ಸ್ಯಾಂಡಲ್‌ವುಡ್

ನಿರಂಜನ್ ಬಾಳಲ್ಲಿ ಸಂಜನಾ : ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್‌ವುಡ್ ಯುವ ನಟ

ನಟ, ನಿರ್ದೇಶಕ ಉಪೇಂದ್ರ ಕುಟುಂಬದಲ್ಲಿ ಸಂಭ್ರಮದ ಮನೆ ಮಾಡಿದೆ. ಅವರ ಸಹೋದರನ ಪುತ್ರ, ನಟ ನಿರಂಜನ್ ಸುಧೀಂದ್ರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳತಿ ಸಂಜನಾ ಬಿ. ರಾಜ್‌ಗೆ ಸೋಮವಾರ ಬೆಳಗಿನ ಶುಭ ಮುಹೂರ್ತದಲ್ಲಿ ನಿರಂಜನ್ ಮಾಂಗಲ್ಯಧಾರಣ ಮಾಡಿದರು

ಬೆಂಗಳೂರು: ನಟ, ನಿರ್ದೇಶಕ ಉಪೇಂದ್ರ ಕುಟುಂಬದಲ್ಲಿ ಸಂಭ್ರಮದ ಮನೆ ಮಾಡಿದೆ. ಅವರ ಸಹೋದರನ ಪುತ್ರ, ನಟ ನಿರಂಜನ್ ಸುಧೀಂದ್ರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳತಿ ಸಂಜನಾ ಬಿ. ರಾಜ್‌ಗೆ ಸೋಮವಾರ ಬೆಳಗಿನ ಶುಭ ಮುಹೂರ್ತದಲ್ಲಿ ನಿರಂಜನ್ ಮಾಂಗಲ್ಯಧಾರಣ ಮಾಡಿದರು. ಅದ್ದೂರಿಯಾಗಿ ವಿವಾಹ ಸಮಾರಂಭ ನೆರವೇರಿದೆ. ಸ್ಯಾಂಡಲ್‌ವುಡ್ ನಟರಾದ ರವಿಚಂದ್ರನ್, ಶ್ರೀಮುರಳಿ, ಅವಿನಾಶ್, ನಟಿ ಸುಧಾರಾಣಿ, ಮಾಲಾಶ್ರೀ ಸೇರಿ ಹಲವು ಕಲಾವಿದರು ಶುಭ ಸಮಾರಂಭದಲ್ಲಿ ಪಾಲ್ಗೊಂಡು, ನೂತನ ವಧು-ವರರಿಗೆ ಶುಭ ಕೋರಿದ್ದಾರೆ. ಸದ್ಯ ವಿವಾಹದ ಫೋಟೋಗಳು ವೈರಲ್ ಆಗುತ್ತಿವೆ. ಅದಕ್ಕೂ ಮುನ್ನ ಭಾನುವಾರ ಬೆಳಗ್ಗೆ ಅರಿಶಿಣ ಶಾಸ, ಸಂಜೆ ಅರತಕ್ಷತೆ ನಡೆದಿತ್ತು. ಇನ್ನು ನಿರಂಜನ್ ಸುಧೀಂದ್ರ ಸ್ಯಾಂಡಲ್‌ವುಡ್‌ನಲ್ಲಿ ಕಲಾವಿದನಾಗಿ ಗುರುತಿಸಿಕೊಂಡಿದ್ದು, ‘ಸೀತಾ ಪಯಣ’, ‘ಸ್ಪಾರ್ಕ್’ ಚಿತ್ರಗಳಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಕಳೆದ ಮೇ 25ರಂದು ಖಾಸಗಿ ರೆಸಾರ್ಟ್‌ನಲ್ಲಿ ಸಂಜನಾ ಜತೆ ನಿಶ್ಚಿತಾರ್ಥ ನೆರವೇರಿತ್ತು.

ಎಂಗೇಜ್ ಆದ ತೇಜಾ ಸಜ್ಜಾ

ದಕ್ಷಿಣ ಭಾರತ ಚಿತ್ರರಂಗದಲ್ಲಿ ಶುಭ ಮುಹೂರ್ತಕ್ಕೆ ಘಳಿಗೆ ಕೂಡಿಬಂದಿದೆ. ಇತ್ತೀಚೆಗಷ್ಟೇ ಅನಿರುದ್ಧ್- ಕಾವ್ಯಾ, ಪ್ರಿಯಾ ಭವಾನಿ ಶಂಕರ್-ರಾಜ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬೆನ್ನಲ್ಲೇ ಮತ್ತೊಬ್ಬ ತೆಲುಗು ಯುವ ನಟ ಹಸೆಮಣೆ ಏರಲು ಸಜ್ಜಾಗುತ್ತಿದ್ದಾರೆ. ಸೋಮವಾರ ‘ಹನು-ಮ್ಯಾನ್’, ‘ಮಿರಾಯ್’ ಖ್ಯಾತಿಯ ನಟ ತೇಜಾ ಸಜ್ಜಾರ ನಿಶ್ಚಿತಾರ್ಥ ನೆರವೇರಿದೆ. ಅಮೆರಿಕದಲ್ಲಿ ಸ್‌ಟಾವೇರ್ ಉದ್ಯೋಗಿಯಾಗಿರುವ ಮೌರ್ಯ ಜತೆ ‘ಹನು-ಮ್ಯಾನ್’ ಉಂಗುರು ಬದಲಾಯಿಸಿಕೊಂಡಿದ್ದಾರೆ. ತೆಲಂಗಾಣ ರಾಜ್ಯಪಾಲ ಶಿವಪ್ರತಾಪ್ ಶುಕ್ಲಾ ಸೇರಿ ರಾಜಕೀಯ ಗಣ್ಯರು, ಟಾಲಿವುಡ್ ಕಲಾವಿದರು ಸೇರಿ ಹಲವರು ಪಾಲ್ಗೊಂಡು ನವಜೋಡಿಗೆ ಶುಭ ಕೋರಿದ್ದಾರೆ. ತೇಜಾ ಸಜ್ಜಾ ‘ಜೊಂಬಿ ರೆಡ್ಡಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.