತ್ ಕಟಾರಿಯಾ ಛಾಯಾಗ್ರಹಣ, ರಾಘವೇಂದ್ರ ಸಂಗೀತ ಚಿತ್ರಕ್ಕಿದೆ.