13ತ್ ಫ್ಲೋರ್ ಭಾಗ್ಯಲಕ್ಷ್ಮೀ'
13th Floor Bhagyalakshmi - "ಜೂನಿ', 2024ರಲ್ಲಿ ಬಿಡುಗಡೆಯಾಗಿದ್ದ ರೊಮ್ಯಾಂಟಿಕ್ ಡ್ರಾಮಾ. ಚೊಚ್ಚಲ ನಿರ್ದೇಶನದಲ್ಲಿಯೇ ವೈಭವ್ ಮಹಾದೇವ್ ಭರವಸೆ ಮೂಡಿಸಿದ್ದರು. ಇದೀಗ ಎರಡು ವರ್ಷಗಳ ಗ್ಯಾಪ್ ನಂತರ ಅವರು ಕಿರುಚಿತ್ರದೊಂದಿಗೆ ವಾಪಸ್ಸಾಗಿದ್ದಾರೆ. ಹೆಸರು "13ತ್ ಫ್ಲೋರ್ ಭಾಗ್ಯಲಕ್ಷ್ಮೀ'. ಹಾರರ್ ಕಾಮಿಡಿ ಜಾನರ್ ಕಿರುಚಿತ್ರದ ಬಗ್ಗೆ ವೈಭವ್, ""ಜೂನಿ' ಬಳಿಕ ಒಂದು ವರ್ಷ ನಾನು ಎಐ ಕಂಪನಿಯೊಂದರಲ್ಲಿ ಮೈಕ್ರೋ ಡ್ರಾಮಾ, ಮಿನಿ ಸಿರೀಸ್ ಮಾಡುತ್ತಿದ್ದೆ. ಒಂದು ಆ್ಯಪ್ಗಾಗಿ ಪ್ರತಿದಿನ ಒಂದೊಂದು ಸಂಚಿಕೆ ಮಾಡಿಕೊಡುವುದು ನನ್ನ ಜವಾಬ್ದಾರಿಯಾಗಿತ್ತು. ಈಗ್ಗೆ ಆರು ತಿಂಗಳ ಹಿಂದೆ ಮತ್ತೆ ಸಿನಿಮಾ ಮಾಡುವ ತುಡಿತ ಉಂಟಾಯಿತು. ಈ ಬಾರಿ ಬೇರೆ ಜಾನರ್ ಪ್ರಯೋಗ ಮಾಡಬೇಕು ಅಂತನ್ನಿಸಿ, ಸಿದ್ಧತೆ ಪ್ರಾರಂಭಿಸಿದೆ. ಕೆಲ ವರ್ಷಗಳ ಹಿಂದೆ ಪತ್ರಿಕೆಯೊಂದರಲ್ಲಿ ಕೆಲಸದ ಒತ್ತಡದಿಂದಾಗಿ ಐಟಿ ಉದ್ಯೋಗಿ 16ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಸುದ್ದಿ ಓದಿದ್ದೆ. ಅದೇ ಸಾಲಿನಲ್ಲಿ ಹಾರರ್ ಕಾಮಿಡಿ ಕಥೆ ಮಾಡಿಕೊಂಡೆ. 13 ಸಂಖ್ಯೆಯನ್ನು ಹಲವರು ದುರಾದೃಷ್ಟಕರ ಎಂದು ಭಾವಿಸುತ್ತಾರೆ. ಹೀಗಾಗಿ ಶೀರ್ಷಿಕೆಯಲ್ಲಿ 16ರ ಬದಲಾಗಿ 13 ಬಳಸಿದ್ದೇವೆ. ಸಿನಿಮಾ ಮಾಡುವ ಮುನ್ನ ಕಿರುಚಿತ್ರ ಮಾಡಲು ನಿರ್ಧರಿಸಿ, 11 ನಿಮಿಷಗಳ ಶಾರ್ಟ್ ಫಿಲಂ ಮಾಡಿದ್ದೇವೆ. ಇದೇ ಫೆ.1 3ರಂದು ""13ತ್ ಫ್ಲೋರ್ ಭಾಗ್ಯಲಕ್ಷ್ಮೀ'' ಯೂಟ್ಯೂಬ್ನಲ್ಲಿ ರಿಲೀಸ್ ಆಗಲಿದೆ' ಎಂದು ಮಾಹಿತಿ ನೀಡುತ್ತಾರೆ.
"ಎ' ಪ್ರಮಾಣಪತ್ರ ಪಡೆದ ಸಿನಿಮಾಗಳಲ್ಲಿ ವಯಸ್ಕರಿಗೆ ಮಾತ್ರ ಎನ್ನುವುದು ಸಾಮಾನ್ಯ. ಆದರೆ, ಇತ್ತೀಚೆಗೆ "ಅನಿಮಲ್', "ಬಾಘೀ 4' ಸೇರಿ ಕೆಲ ಚಿತ್ರಗಳ ಟ್ರೇಲರ್ಗಳನ್ನೂ ವಯಸ್ಕರಿಗೆ ಮಾತ್ರ ವೀಸಲು ಅವಕಾಶ ನೀಡಲಾಗಿತ್ತು. ರಕ್ತಸಿಕ್ತ ದೃಶ್ಯಗಳು, ಕ್ರೌರ್ಯ, ಹಿಂಸಾಚಾರ ಹೆಚ್ಚಿದ್ದ ಕಾರಣ ಯೂಟ್ಯೂಬ್ನಲ್ಲಿ ಲಾಗ್ಇನ್ ಆಗಿಯೇ ಟ್ರೇಲರ್ ನೋಡಬೇಕಿತ್ತು. ಅದೇ ರೀತಿ ಇದೀಗ "13ತ್ ಫ್ಲೋರ್ ಭಾಗ್ಯಲಕ್ಷ್ಮೀ' ಕಿರುಚಿತ್ರವೂ ವಯಸ್ಕರಿಗೆ ಮಾತ್ರ ನೋಡಬಹುದಾಗಿದೆ. "ಖುದ್ದು ನಾನೂ ನನ್ನ ಕಂರ್ಟ್ ಜೋನ್ನಿಂದ ಹೊರಬಂದು ಮಾಡಿರುವ ಚಿತ್ರವಿದು. ಅತಿರೇಕದ ಹಾರರ್ ಸನ್ನಿವೇಶಗಳಿರುವ ಕಾರಣ ಮಕ್ಕಳು ನೋಡದಿರಲೆಂದೇ ಈ ತೀರ್ಮಾನ ಮಾಡಿದ್ದೇವೆ' ಎನ್ನುತ್ತಾರೆ ವೈಭವ್.