ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ 
ಸ್ಯಾಂಡಲ್‌ವುಡ್

KFCC - ಫಿಲಂ ಚೇಂಬರ್​ ಲೆಟರ್​ ಗೊಂದಲ, ನಿರ್ಮಾಪಕರ ಅಸಮಾಧಾನ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕನ್ನಡ ಚಿತ್ರರಂಗದ ಮಾತೃಸಂಸ್ಥೆ. ಕಲಾವಿದರ ಸಂ, ಪೋಷಕ ಕಲಾವಿದರ ಸಂ, ಸಿನಿಮಾ ಕಾರ್ಮಿಕರ ಒಕ್ಕೂಟ, ಸಾಹಸ ಕಲಾವಿದರು, ಸಂಗೀತ ನಿರ್ದೇಶಕರು ಸೇರಿ ಹಲವು ಅಂಗಸಂಸ್ಥೆಗಳು ಮಂಡಳಿಯ ಭಾಗವಾಗಿದ್ದರೂ, ನಿರ್ಮಾಪಕರು, ಪ್ರದರ್ಶಕರು ಮತ್ತು ವಿತರಕರಷ್ಟೇ ಮಂಡಳಿಯ ಸದಸ್ಯತ್ವ ಪಡೆಯಬಹುದು. ಕಳೆದ ಮಾ. 26ರಂದು ಸದಸ್ಯರನ್ನು ಉದ್ದೇಶಿಸಿ ವಾಣಿಜ್ಯ ಮಂಡಳಿಯು, "ಬಿಡಿಎ, ಗೃಹ ನಿರ್ಮಾಣ, ರಾಜೀವ್​ ಗಾಂಧಿ ವಸತಿ ಯೋಜನೆಯಡಿ ನಿರ್ಮಿಸಿರುವ ಬಡಾವಣೆಗಳಲ್ಲಿ ಬಲ್ಕ್​ ಆಗಿ ಫ್ಲ್ಯಾ್​ಟ್​ಗಳನ್ನು ನೀಡುವಂತೆ ವಾಣಿಜ್ಯ ಮಂಡಳಿ ವತಿಯಿಂದ ಸರ್ಕಾರಕ್ಕೆ ಮನವಿ ಮಾಡಿರುತ್ತೇವೆ. ಹೀಗಾಗಿ ಸರ್ಕಾರವು ಯಾರಿಗೆ ಅವಶ್ಯಕತೆಯಿದೆ ಎಂದು ಮಾಹಿತಿ ನೀಡಲು ಕೋರಿದೆ' ಎಂದು ಪತ್ರ ಬರೆದಿದೆ.
ಈ ಪತ್ರ ಹಲವು ನಿರ್ಮಾಪಕರ ಅಸಮಾಧಾನಕ್ಕೆ ಕಾರಣವಾಗಿದೆ. ಹಿರಿಯ ನಿರ್ಮಾಪಕ "ಚಿಂಗಾರಿ' ಮಹದೇವ್​, ನಾಗೇಶ್​ ಕುಮಾರ್​ ಯುಎಸ್​, ಜೆಜೆ ಶ್ರೀನಿವಾಸ್​, ಸಿದ್ದೇಗೌಡ ಸೇರಿ ಹಲವರು ಈ ಕುರಿತು ಮಂಡಳಿಯ ಗಮನ ಸೆಳೆಯಲು ಯತ್ನಿಸಿದ್ದಾರೆ. ಈ ಬಗ್ಗೆ ಮಹದೇವ್​, "ಕನ್ನಡ ನಿರ್ಮಾಪಕರು ಇನ್ನೂ ಆ ದುಸ್ಥಿತಿಗೆ ಇಳಿದಿಲ್ಲ. ಬಡತನ ರೇಖೆಗಿಂತ ಕೆಳಗಿರುವವರು ಸಿನಿಮಾ ನಿರ್ಮಿಸಲು ಸಾಧ್ಯವೇ? ಇದುವರೆಗೂ ಯಾವ ನಿರ್ಮಾಪಕನೂ ಅರ್ಜಿ ಹಾಕಿಲ್ಲ. ಈ ಬಗ್ಗೆ ಅಧ್ಯಕ್ಷರ ಗಮನಕ್ಕೆ ತಂದು, ಹೀಗೆ ಮಾಡಬಾರದಿತ್ತು ಎಂದಿದ್ದೇವೆ. ಸಿನಿಮಾ ಮಾಡಲು ಬಂದು ಶೇಕಡ 90ರಷ್ಟು ಜನ ದುಡ್ಡು, ಆಸ್ತಿ ಕಳೆದುಕೊಂಡಿರಬಹುದು. ಆದಾಯ ತೆರಿಗೆ, ಸೇವಾ ತೆರಿಗೆ ಎಲ್ಲವನ್ನೂ ಕಟ್ಟುತ್ತಿರುವವರು ಸರ್ಕಾರ ಬಡವರಿಗಾಗಿ ಮಾಡಿರುವ ಯೋಜನೆಯಲ್ಲಿ ನಿವೇಶನ ಕೇಳುವಷ್ಟು ದುಸ್ಥಿತಿಗೆ ಬಂದಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗೇ, "ಹಲವು ವರ್ಷಗಳ ಹಿಂದೆಯೇ ಹೈದರಾಬಾದ್​ನ ಬಂಜಾರಾ ಹಿಲ್ಸ್​ನಲ್ಲಿ ತೆಲುಗು ನಿರ್ಮಾಪಕರು ಸರ್ಕಾರದಿಂದ ಜಾಗ ಪಡೆದು ಲೇಔಟ್​ ಮಾಡಿದ್ದಾರೆ. ನಮ್ಮಲ್ಲೂ ಹಾಗೆ ಮಾಡಬಹುದಿತ್ತು, ಕೆಲವರ ಸ್ವಹಿತಾಸಕ್ತಿಯಿಂದ ಆ ಕೆಲಸ ಆಗುತ್ತಿಲ್ಲ. ಸಿನಿಮಾರಂಗದಲ್ಲಿ ಒಡಕಿರುವ ಕಾರಣ ಸರ್ಕಾರವೂ ಗಮನ ಹರಿಸುತ್ತಿಲ್ಲ. ಇದೀಗ ಈ ಪತ್ರದಿಂದ ಜನ ಚಿತ್ರರಂಗವನ್ನು, ನಿರ್ಮಾಪಕರನ್ನು ನೋಡುವ ದೃಷ್ಟಿಕೋನ ಬದಲಾಗುತ್ತಿದೆ' ಎನ್ನುತ್ತಾರೆ.

