ಲ್ಯಾಂಡ್ ಲಾಡರ್ ಪೋಸ್ಟರ್​  
ಸ್ಯಾಂಡಲ್‌ವುಡ್

ರಾಚಯ್ಯ ವರ್ಸಸ್ ರೂಲರ್ : ‘ಲ್ಯಾಂಡ್‌ಲಾರ್ಡ್’ನಲ್ಲಿ ಕಾದಾಟಕ್ಕಿಳಿದ ದುನಿಯಾ ವಿಜಯ್, ರಾಜ್ ಬಿ. ಶೆಟ್ಟಿ

ಪ್ರಮುಖ ಮುಖ್ಯಾಂಶಗಳು

  • ಎರಡೂವರೆ ನಿಮಿಷದ ಟ್ರೇಲರ್​ ನಲ್ಲಿ ಭರ್ಜರಿ ಮಾಸ್ ಎಲಿಮೆಂಟ್
  • ಕತ್ತಿ ಹಿಡಿದು ಯುದ್ಧ ಸಾರಿದ ನಟ ವಿಜಯ್​
  • ರಾಚಯ್ಯ ವಿರುದ್ಧ ಸಮರಸಾರಿದ ರೂಲರ್ ರಾಜ್ ಶೆಟ್ಟಿ
ಬೆಂಗಳೂರು: ದುನಿಯಾ ವಿಜಯ್, ರಚಿತಾ ರಾಮ್ ಅಭಿನಯದ, ‘ಗುರು ಶಿಷ್ಯರು’ ಖ್ಯಾತಿಯ ಜಡೇಶ್ ಕೆ. ಹಂಪಿ ನಿರ್ದೇಶನದ ‘ಲ್ಯಾಂಡ್‌ಲಾರ್ಡ್’ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಇದೇ 23ರಂದು ರಾಜ್ಯಾದ್ಯಂತ ಸಿನಿಮಾ ತೆರೆ ಕಾಣಲಿದೆ. ಈಗಾಗಲೇ ಟೀಸರ್, ಹಾಡಿನ ಮೂಲಕ ಸದ್ದು ಮಾಡಿರುವ ಚಿತ್ರತಂಡ, ಇದೀಗ ನಾಯಕ ವಿಜಯ್ ಹುಟ್ಟುಹಬ್ಬದ ಅಂಗವಾಗಿ ಟ್ರೇಲರ್ ರಿಲೀಸ್ ಮಾಡಿದೆ. ವಿಶೇಷ ಅಂದರೆ ವಿಜಯ್ ಅಭಿಮಾನಿಗಳೇ ‘ಲ್ಯಾಂಡ್‌ಲಾರ್ಡ್’ ಟ್ರೇಲರ್ ರಿಲೀಸ್ ಮಾಡಿದರು. ಎರಡೂವರೆ ನಿಮಿಷದ ಟ್ರೇಲರ್ ಮಾಸ್ ಆಗಿದ್ದು, ಆಳುವ ರೂಲರ್ ರಾಜ್ ಬಿ. ಶೆಟ್ಟಿ ಮತ್ತು ಅಳಿದು ಉಳಿದ ರಾಚಯ್ಯ ವಿಜಯ್ ನಡುವಿನ ಸಂಘರ್ಷದ ಸುತ್ತ ಸಾಗುತ್ತದೆ. ಸಾಹಸ ದೃಶ್ಯಗಳು ಗಮನ ಸೆಳೆಯುತ್ತವೆ. ದುನಿಯಾ ವಿಜಯ್, ರಚಿತಾ ರಾಮ್ ಜತೆ ರಾಜ್ ಬಿ. ಶೆಟ್ಟಿ, ರಾಕೇಶ್ ಅಡಿಗ, ರಿತನ್ಯಾ ವಿಜಯ್, ಶಿಶಿರ್ ಬೈಕಾಡಿ, ಭಾವನಾ ರಾವ್ ಸೇರಿ ದೊಡ್ಡ ಕಲಾಬಳಗವೇ ಚಿತ್ರದಲ್ಲಿದೆ. ಭಾವನಾ ರಾವ್, ‘ಮೊದಲ ದಿನದ ಶೂಟಿಂಗ್‌ನಲ್ಲಿಯೇ ಇದು ಒಳ್ಳೆಯ ಹಾಗೂ ದೊಡ್ಡಮಟ್ಟದ ಸಿನಿಮಾ ಆಗಲಿದ್ದು, ನಮ್ಮ ಮೂಲ ಸಂಸ್ಕೃತಿಯನ್ನು ಎತ್ತಿಹಿಡಿಯಲಿದೆ ಎಂದು ಗೊತ್ತಾಗಿತ್ತು. ಈ ಕಥೆಯಲ್ಲಿ ಸಂಸ್ಕೃತಿಯ ಬೇರುಗಳಿವೆ. ಇಲ್ಲಿ ನನ್ನದು ಪದ್ಮಾ ಎಂಬ ಪಾತ್ರ. ಸಿನಿಮಾ ರಿಲೀಸ್ ಆದ ಬಳಿಕ ಈ ಪಾತ್ರ ನೋಡಿ ಅನೇಕರು ಇಂತಹ ಪಾತ್ರ ಬರೆಯಲು ಮುಂದಾಗುತ್ತಾರೆ’ ಎಂದು ಖುಷಿ ಹಂಚಿಕೊಂಡರು.

