98th Oscars - ಭಾರತದಿಂದ 98ನೇ ಆಸ್ಕರ್ ಪ್ರಶಸ್ತಿಗೆ "ಹೋಮ್ಬೌಂಡ್' ಚಿತ್ರವನ್ನು ಅಧಿಕೃತವಾಗಿ ಆಯ್ಕೆ ಮಾಡಿ ಕಳುಹಿಸಿರುವುದು ಗೊತ್ತಿದೆ. ಅದರ ಬೆನ್ನಲ್ಲೇ ಮರಾಠಿ ಸಿನಿಮಾ "ದಶಾವತಾರ್' ತಂಡ ಕೂಡ ಕಂಟೆನ್ಷನ್ ಲಿಸ್ಟ್ ಮೂಲಕ ಆಸ್ಕರ್ ಅಂಗಳಕ್ಕೆ ಜಿಗಿದಿದೆ. ಆ ಮೂಲಕ ಆಸ್ಕರ್ ಹೊಸ್ತಿಲಲ್ಲಿ ನಿಂತಿರುವ ಮೊದಲ ಮರಾಠಿ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ಕನ್ನಡದ ಎರಡು ಚಿತ್ರಗಳು ಸಹ ಆಸ್ಕರ್ ಕದ ತಟ್ಟುತ್ತಿದ್ದು, ಹೊಸ ದಾಖಲೆ ಬರೆದಿವೆ. ಹೊಂಬಾಳೆ ಫಿಲಂಸ್ ಬ್ಯಾನರ್ನಲ್ಲಿ ವಿಜಯ್ ಕಿರಗಂದೂರ್ ನಿರ್ಮಾಣದ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ "ಕಾಂತಾರ ಅಧ್ಯಾಯ 1' ಮತ್ತು ಅಶ್ವಿನ್ ಕುಮಾರ್ ನಿರ್ದೇಶನದ ಆ್ಯನಿಮೇಟೆಡ್ ಸಿನಿಮಾ "ಮಹಾವತಾರ್ ನರಸಿಂಹ' ಪ್ರಮುಖ ವಿಭಾಗಗಳ ಸಾಮಾನ್ಯ ಪ್ರವೇಶ ಪಟ್ಟಿಯಲ್ಲಿ ಅಧಿಕೃತವಾಗಿ ಸ್ಥಾನ ಪಡೆದಿವೆ.
1800ರಿಂದ 2000 ಚಿತ್ರಗಳು ಆಸ್ಕರ್ಗೆ ಸಲ್ಲಿಸಲಾಗಿತ್ತು. ಅವುಗಳಲ್ಲಿ 317 ಚಿತ್ರಗಳು ಪ್ರಶಸ್ತಿಯಲ್ಲಿ ಸ್ಪರ್ಧಿಸಲು ಅರ್ಹ ಎಂದು ಆಯ್ಕೆ ಮಾಡಿಕೊಳ್ಳಲಾಗಿದ್ದು, ಅದರಲ್ಲಿ 201 ಚಿತ್ರಗಳು "ಅತ್ಯುತ್ತಮ ಸಿನಿಮಾ' ವಿಭಾಗದಲ್ಲಿ ಸ್ಪರ್ಧಿಸಲು ಹೆಚ್ಚುವರಿ ಅರ್ಹತಾ ಅವಶ್ಯಕತೆಗಳನ್ನು ಪೂರೈಸಿವೆ ಎನ್ನಲಾಗಿದೆ. ಅದರಲ್ಲಿ ಒಟ್ಟು ಐದು ಭಾರತೀಯ ಸಿನಿಮಾಗಳಿದ್ದು, "ಕಾಂತಾರ ಅಧ್ಯಾಯ 1', "ಮಹಾವತಾರ್ ನರಸಿಂಹ' ಜತೆಗೆ ಅನುಪಮ್ ಖೇರ್ ನಟಿಸಿ, ನಿರ್ದೇಶಿಸಿರುವ ಬಾಲಿವುಡ್ ಸಿನಿಮಾ "ತಾನ್ವಿ ದ ಗ್ರೇಟ್', ರಾಧಿಕಾ ಆಪ್ಟೆ ನಟನೆಯ "ಮಿಡ್ನೈಟ್ ಸಿಸ್ಟರ್', ತಮಿಳು ಸಿನಿಮಾ "ದ ಟೂರಿಸ್ಟ್ ಫ್ಯಾಮಿಲಿ' ಕೂಡ ಸೇರಿವೆ. ಅವುಗಳಲ್ಲಿ "ಕಾಂತಾರ' ಅತ್ಯುತ್ತಮ ಸಿನಿಮಾ, ನಟ, ನಟಿ, ನಿರ್ಮಾಣ, ನಿರ್ದೇಶನ, ಕಥೆ, ನಿರ್ಮಾಣ ವಿನ್ಯಾಸ ಸೇರಿ ಹಲವು ವಿಭಾಗಗಳಲ್ಲಿ ಸ್ಪರ್ಧಿಸಲಿದ್ದು, "ಮಹಾವತಾರ್ ನರಸಿಂಹ' ಅತ್ಯುತ್ತಮ ಸಿನಿಮಾ, ಅತ್ಯುತ್ತಮ ಆ್ಯನಿಮೇಟೆಡ್ ಸಿನಿಮಾ ವಿಭಾಗಗಳಲ್ಲಿ ಸ್ಪರ್ಧಿಸಲಿದೆ. ಆ ಮೂಲಕ ಆ್ಯನಿಮೇಟೆಡ್ ಸಿನಿಮಾ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಮೊದಲ ಭಾರತೀಯ ಚಿತ್ರ ಎಂಬ ದಾಖಲೆ ಬರೆದಿದೆ. ಕಳೆದ ವರ್ಷ "ಕಾಂತಾರ 1' ಮತ್ತು "ಮಹಾವತಾರ್ ನರಸಿಂಹ' ಎರಡೂ ಚಿತ್ರಗಳಿಂದ ಹೊಂಬಾಳೆ ಬರೋಬ್ಬರಿ 1200 ಕೋಟಿ ರೂ.ಗೂ ಹೆಚ್ಚು ಹಣ ಕಲೆಕ್ಷನ್ ಮಾಡಿಕೊಂಡಿತ್ತು. ಇದೀಗ ಆಸ್ಕರ್ ಮೂಲಕ ಮತ್ತೊಂದು ದಾಖಲೆ ಬರೆಯಲು ಸಿದ್ಧತೆ ನಡೆಸಿದೆ.
"ಕಾಂತಾರ'ದಂತಹ ನಮ್ಮ ನಾಡಿನ ನಂಬಿಕೆ, ಪರಂಪರೆ ಮತ್ತು ಮಣ್ಣಿನ ಕಥೆ ಜಾಗತಿಕ ವೇದಿಕೆಯಲ್ಲಿ ತನ್ನ ಧ್ವನಿ ಕಂಡುಕೊಳ್ಳುತ್ತಿರುವುದು ಅತ್ಯಂತ ಹೆಮ್ಮೆಯ ಕ್ಷಣ. ನೆಲಮೂಲದ ಕಥೆಗಳು ಗಡಿಗಳನ್ನು ಮಿರಿ ಜಗತ್ತಿನ ಮನಸ್ಸು ತಲುಪುತ್ತವೆ ಎಂಬ ನಂಬಿಕೆ ಈಗ ಮತ್ತಷ್ಟು ಬಲವಾಗಿದೆ. ಹಾಗೇ "ಮಹಾವತಾರ್ ನರಸಿಂಹ'ದಂತೆ ಭಾರತೀಯ ಪೌರಾಣಿಕ ಕಥೆಗಳಿಗೆ ವಿಶ್ವವ್ಯಾಪಿ ಜನರನ್ನು ಸೆಳೆಯುವ ಶಕ್ತಿಯಿದೆ. ಈ ಗೌರವ ನಮ್ಮನ್ನು ಇನ್ನೂ ದೊಡ್ಡ ಕನಸುಗಳನ್ನು ಕಾಣಲು, ಭಾರತದ ಸಾಂಸತಿಕ ವೈಭವವನ್ನು ಜಾಗತಿಕ ವೇದಿಕೆಗೆ ತರುವಂತೆ ಪ್ರೇರೇಪಿಸುತ್ತದೆ.
- ವಿಜಯ್ ಕಿರಗಂದೂರ್, ನಿರ್ಮಾಪಕ