ಹೀಗೆ ಮಾಡಬಹುದಿತ್ತು

ಸರ್ಕಾರದ ಯೋಜನೆಯಲ್ಲಿ ನಿವೇಶನ ಕೇಳುವ ಬದಲು 50 ಎಕರೆ ಜಾಗ ಕೇಳಬಹುದಿತ್ತು ಎಂಬುದು ಕೆಲವರ ಅಭಿಪ್ರಾಯ. ನಿರ್ಮಾಪಕ ನಾಗೇಶ್​ ಕುಮಾರ್​, "ನಿರ್ಮಾಪಕರ ಇವತ್ತಿನ ದುಸ್ಥಿತಿ ನೋಡಿ ವಾಣಿಜ್ಯ ಮಂಡಳಿ ಹೀಗೆ ಮಾಡಿದೆಯಾ ಗೊತ್ತಿಲ್ಲ. ಆದರೆ, ನಿರ್ಮಾಪಕರನ್ನು ಈ ಪರಿಸ್ಥಿತಿಗೆ ತಂದು ನಿಲ್ಲಿಸಿದ್ದಾರೆ ಎಂದು ಬೇಸರವಾಗುತ್ತಿದೆ. ಸರ್ಕಾರದ ವತಿಯಿಂದ ಚಿತ್ರರಂಗಕ್ಕೆ ಸಹಾಯ ಆಗಬೇಕು ಅಂತಿದ್ದರೆ ಒಂದಷ್ಟು ಜಾಗ ಕೇಳಬಹುದು. ಈಗಿರುವ ಯೋಜನೆಗಳಿಗೆ ಯಾರು ಬೇಕಾದರೂ ಅರ್ಜಿ ಹಾಕಿ ಪಡೆಯಬಹುದು. ಅದಕ್ಕೆ ಮಂಡಳಿಯ ಮಧ್ಯಸ್ಥಿಕೆ ಬೇಕಿರಲಿಲ್ಲ' ಎನ್ನುತ್ತಾರೆ.

ಹೊಟ್ಟೆ ತುಂಬಿದವರಿಗಲ್ಲ, ಹಸಿದವರಿಗೆ

ಈ ಬಗ್ಗೆ ಸ್ಪಷ್ಟನೆ ನೀಡುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯೆ ಡಾ. ಜಯಮಾಲ, "ಇದುವರೆಗೆ 650ರಿಂದ 700 ಅರ್ಜಿಗಳು ಬಂದಿವೆ. ವಾಣಿಜ್ಯ ಮಂಡಳಿ ಚಿತ್ರರಂಗದ ಮಾತೃಸಂಸ್ಥೆ. ಇಡೀ ಚಿತ್ರರಂಗದ ಕಲಾವಿದರು, ಛಾಯಾಗ್ರಾಹಕರು, ಪೋಷಕ ಕಲಾವಿದರು, ತಂತ್ರಜ್ಞರು, ಕಾರ್ಮಿಕರು ಎಲ್ಲ ಅಂಗಸಂಸ್ಥೆಗಳನ್ನೂ ಉದ್ದೇಶಿಸಿ ಈ ಪತ್ರ ಬರೆಯಲಾಗಿತ್ತು. ಖಾಲಿ ಜಾಗವಿಲ್ಲದ ಕಾರಣ ಇರುವ ಯೋಜನೆಗಳಲ್ಲೇ ನಿವೇಶನ ನೀಡುವುದಾಗಿ ತಿಳಿಸಿದರು. ಇದು ಹೊಟ್ಟೆ ಹಸಿದವರಿಗೆ, ಹೊಟ್ಟೆ ತುಂಬಿದವರಿಗಲ್ಲ' ಎಂದು ಸ್ಪಷ್ಟನೆ ನೀಡುತ್ತಾರೆ.

ಪತ್ರದ ಗೊಂದಲ ಇದೇ ಮೊದಲಲ್ಲ!

ಕಳೆದ ವರ್ಷ ಐಪಿಎಲ್​ ಕಪ್​ ಗೆದ್ದ ಆರ್​ಸಿಬಿ ತಂಡವನ್ನು ಚಿನ್ನಸ್ವಾಮಿ ಮೈದಾನದ ಬಳಿ ಕಣ್ತುಂಬಿಕೊಳ್ಳಲು ಬಂದಿದ್ದ 11 ಮಂದಿ ನೂಕು ನುಗ್ಗಲಿಗೆ ಬಲಿಯಾಗಿದ್ದರು. ಮಡಿದವರಿಗೆ ಸಂತಾಪ ಸೂಚಿಸುವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವಾಣಿಜ್ಯ ಮಂಡಳಿಯ ಪತ್ರದಲ್ಲೂ ಎಡವಟ್ಟು ನಡೆದಿತ್ತು. ಆ ಬಗ್ಗೆ ಗಮನ ಸೆಳೆದ ನಂತರ, ಬದಲಿಸಲಾಗಿತ್ತು. ಇದೀಗ ಮತ್ತೊಮ್ಮೆ ಅಂಥದ್ದೇ ಎಡವಟ್ಟು ನಡೆದಿದೆ.
ಕೋಟ್ಸ್​:
ಕೋಟಿಗಟ್ಟಲೆ ಹಣ ಹಾಕಿ ಸಿನಿಮಾ ಮಾಡಿ, ಎಲ್ಲವನ್ನು ಕಳೆದುಕೊಂಡವರಿಗೆ ವಾಣಿಜ್ಯ ಮಂಡಳಿಯಲ್ಲಿ ನಿರ್ಗತಿಕರ ವಸತಿಯನ್ನು ನೀಡಲಾಗುತ್ತಿದೆ ಎಂದು ಸಾರಲು ಹೊರಟಿದ್ದಾರೆ ಅಂತನ್ನಿಸುತ್ತಿದೆ. ದಯವಿಟ್ಟು ಈ ಕೆಲಸ ಇಲ್ಲಿಗೇ ನಿಲ್ಲಿಸಿ. ಬೇಕಿದ್ದವರು ಅರ್ಜಿ ಹಾಕಿ ತೆಗೆದುಕೊಳ್ಳುತ್ತಾರೆ. - ಸಿದ್ದೇಗೌಡ, ನಿರ್ಮಾಪಕ