ಶಿವಣ್ಣ ಜತೆ ಹೆಜ್ಜೆ ಹಾಕಿದ ವಿನಯ್​, ಮೇಘಾ 
ಸ್ಯಾಂಡಲ್‌ವುಡ್

‘ಗ್ರಾಮಾಯಣ’ದಲ್ಲಿ ಬೆಂಕಿ ಹಾಡು : ರಿಮಿಕ್ಸ್ ಸಾಂಗ್‌ಗೆ ಕುಣಿದು ಕುಪ್ಪಳಿಸಿದ ವಿನಯ್- ಮೇಘಾ ಶೆಟ್ಟಿ

ಪ್ರಮುಖ ಮುಖ್ಯಾಂಶಗಳು

  • ನಿನ್ನಾಣೆ ನಾನು ಬೆಂಕಿಯಲ್ಲೂ ...' ರೀಮಿಕ್ಸ್ ಸಾಂಗ್ ಬಳಕೆ
  • ಅದ್ದೂರಿ ಸೆಟ್ ನಲ್ಲಿ ಕುಣಿದು ಕುಪ್ಪಳಿಸಿದ ವಿನಯ್​-ಮೇಘಾ
  • ಇದೇ ಫೆಬ್ರವರಿಗೆ ಗ್ರಾಮಾಯಣ ತೆರೆಗೆ ಬರಲು ಸಿದ್ಧ
ಬೆಂಗಳೂರು: ‘ದೊಡ್ಮನೆ’ ಕುಡಿ ವಿನಯ್ ರಾಜಕುಮಾರ್ ಮತ್ತು ‘ಜೊತೆ ಜೊತೆಯಲಿ’ ಖ್ಯಾತಿಯ ಮೇಘಾ ಶೆಟ್ಟಿ ಮುಖ್ಯಭೂಮಿಕೆಯಲ್ಲಿರುವ ಚಿತ್ರ ‘ಗ್ರಾಮಾಯಣ’. ದೇವನೂರು ಚಂದ್ರು ನಿರ್ದೇಶನದ ಈ ಚಿತ್ರವು ಕೆಲ ವರ್ಷಗಳ ಹಿಂದೆ ಸೆಟ್ಟೇರಿತ್ತು. ಅಂದುಕೊಂಡಂತಾಗಿದ್ದರೆ ಇಷ್ಟೊತ್ತಿಗೆ ರಿಲೀಸ್ ಆಗಬೇಕಿತ್ತು. ಆದರೆ, ಕೆಲ ಕಾರಣಗಳಿಂದ ಶೂಟಿಂಗ್ ವಿಳಂಬವಾಗಿದ್ದು, ಇದೀಗ ಚಿತ್ರತಂಡ ಮತ್ತೆ ಮುನ್ನಲೆಗೆ ಬಂದಿದೆ. ಸದ್ಯ ಚಿತ್ರೀಕರಣ ಪೂರ್ಣಗೊಳಿಸಿರುವ ತಂಡ ಚಿತ್ರವನ್ನು ತೆರೆ ಮೇಲೆ ತರಲು ಸಿದ್ಧತೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಭರ್ಜರಿ ಪ್ರಚಾರಕ್ಕೆ ಮುಂದಾಗಿದ್ದು, ಇತ್ತೀಚೆಗೆ ನಟ ಶಿವರಾಜಕುಮಾರ್ ಮೊದಲ ‘ಬೆಂಕಿ ಹಾಡು’ ರಿಲೀಸ್ ಮಾಡಿ, ಶುಭ ಹಾರೈಸಿದರು. ಈ ಹಾಡು ಶಿವಣ್ಣ ಅಭಿನಯದ ‘ಮನ ಮೆಚ್ಚಿದ ಹುಡುಗಿ’ ಚಿತ್ರದ ‘ನಿನ್ನಾಣೆ ನಾನು ಬೆಂಕಿಯಲ್ಲೂ ತಂಪು ಕಂಡೇನೂ’ ರೀಮಿಕ್ಸ್ ಸಾಂಗ್ ಎನ್ನುವುದು ಮತ್ತೊಂದು ವಿಶೇಷ. ‘ಬೆಂಕಿ ಹಾಡಿಗೆ’ ಪೂರ್ಣಚಂದ್ರ ತೇಜಸ್ವಿ ಸಂಗೀತವಿದ್ದು, ಕಪಿಲ್ ಕಪಿಲನ್ ಮತ್ತು ಐರಾ ಉಡುಪಿ ಧ್ವನಿಯಾಗಿದ್ದಾರೆ.
ವಿನಯ್, ‘ಇದು ಹೆಸರೇ ಹೇಳುವಂತೆ ಪಕ್ಕಾ ಗ್ರಾಮೀಣ ಸೊಗಡಿನ ಸಿನಿಮಾ. ಸಿಕ್ಸ್ತ್ ಸೆನ್ಸ್ ಸೀನ ಎಂಬುದು ನನ್ನ ಪಾತ್ರದ ಹೆಸರು’ ಎಂದರು. ‘ಇಲ್ಲಿ ನನ್ನದು ಕುಸುಮ ಎಂಬ ಪಾತ್ರ. ಯಾವುದಕ್ಕೂ ಹೆದರದ ಗಂಡು ಹುಡುಗನ ಹಾಗೆ ವರ್ತಿಸುವ ಹಠಮಾರಿ ಹೆಣ್ಣಿನ ಪಾತ್ರ’ ಎಂದು ನಾಯಕಿ ಮೇಘಾ ಶೆಟ್ಟಿ ಹೇಳಿಕೊಂಡರು. ವಿನಯ್, ಮೇಘಾ ಜತೆ ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಅರುಣ್ ಸಾಗರ್, ಬಲ ರಾಜವಾಡಿ, ಅರ್ಪಣಾ, ಸೀತಾ ಕೋಟೆ ಕಲಾಬಳಗದಲ್ಲಿದ್ದಾರೆ. ಲೂಸ್ ಮಾದ ಯೋಗಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಫೆಬ್ರವರಿಗೆ ‘ಗ್ರಾಮಾಯಣ’ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ.