ಫುಲ್‌ಮೀಲ್ಸ್ ಚಿತ್ರದ ಪೋಸ್ಟರ್
- ಯಶಸ್ವಿ 25 ದಿನಗಳನ್ನು ಪೂರೈಸಿದ ಫುಲ್ ಮೀಲ್ಸ್ ಚಿತ್ರ
- ಜ.1ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರದರ್ಶನ
- ವಿನಾಯಕ್ ಎನ್. ಚೊಚ್ಚಲ ನಿರ್ದೇಶನದ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ
ಬೆಂಗಳೂರು: ವಿನಾಯಕ್ ಎನ್. ಚೊಚ್ಚಲ ನಿರ್ದೇಶನದ ರೊಮ್ಯಾಂಟಿಕ್-ಕಾಮಿಡಿಯ ‘ಫುಲ್‌ಮೀಲ್ಸ್’ ಚಿತ್ರವು ಕಳೆದ ನ.21ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗಿತ್ತು. ಫೋಟೋಗ್ರಾರ್ಸ್ ಬದುಕಿನ ಸುತ್ತ ಸಾಗುವ ಈ ಕಥೆಯಲ್ಲಿ ಲಿಖಿತ್ ಶೆಟ್ಟಿ, ಖುಷಿ ರವಿ ಹಾಗೂ ತೇಜಸ್ವಿನಿ ಶರ್ಮಾ ಮುಖ್ಯಭೂಮಿಕೆಯಲ್ಲಿದ್ದರು. ಇದೀಗ ಬೆಂಗಳೂರು, ಚಿತ್ರದುರ್ಗ ಹಾಗೂ ಉತ್ತರ ಕರ್ನಾಟಕದ ವಿವಿಧ ನಗರಗಳಲ್ಲಿ ಈ ಸಿನಿಮಾ ಯಶಸ್ವಿ 25 ದಿನಗಳ ಪ್ರದರ್ಶನ ಕಂಡಿದೆ. ಈ ನಡುವೆ ‘ಫುಲ್‌ಮೀಲ್ಸ್’ ಒಟಿಟಿಯಲ್ಲೂ ಲಭ್ಯವಾಗಿದ್ದು, ಇದೇ ಜ. 1ರಿಂದ ಅಮೆಜಾನ್ ಪ್ರೈಮ್‌ನಲ್ಲಿ ಪ್ರದರ್ಶನ ಕಾಣುತ್ತಿದೆ.
ಇದೇ ಸಂತಸದಲ್ಲಿರುವ ನಿರ್ದೇಶಕ ವಿನಾಯಕ್, ‘ಸದ್ಯ ಸಿನಿಮಾವೊಂದು 25 ದಿನ ಪ್ರದರ್ಶನ ಕಾಣುವುದೇ ಸವಾಲಾಗಿದೆ. ಅಂತಹ ದಿನಗಳಲ್ಲಿ ನಮ್ಮ ‘ಫುಲ್‌ಮೀಲ್ಸ್’ ಯಶಸ್ವಿ 25 ದಿನಗಳನ್ನು ಪೂರೈಸಿದೆ. ಹೊಸವರ್ಷಕ್ಕೆ ಉಡುಗೊರೆ ಎಂಬಂತೆ ನಮ್ಮ ಸಿನಿಮಾ ಇದೀಗ ಅಮೆಜಾನ್ ಪ್ರೈಮ್‌ನಲ್ಲೂ ಪ್ರದರ್ಶನವಾಗುತ್ತಿದೆ. ಅಮೆಜಾನ್ ಟೀಂನವರು ಈ ಚಿತ್ರ ನೋಡಿ ಖುಷಿ ಪಟ್ಟು, ಪ್ರದರ್ಶನ ಮಾಡುತ್ತಿದ್ದಾರೆ. ಅಲ್ಲೂ ಕೂಡ ಟ್ರೆಂಡಿಂಗ್‌ನಲ್ಲಿದೆ. ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್ ಆಯಿತು ಎಂದರೆ ಅಲ್ಲಿಗೆ ಆ ಚಿತ್ರದ ಬಿಜಿನೆಸ್ ಮುಗೀತು ಎಂದಲ್ಲ. ಅಲ್ಲಿಂದ ಆಚೆಗೂ ಒಂದು ಬಿಜಿನೆಸ್ ಇದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಇನ್ನು ‘ಫುಲ್‌ಮೀಲ್ಸ್ ’ ಪರಭಾಷೆಗಳಿಗೆ ಡಬ್ ಮಾಡಲು ಕೆಲ ತಂಡಗಳನ್ನು ನಮ್ಮನ್ನು ಸಂಪರ್ಕಿಸುತ್ತಿವೆ. ತುಂಬಾ ಫೋಟೋಗ್ರಾರ್ಸ್ ಈ ಚಿತ್ರ ನೋಡಿ, ನಮ್ಮ ಜೀವನಕ್ಕೆ ತುಂಬಾ ಕನೆಕ್ಟ್ ಆಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದರು. ಎಲ್ಲ ವಯೋಮಾನದವರು ನೋಡಬಹುದಾದ ಚಿತ್ರವಾಗಿದ್ದು, ಫನ್ ಜತೆಗೆ ಪಕ್ಕಾ ಮನರಂಜನೆ ನೀಡಲಿದೆ. ಇದು ನನ್ನ ಚೊಚ್ಚಲ ನಿರ್ದೇಶನದ ಕಥೆಯಾದರೂ, ಅದಕ್ಕಾಗಿ ತುಂಬಾ ತಯಾರಿ ನಡೆಸಿದ್ದೆ. ಈ ಚಿತ್ರದ ಯಶಸ್ಸು ನನ್ನನ್ನು ಮುಂದಿನ ಕಥೆಗೆ ಕೂರುವಂತೆ ಮಾಡಿದೆ’ ಎಂದು ಸಂತಸಹಂಚಿಕೊಂಡರು.