ವಿಜಯ್ ವಿಜಯೋತ್ಸಾಹ

51ನೇ ಹುಟ್ಟುಹಬ್ಬ ಆಚರಣೆ ಹಾಗೂ ‘ಲ್ಯಾಂಡ್‌ಲಾರ್ಡ್’ ರಿಲೀಸ್‌ನ ಡಬಲ್ ಖುಷಿಯಲ್ಲಿ ದುನಿಯಾ ವಿಜಯ್, ‘‘ದುನಿಯಾ’ ತೆರೆಕಂಡು 20 ವರ್ಷಗಳಾಯಿತು. ಅಂದಿನಿಂದ ‘ಕರಿಯ ಐ ಲವ್ ಯು’ ಎನ್ನುತ್ತಲೇ ದೊಡ್ಡ ಪ್ರೀತಿ ನೀಡಿ, ಪ್ರೋತ್ಸಾಹಿಸುತ್ತಿದ್ದೀರಿ. ಒಬ್ಬ ನಿರ್ದೇಶಕ, ನಿರ್ಮಾಪಕ ಇಲ್ಲದಿದ್ದರೆ ಕಲಾವಿದ ಇಲ್ಲ. ಇನ್ನು ಅಭಿಮಾನಿಗಳು ಇಲ್ಲದಿದ್ದರೆ ನಮಗೆ ಜನ್ಮವೇ ಇಲ್ಲ. ಹಾಗಾಗಿ, ಅಭಿಮಾನಿಗಳ ಪ್ರೀತಿ, ಪ್ರೋತ್ಸಾಹ ಮುಖ್ಯ.ಈ ಚಿತ್ರದ ಮೂಲಕ ಪುತ್ರಿ ರಿತನ್ಯಾ ಚಿತ್ರರಂಗಕ್ಕೆ ಪರಿಚಯರಾಗುತ್ತಿದ್ದಾರೆ’ ಎಂದರು.
ಬೇರೆಯದ್ದೇ ಲೆವೆಲ್ ಸಿನಿಮಾ
ನಿರ್ದೇಶಕ ಜಡೇಶ್ ಕೆ.ಹಂಪಿ, ‘ಇದು ಟ್ರೇಲರ್ ಅಷ್ಟೇ, ಸಿನಿಮಾ ಬೇರೆಯದ್ದೇ ಲೆವೆಲ್‌ನಲ್ಲಿದೆ. ಚಿತ್ರದಲ್ಲಿ ವಿಜಿ ಸರ್ ಅಬ್ಬರವನ್ನು ನೋಡುವುದೇ ಚೆಂದ, ಎರಡು ಕಣ್ಣು ಸಾಲದು. ಅವರ ನಟನೆ ಮೆಚ್ಚಿ ಹಾಗೂ ಅಭಿಮಾನಿಯಾಗಿ ಅವರಿಗೆ ತಕ್ಕಂತ ಕಥೆ ಬರೆದಿದ್ದೇನೆ. ಇದು ಎಲ್ಲರಿಗೂ ಇಷ್ಟವಾಗಲಿದೆ’ ಎಂದು ಮಾಹಿತಿ ನೀಡಿದರು.