ಎಲ್ರ ಕಾಲೆಳಿಯತ್ತೆ ಕಾಲ ಪೋಸ್ಟರ್
- ಪಾಪ- ಕರ್ಮಗಳ ಸುತ್ತ ಎಲ್ರ ಕಾಲೆಳಿಯತ್ತೆ ಕಾಲ
- ರೆಟ್ರೋ ಹಿನ್ನೆಲೆಯಲ್ಲಿ ಕಥೆ ನಿರೂಪಣೆ
- ನಾಯಕನಟನಾಗಿ ಮಿಂಚಿದ ನಟ ಚಂದನ್ ಶೆಟ್ಟಿ
ಚಿತ್ರ: ಎಲ್ರ ಕಾಲೆಳಿಯತ್ತೆ ಕಾಲ
ತಾರಾಗಣ: ಚಂದನ್ ಶೆಟ್ಟಿ, ಅರ್ಚನಾ ಕೊಟ್ಟಿಗೆ, ತಾರಾ ಅನುರಾಧ, ಸುಜಯ್ ಶಾಸ್ತ್ರಿ, ಮಂಜು ಪಾವಗಡ, ರಾಕೇಶ್ ಪೂಜಾರಿ ಮತ್ತಿತರರು.
‘ನಾವು ಮಾಡುವ ಒಂದು ತಪ್ಪು, ಮುಂದಿನ ಪೀಳಿಗೆಯವರಿಗೆ ಅದು ಕರ್ಮವಾಗಿ ಕಾಡುತ್ತದೆ’ ಎಂಬ ಮಾತಿದೆ. ಇದೇ ಎಳೆಯಲ್ಲಿ ಮೂಡಿಬಂದಿರುವ ಚಿತ್ರ ‘ಎಲ್ರ ಕಾಲೆಳಿಯತ್ತೆ ಕಾಲ’. ಮೈಸೂರು ಅರಸ ಭುಜಬಲ ‘ಇದ್ನೋಡು’ ಎಂಬ ಗ್ರಾಮ ಸ್ಥಾಪಿಸುತ್ತಾನೆ. ಆತನ ಪರಾಕ್ರಮ, ಅಹಂಕಾರಕ್ಕೆ ಬೇಸತ್ತ ದೇವಮಾನವನೊಬ್ಬ ಆ ಊರಿನಲ್ಲಿ ಸಮಯವೇ ಗೊತ್ತಾಗಬಾರದು ಎಂದು ಶಾಪ ನೀಡುತ್ತಾನೆ. ಶಾಪದಿಂದಾಗಿ ಮುಂದೆ ಆ ಊರಿನ ಜನರು ಕಾಲದ ವಿಚಾರವಾಗಿ ಹೇಗೆಲ್ಲಾ ಸಮಸ್ಯೆ ಎದುರಿಸುತ್ತಾರೆ ಎನ್ನುವುದನ್ನು ನಿರ್ದೇಶಕ ಸುಜಯ್ ಶಾಸ್ತ್ರಿ ತಿಳಿ ಹಾಸ್ಯದ ಮೂಲಕ ‘ಎಲ್ರ ಕಾಲೆಳಿಯತ್ತೆ ಕಾಲ’ದಲ್ಲಿ ನಿರೂಪಿಸಿದ್ದಾರೆ.
ಮೊದಲು ಪೌರಾಣಿಕ ಕಥೆಯಿಂದ ಆರಂಭವಾಗುವ ಚಿತ್ರ ಬಳಿಕ 80ರ ದಶಕಕ್ಕೆ ತೆರೆದುಕೊಳ್ಳುತ್ತದೆ. ಬೆಂಗಳೂರಿಗೆ ಹೊರಟಿರುವ ವಿಜಯ್ (ಚಂದನ್) ಇದ್ನೋಡು ಗ್ರಾಮದಲ್ಲಿ ಬಸ್ ಕೆಟ್ಟಿದ್ದರಿಂದಾಗಿ, ಅದೇ ಊರಿನ ಗೆಳೆಯ ಪರಮ್ (ಸುಜಯ್) ಮನೆಯಲ್ಲಿ ಉಳಿದುಕೊಳ್ಳುತ್ತಾನೆ. ಮುಂದೆ ಆ ಊರಿನ ವಿಚಿತ್ರ ಸಂಗತಿಗಳೇ ಆತನನ್ನು ಅಚ್ಚರಿಗೊಳಿಸುತ್ತವೆ. ಸಮಯವೇ ಗೊತ್ತಾಗುವುದಿಲ್ಲ ಎಂದರೆ ಏನೋ ರಹಸ್ಯ ಅಡಗಿದೆ ಎಂದು ಆತ ಸಂಶೋಧನೆಗೆ ಇಳಿಯುತ್ತಾನೆ. ಆಗ ನಡೆಯುವ ಘಟನೆಗಳೇ ಚಿತ್ರದ ಜೀವಾಳ. ಪೌರಾಣಿಕ ಹಿನ್ನೆಲೆಯ ವಿಚಾರವನ್ನು ರೆಟ್ರೋ ಶೈಲಿಯಲಿ ಸುಜಯ್ ನಾಜೂಕಾಗಿ ಕಥೆಯನ್ನು ನಿರೂಪಿಸಿದ್ದಾರೆ. ಮೊದಲಿಗೆ ಚಿತ್ರಕಥೆಯಲ್ಲಿ ಮೂಡಿಸುವ ಕೌತುಕ ಕೊನೆಯವರೆಗೆ ಹಿಡಿದಿಟ್ಟುಕೊಳ್ಳಲು ಇನ್ನೊಂದಿಷ್ಟು ಕೆಲಸ ಮಾಡಬೇಕಿತ್ತು. ನಗಿಸುವುದಕ್ಕಾಗಿ ಕೆಲ ದೃಶ್ಯಗಳನ್ನು ಸೇರಿಸಿದಂತಿದೆ. ಅದರ ಬದಲು, ಕಾಲದ ಹಿಂದೆಯೇ ಕಥೆಯನ್ನು ತೆಗೆದುಕೊಂಡು ಹೋಗಬಹುದಿತ್ತು.
ರೆಟ್ರೋ ಕಾಲಘಟ್ಟವನ್ನು ಸುಂದರವಾಗಿ ಮರುಸೃಷ್ಟಿಸಲಾಗಿದೆ. ಕಥೆಗೆ ತಕ್ಕಂತೆ ಪ್ರವೀಣ್-ಪ್ರದೀಪ್ ರೆಟ್ರೋ ಹಿನ್ನೆಲೆ ಸಂಗೀತ ಇಷ್ಟವಾಗುತ್ತದೆ. ಚಂದನ್ ಶೆಟ್ಟಿ ಬಣ್ಣ ಹಚ್ಚಿದ ಮೊದಲ ಸಿನಿಮಾ ಇದಾಗಿದ್ದು, ಪಾತ್ರಕ್ಕೆ ಒಪ್ಪಿದ್ದಾರೆ. ನಟನೆ ಮೂಲಕವೂ ಗಮನಸೆಳೆಯುತ್ತಾರೆ. ‘ಮೆಸ್’ ಮಾಲಕಿಯಾಗಿ ಅರ್ಚನಾ ಕೊಟ್ಟಿಗೆ, ‘ಬೃಂದವ್ವ’ ಪಾತ್ರದಲ್ಲಿ ತಾರಾ ಅನುರಾಧ ಕೊಟ್ಟ ಜವಾಬ್ದಾರಿ ಸರಿಯಾಗಿ ನಿರ್ವಹಿಸಿದ್ದಾರೆ. ಮಂಜು ಪಾವಗಡ, ಸುಜಯ್ ಶಾಸಿ, ರಾಕೇಶ್ ಪೂಜಾರಿ ನಗಿಸುತ್ತಾರೆ. ವಿಶ್ವಜಿತ್ ರಾವ್ ರೆಟ್ರೋ ಕಾಲವನ್ನು ಸೂಕ್ಷ್ಮವಾಗಿ ಸೆರೆಹಿಡಿದಿದ್ದಾರೆ.